ತಿಪ್ಪಗೊಂಡನಹಳ್ಳಿ ಜಲಾಶಯ ತೀರಾ ಖಾಲಿ
-ತಿರುಮಲೆ ಶ್ರೀನಿವಾಸ್
ಮಾಗಡಿ: ಆಲಮಟ್ಟಿ, ಕಬಿನಿ, ಹಾರಂಗಿ ಜಲಾಶಯಗಳು ಭರ್ತಿಯಾಗಿ ಭೋರ್ಗರೆಯುತ್ತಿವೆ. ಕಾವೇರಿಗೂ ಮೊದಲೇ ಬೆಂಗಳೂರಿಗೆ ನೀರುಣಿಸುತ್ತಿದ್ದ ಪ್ರಸಿದ್ಧ ತಿಪ್ಪಗೊಂಡನಹಳ್ಳಿ ಜಲಾಶಯ ಮಾತ್ರ ಖಾಲಿಯಾಗಿದೆ. ನೀರಿನ ಪೂರೈಕೆ ಮಾಡುವ ಪಂಪ್ಗಳು ನಿಶಬ್ಧಗೊಂಡಿವೆ. ಸಿಬ್ಬಂದಿ ಕೈಗೆ ಕೆಲಸವಿಲ್ಲದಾಗಿದೆ. ಸಿಬ್ಬಂದಿಯಿಲ್ಲದೆ ಬಹುತೇಕ ವಸತಿ ಗೃಹಗಳು ವಿನಾಶದ ಅಂಚಿನಲ್ಲಿವೆ. ಹೀಗೆ ಮುಂದುವರಿದರೆ ತಿಪ್ಪಗೊಂಡನಹಳ್ಳಿ ಜಲಾಶಯ ಕುರುಚಲು ಗಿಡ ಬೆಳೆದು ಕಾಡಾಗುವ ಕಾಲ ದೂರವಿಲ್ಲ.
1933 ರಲ್ಲಿ ದಿವಾನ್ ಶೇಷಾದ್ರಿ ಅಯ್ಯರ್ ಅವರು ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರು ನಗರಕ್ಕೆ ನೀರು ಪೂರೈಸುವ ಯೋಜನೆ ಆರಂಭಿಸಿದ್ದರು. ಈ ಜಲಾಶಯವನ್ನು ಚಾಮರಾಜಸಾಗರ ಎಂಬ ಹೆಸರಿನಿಂದ ಗುರುತಿಸಲಾಯಿತು.
ಹೆಸರುಘಟ್ಟ ಬತ್ತಿ ಹೋದ ಕಾರಣ ಆಗಿನ ಬ್ರಿಟಿಷ್ ಆಡಳಿತ ಪರ್ಯಾಯ ನೀರಿನ ಅಚ್ಚುಕಟ್ಟು ಪ್ರದೇಶವನ್ನು ಪತ್ತೆ ಮಾಡಲು ಸರ್.ಎಂ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ತಿಪ್ಪಗೊಂಡನಹಳ್ಳಿ ಕೆರೆಯನ್ನು ಶಿಪಾರಸು ಮಾಡಿ ಪ್ರತಿ ದಿನ ನಗರಕ್ಕೆ 27 ದಶಲಕ್ಷ ಲೀಟರ್ ನೀರನ್ನು ಪೂರೈಕೆ ಮಾಡುವ ಯೋಜನೆ ಸಿದ್ದಪಡಿಸಿತು. ಕಾಲ ಕ್ರಮೇಣ ಈ ಜಲಾಶಯದಿಂದ 135 ದಶಲಕ್ಷ ಲೀಟರ್ ಪೂರೈಕೆ ಮಾಡುವ ಸಾಮರ್ಥ್ಯ ಪಡೆದುಕೊಂಡಿತು. ನಿರ್ಲಕ್ಷ್ಯಕ್ಕೊಳಗಾಗಿರುವ ಜಲಾಶಯವನ್ನು ಈಗಿರುವ ಇರುವ ಎಂಜಿನಿಯರ್ಗಳು ಸಂಬಂಧಪಟ್ಟ ನೀರಾವರಿ ಸಚಿವರ ಗಮನಕ್ಕೆ ತಂದಿದ್ದರೆ ಅಭಿವೃದ್ಧಿ ಪಡಿಸಬಹುದಿತ್ತು. ಸುಮಾರು 75 ಅಡಿ ನೀರು ಶೇಖರಣೆಯಾಗುವ ಡ್ಯಾಂನಲ್ಲೀಗ ಕೇವಲ 10 ರಿಂದ 12 ಅಡಿಗಳಷ್ಟು ನೀರು ಶೇಖಣೆಯಾಗಿದೆ.
ಅರ್ಕಾವತಿ, ಕುಮದ್ವತಿ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕಡಿಮೆಯಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಮತ್ತೊಂದೆಡೆ ರಾಜ ಕಾಲುವೆಗಳು ಒತ್ತುವರಿಯಾಗಿ ಮುಚ್ಚಿಹೋಗಿರುವ ಕಾರಣ ಒಳ ಹರಿವಿಲ್ಲದೆ ಜಲಾಶಯ ಮಾತ್ರ ಖಾಲಿ ಖಾಲಿಯಾಗಿದೆ. ಅರ್ಕಾವತಿ, ಕುಮದ್ವತಿ ನದಿಗಳ ಸಂಗಮವೇ ತಿಪ್ಪಗೊಂಡನಹಳ್ಳಿ ಜಲಾಶಯ. ಜಲಾಶಯದ ಮಧ್ಯೆ ಕಾಣುವ ದೇಗುಲವೇ ಸಂಗಮೇಶ್ವರ ಶಿಥಿಲ ದೇಗುಲ. ಈ ದೇಗುಲ ನೀರಿನ ಅಳತೆ ಮಾಪನವಿದ್ದಂತೆ. ಸಮುದ್ರದ ನಂಟು, ಉಪ್ಪಿಗೆ ಬರ ಎಂಬಂತೆ ಜಲಾಶಯದ ಬಳಿಯೇ ಸಿಬ್ಬಂದಿ ವಾಸ್ತವ್ಯವಿದ್ದರೂ ಕುಡಿಯುವ ನೀರಿನ ಬರ ಎದುರಿಸುತ್ತಿದ್ದಾರೆ. ಬೆಂಗಳೂರಿನಿಂದಲೇ ಕಾವೇರಿ ನೀರನ್ನು ತರಿಸಿಕೊಳ್ಳುವಂತ ಪರಿಸ್ಥಿತಿ ಕಾಣುತ್ತಿದ್ದೇವೆ.
2012 ನವೆಂಬರ್ 15 ರಿಂದಲೇ ಬೆಂಗಳೂರಿಗೆ ನೀರಿನ ಪೂರೈಕೆ ನಿಂತಿದೆ. ಜಲಾಶಯ ದುರಸ್ತಿಯಾಗದ ಹೊರತು ಜಲಾಶಯದಲ್ಲಿ ನೀರು ಸಂಗ್ರಹವಾಗದು. ಜಲಾಶಯದಲ್ಲಿ ನೀರು ಸಂಗ್ರಹ ಮಾಡಬೇಕು ಎಂಬ ಘೋಷಣೆಯೊಂದಿಗೆ 2012 ರಲ್ಲಿಯೇ ಕೆರೆಯಿಂದ ಬೆಂಗಳೂರಿಗೆ ನೆ.ಲ.ನರೇಂದ್ರಬಾಬು ನೇತೃತ್ವದಲ್ಲಿ ಪಾದಯಾತ್ರೆ ಸಹ ನಡೆದಿತ್ತು. ಆದರೂ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ ಈ ಜಲಾಶಯ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಜಲಾಶಯ ಕಾಡಾಗುವುದರಲ್ಲಿ ಸಂಶಯವೇ ಇಲ್ಲ.
ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿ ಹೋಗಿದೆ. ಈಗ ಜಲಾಶಯಕ್ಕೆ ನೀರು ಹರಿಯದೆ ಜಲಾಶಯದಲ್ಲಿ ಸಂಗ್ರಹವಾಗುತ್ತಿಲ್ಲ. ಸರ್.ಎಂ. ವಿಶ್ವೇಶ್ವರಯ್ಯ ಅವರ ಆಶಾಗೋಪುರದಂತಿದ್ದ ಟಿ.ಜಿ. ಹಳ್ಳಿ ಜಲಾಶಯ ದಿನೇ ದಿನೆ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ.
ರಾಜಕಾರಣಿಗಳ ಪೊಳ್ಳು ಭರವಸೆ: ಕಳೆದ 10 ವರ್ಷಗಳಿಂದಲೂ ರಾಜಕಾರಣಿಗಳು ಹೇಮಾವತಿ, ನೇತ್ರಾವತಿ, ಎತ್ತಿನಹೊಳೆ ಯೋಜನೆ ತಂದು, ತಿಪ್ಪಗೊಂಡನಹಳ್ಳಿ ಕೆರೆಗೆ ನೀರು ತುಂಬಿಸುವುದಾಗಿ ಮಾರುದ್ದ ಭಾಷಣ ಮಾಡುತ್ತಾ ರಾಜಕೀಯ ಮಾಡಿಕೊಂಡು ಬಂದಿದ್ದಾಯಿತು.
ಕೇವಲ ಮತ ಬ್ಯಾಂಕ್ಗಾಗಿ ರಾಜಕೀಯ ತಂತ್ರ, ಪ್ರತಿ ತಂತ್ರ, ಬರೀ ಪೊಳ್ಳು ಭರವಸೆ ಎಂದು ಜನತೆ ಈಗಾಗಲೇ ಗೊಣಗಿಕೊಳ್ಳುತ್ತಿದ್ದಾರೆ. ಹೇಮಾವತಿ ಯೋಜನೆ ತಂದೆ ತರುತ್ತೇವೆ ಎಂದು ಹಲವಾರು ಸಂಘಗಳು ರಚನೆಗೊಂಡವು. ಯಾವ ಸಂಘಟನೆಗಳು ಸಹ ಹೇಮಾವತಿ ಯೋಜನೆ ಬಗ್ಗೆ ತಲೆಕಡಿಸಿಕೊಂಡಿದ್ದಿಲ್ಲ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಮಂಡನೆ ವೇಳೆ ಹೇಮಾವತಿ ಯೋಜನೆ ತರಲು ಸರ್ವೆ ಕಾರ್ಯಕ್ಕೆ 5 ಕೋಟಿ ರು ಮೀಸಲಿಟ್ಟಿದ್ದಾರೆ. ಆದಷ್ಟು ಬೇಗ ಸರ್ವೆ ಕಾರ್ಯ ಮುಗಿಸಿ, ಯೋಜನೆ ಅನುಷ್ಠಾನಗೊಳ್ಳಬೇಕು. ಬರಿದಾಗಿರುವ ಜಲಾಶಯಕ್ಕೆ ಹೇಮಾವತಿಯೋ ಎತ್ತಿನ ಹೊಳೆಯೋ, ನೇತ್ರಾವತಿಯೋ ಆದಷ್ಟು ಬೇಗ ನೀರು ತುಂಬಿಸುವ ಕೆಲಸ ಸರ್ಕಾರ ಮಾಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

