ಬೆಂಗಳೂರು ಗ್ರಾಮಾಂತರ

ಮುತ್ಯಾಲಮಡು ಯೋಜನೆ ಜಾರಿಗೆ ತನ್ನಿ

Published On :

ಕ.ಪ್ರ.ವಾರ್ತೆ ಆನೇಕಲ್ಲು ಜು. 22
ತಾಲೂಕಿನಾದ್ಯಂತ ಕುಡಿಯುವ ನೀರಿಗೆ ತುಂಬಾ ತೊಂದರೆಯಿದ್ದು, ಕೆಲವೆಡೆ ಟ್ಯಾಂಕರ್ಗಳಲ್ಲಿ ನೀರು ಪೂರೈಸಲಾಗುತ್ತಿದೆ. ಕೆಲ ಹಳ್ಳಿಗಳಲ್ಲಿ ಕೊಡ ನೀರಿಗೆ 50 ಪೈಸೆಯಿಂದ 1 ಪಡೆಯುತ್ತಿದ್ದಾರೆ. ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಮುತ್ಯಾಲಮಡು ನೀರಿನ ಯೋಜನೆಯನ್ನು ಶೀಘ್ರ ಜಾರಿಗೆ ತರಬೇಕೆಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವ ಮನವಿ ಮಾಡಿದ್ದಾರೆ.
ವೇದಿಕೆಯ ರಾಜ್ಯ ಸಮಿತಿ ಹಾಗೂ ತಾಲೂಕು ಮುಖಂಡರೊಡನೆ ಶಾಸಕರ ಗೃಹ ಕಚೇರಿಗೆ ನಿಯೋಗ ತೆರಳಿ, ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಸಾವಿರ ಅಡಿ ಕೊರೆದರೂ ನೀರು ಲಭ್ಯವಿಲ್ಲವಾಗಿದೆ. ಅಕಸ್ಮಾತ್ ನೀರು ದೊರೆತರೂ ಫ್ಲೋರೈಡ್ಯುಕ್ತ ನೀರಾಗಿರುವುದರಿಂದ ಜನ ಹಾಗೂ ಜಾನುವಾರುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು.
ಮುತ್ಯಾಲಮಡು ತೊರೆ ಹಲವಾರು ಶತಮಾನಗಳಿಂದ ಹರಿಯುವ ಮೂಲಕ ಪ್ರಮುಖ ನೀರಿನ ಸೆಲೆಯಾಗಿದೆ. ಈ ನೀರು ವ್ಯರ್ಥವಾಗಿ ಕಾಡಿನ ಮೂಲಕ ಹರಿದು ತಮಿಳುನಾಡು ಸೇರುತ್ತಿದೆ. ಶಂಖು ಚಕ್ರ, ಆನೆ ಮಡು ಹಾಗೂ ಕತ್ತೆ ಮಡು ಎಂಬ ಸ್ಥಳದಲ್ಲಿ ವಿಶಾಲ ಭೂ ಪ್ರದೇಶವಿದ್ದು, ಚೆಕ್ ಡ್ಯಾಂ ನಿರ್ಮಿಸಿದಲ್ಲಿ ಯಥೇಚ್ಛ ನೀರು ಸಂಗ್ರಹವಾಗುತ್ತದೆ. ಕುಡಿಯುವ ನೀರಿನ ಜೊತೆಗೆ ಕೃಷಿ ಚಟುವಟಿಕೆಯೂ ದುಪ್ಪಟ್ಟಾಗುತ್ತದೆ ಎಂದರು.
ತಾಲೂಕು ಕೇಂದ್ರದ ಅಭಿವೃದ್ಧಿ: ತಾಲೂಕು ಕೇಂದ್ರವಾದ ಆನೇಕಲ್ ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಾವಲು ಸಮಿತಿಗೆ ಮನವಿ ಸಲ್ಲಿಸಿದ್ದು, ಗಡಿ ಪ್ರದೇಶದ ಯೋಜನೆಯಡಿ ಭವನ ನಿರ್ಮಾಣಕ್ಕೆ ಅನುದಾನ ಪಡೆಯಬೇಕೆಂದರು.
ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆ ಹಾಗೂ ಆಚರಣೆ ವರ್ಷದಲ್ಲಿ ಕನ್ನಡ ಭಾಷೆ, ಗಡಿ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಅಗ್ರಹಿಸಿದ ಅವರು, ಕನ್ನಡ ಮಾಧ್ಯಮ ಬೋಧನೆಗೆ ಪರವಾನಗಿ ಪಡೆದು ಇಂಗ್ಲಿಷ್ ಬೋಧಿಸುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ವಹಿಸಬೇಕೆಂದು ಕೋರಿದ ಅವರು, ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ, ಉದ್ಯಾನವನದಂತಹ ಪ್ರಗತಿಯುಕ್ತ ಕಾಮಗಾರಿ ನಡೆಸಬೇಕೆಂದರು.
ಶಾಸಕ ಬಿ. ಶಿವಣ್ಣ ಮನವಿ ಸ್ವೀಕರಿಸಿ ಮಾತನಾಡಿ, ತಾಲೂಕಿಗೊಂದು ಸರ್ಕಾರಿ ಐಟಿಐ ಯೋಜನೆಯಡಿ ಮಂಜೂರಾತಿ ಹಂತದಲ್ಲಿದೆ. ಮಾದಪ್ಪನಹಳ್ಳಿ ಏತ ನೀರಾವರಿ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು.
ಅತ್ತಿಬೆಲೆ ಸರ್ಕಾರಿ ಶಾಲೆಗೆ 100 ವರ್ಷ ತುಂಬಿದ್ದು, ಶತಮಾನೋತ್ಸವ ನೆನಪಿನಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಉಳಿದ ಬೇಡಿಕೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚಿಸಿ ಅದ್ಯತೆಯ ಮೇಲೆ ಗಮನ ಹರಿಸಲಾಗುವುದು ಎಂದರು.
ನಿಯೋಗದಲ್ಲಿ ರಾಜ್ಯ ಉಪಾಧ್ಯಕ್ಷ ಮೆಳೆನಲ್ಲಸಂದ್ರದ ಅಶ್ವತ್ಥ, ರಾಜ್ಯ ಕಾರ್ಯದರ್ಶಿ ಕೋದಂಡಮೂರ್ತಿ, ವಿ.ಕೆ. ಬಷೀರ್, ಕೆ.ಪಿ. ನಾರಾಯಣಸ್ವಾಮಿ, ಶಿವಸುಬ್ರಮಣಿ, ಕುಮಾರ್, ರಾಜು, ನವೀನ್ ಇದ್ದರು.

ಚೆಸ್ ಪಂದ್ಯಾವಳಿಗೆ ಚಾಲನೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜು. 22

ಮಕ್ಕಳ ಮಾನಸಿಕ ಬೆಳವಣಿಗೆಗೆ ದೇಸಿ ಕ್ರೀಡೆಗಳು ಹೆಚ್ಚಿನ ರೀತಿಯಲ್ಲಿ ನೆರವಾಗಲಿವೆ. ಚೆಸ್ ಬೌದ್ಧಿಕ ಬೆಳವಣಿಗೆ ಮತ್ತು ಚುರುಕುತನ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ದೊಡ್ಡಬಳ್ಳಾಪುರ ಚೆಸ್ ಅಸೋಸಿಯೇಷನ್ನಿಂದ ನಡೆದ ತಾಲೂಕು ಮಟ್ಟದ 2 ದಿನಗಳ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಏಕಾಗ್ರತೆ ಮತ್ತು ಸಂಯಮ ಬೆಳೆಸಲು ಚೆಸ್ ಅನುಕೂಲಕರ. ಇದಕ್ಕೆ ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ದೃಢತೆ ಮುಖ್ಯ ಎಂದರು.
ಹಿರಿಯ ವಕೀಲ ಎಸ್. ರುದ್ರಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಜೆ.ರಾಜೇಂದ್ರ, ರಾಷ್ಟ್ರೀಯ ಚೆಸ್ ಆಟಗಾರ ಮಹೇಂದ್ರ, ಶ್ರೀಪಾದ ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಜಿ.ಅಮರನಾಥ್, ವಕೀಲ ಮನೋಹರ ಕಾಳೆ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮುಖಂಡ ಟಿ.ಜಿ. ಮಂಜುನಾಥ್, ತಾಲೂಕು ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಸನಘಟ್ಟ ರವಿ, ಆರ್ಎಲ್ಜೆಐಟಿ ದೈಶಿ ಸಂಯೋಜಕ ಮಲ್ಲೇಶ್, ರಮೇಶ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.