ಬಿಡದಿಯಲ್ಲಿ ಭೂ ಸ್ವಾಧೀನ ಸ್ಥಗಿತ
ವಿಧಾನಸಭೆ: ರಾಮನಗರ ಜಿಲ್ಲೆ ಬಿಡದಿಯಲ್ಲಿ ಉಪನಗರ ಯೋಜನೆಗಾಗಿ ಕೆಐಎಡಿಬಿ ಸೇರಿದಂತೆ ಯಾವುದೇ ಪ್ರಾಧಿಕಾರದಿಂದ ಭೂಸ್ವಾಧೀನ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯಿದೆ ತಿದ್ದುಪಡಿ ನಂತರ ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸಭೆಯಲ್ಲಿ ಎಚ್.ಸಿ. ಬಾಲಕೃಷ್ಣ ಅವರ ಗಮನಸೆಳೆವ ಸೂಚನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, ಬಿಡದಿ ಸಮಗ್ರ ಉಪನಗರ ಪ್ರದೇಶವನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದ್ದು, ಅಲ್ಲಿ ಯಾವುದೇ ಅಭಿವೃದ್ಧಿಗೆ ಅನುಮೋದನೆ ನೀಡಲಾಗುತ್ತಿಲ್ಲ ಎಂದರು. ಇದು ರೈತರಿಗೆ ತೊಂದರೆ ಆಗಿದ್ದು, ಕೆಂಪು ಬಣ್ಣದಲ್ಲಿ ಗುರುತಿಸಿರುವುದನ್ನು ಕೈಬಿಡಬೇಕು. ಕೃಷಿ ಅಥವಾ ಹಳದಿ ವಲಯ ಎಂದು ಘೋಷಿಸಬೇಕು ಎಂದು ಬಾಲಕೃಷ್ಣ ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ನೆಲಮಂಗಲದಲ್ಲಿ ರಕ್ತದಾನ ಶಿಬಿರ
ನೆಲಮಂಗಲ: ಪಟ್ಟಣದ ಗುರುಭವನದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಜುಲೈ 26ರ ಶುಕ್ರವಾರದಂದು ಬೆಳಿಗ್ಗೆ 9-00 ರಿಂದ ಸಂಜೆ 4-00 ಗಂಟೆ ವರೆಗೆ ಚಂದ್ರಶೇಖರ್ ಆಜಾದ್ ರವರ ಹುಟ್ಟುಹಬ್ಬ ಹಾಗೂ ಕಾರ್ಗಿಲ್ ವಿಜಯೋತ್ಸವದ ನೆನಪಿನಲ್ಲಿ ಆಯೋಜಿಸಿರುವ 4ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಕೆ.ಪಿ.ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊಪೆಡ್ಗೆ ಕಾರು ಡಿಕ್ಕಿ: ವ್ಯಕ್ತಿ ಸಾವು
ನೆಲಮಂಗಲ: ಬೆಂಗಳೂರು-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 48ರ ಮಹದೇವಪುರ ಬಳಿ ಕಾರೊಂದು ಅತಿ ವೇಗವಾಗಿ ಬಂದು ಟಿ.ವಿ.ಎಸ್ ಮೊಪೆಡ್ಗೆ ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ನಲ್ಲಿದ್ದ ಒಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. ಮೃತನನ್ನು ಸ್ಥಳೀಯ ಭೂಸಂದ್ರದ ಕೃಷ್ಣಪ್ಪ(40) ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿ ಹೆಸರು ತಿಳಿದು ಬಂದಿಲ್ಲ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವೆಸಗಿದ ಕಾರು ಚಾಲಕ ಕಾರಿನ ಸಹಿತ ಪರಾರಿಯಾಗಿದ್ದು, ಈ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗಂಗಾಧರಯ್ಯ
ರಾಮನಗರ: ರೈತ ಗಂಗಾಧರಯ್ಯ (85) ಅವರು ಅನಾರೋಗ್ಯದಿಂದ ಬುಧವಾರ ಮಧ್ಯಾಹ್ನ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಮಾರು ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬುಧವಾರ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಗಂಗಮ್ಮ, ಒಬ್ಬ ಪುತ್ರಿ, ನಾಲ್ಕು ಮಂದಿ ಗಂಡು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ಇದ್ದರು. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಕೊತ್ತೀಪುರದಲ್ಲಿ ಗುರುವಾರ ನೆರವೇರಿತು. ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಮುಖಂಡ ಮರಿದೇವರು ಸೇರಿದಂತೆ ನೂರಾರು ಮಂದಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

