ಕಾವೇರಿ ಭವನದಿಂದ ಹೊಸ ಬಸ್ಗಳ ಸಂಚಾರಕ್ಕೆ ಚಾಲನೆ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಜೂ. 3
ದೊಡ್ಡಬಳ್ಳಾಪುರ ನಗರ ಬಸ್ ನಿಲ್ದಾಣ ಮತ್ತು ಬೆಂಗಳೂರಿನ ಕಾವೇರಿಭವನ ಮಾರ್ಗದಲ್ಲಿ ಸಂಚರಿಸುವ 4 ಹೊಸ ಕೆಎಸ್ಆರ್ಟಿಸಿ ಬಸ್ಸುಗಳಿಗೆ ಸೋಮವಾರ ಬೆಳಗ್ಗೆ ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ಬಸ್ ಘಟಕದಿಂದ ಈ ಹೊಸ ಬಸ್ಸುಗಳ ಸೇವೆ ಆರಂಭಿಸಲಾಗಿದ್ದು, ಈಗಿರುವ ಬಸ್ಸುಗಳ ಜೊತೆಯಲ್ಲಿ ಹೆಚ್ಚುವರಿಯಾಗಿ ಈ ಬಸ್ಸುಗಳು ಸಂಚರಿಸಲಿವೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಬಸ್ಸುಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜನದಟ್ಟಣೆ ಇರುವ ಸಂದರ್ಭಗಳಲ್ಲಿ ಹೆಚ್ಚಿನ ಬಸ್ ಸೇವೆ ಅಗತ್ಯ ಎಂದು ವಿದ್ಯಾರ್ಥಿಗಳು, ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಈ ವ್ಯವಸ್ಥೆ. ವಿಧಾನಮಂಡಲ ಅಧಿವೇಶನ ಮುಗಿದ ನಂತರ ಕೆಎಸ್ಆರ್ಟಿಸಿ ವಿಭಾಗೀಯ ಮತ್ತು ಘಟಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ತಾಲೂಕಿನ ಗ್ರಾಮಾಂತರ ಪ್ರದೇಶದ ಹಲವು ಗ್ರಾಮಗಳಿಗೆ ಹೊಸ ಬಸ್ಸುಗಳ ಸಂಚಾರ ಆರಂಭಿಸಲು ಯೋಜನೆ ರೂಪಿಸಲಾಗಿದೆ. ದೊಡ್ಡಬಳ್ಳಾಪುರ ಘಟಕದಿಂದ ವಿವಿದೆಡೆಗೆ ಬಸ್ ಸಂಪರ್ಕ ಕಲ್ಪಿಸುವ ಮಾರ್ಗಗಳ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.
ಬಸ್ಗಳು ಮಾಯವಾಗದಿರಲಿ: ದೊಡ್ಡಬಳ್ಳಾಪುರ-ಕಾವೇರಿಭವನ, ದೊಡ್ಡಬಳ್ಳಾಪುರ-ಕೆಂಪೇಗೌಡ ಬಸ್ ನಿಲ್ದಾಣದ ನಡುವೆ ಈ ಹಿಂದೆ ಸಂಚಾರ ಆರಂಭಿಸಿದ್ದ ಹಲವು ಬಸ್ಸುಗಳು ಈಗ ಈ ಮಾರ್ಗದಿಂದ ಕಾಣೆಯಾಗಿವೆ.
ಉದ್ಘಾಟನೆ ಮತ್ತು ಕೆಲವು ದಿನಗಳು ಮಾತ್ರ ಸಂಚರಿಸಿ ಮಾಯವಾಗುವ ಈ ಪವಾಡ ದೊಡ್ಡಬಳ್ಳಾಪುರ ಬಸ್ ಡಿಪೋದಲ್ಲಿ ಹಲವು ವರ್ಷಗಳ ಹಿಂದಿನಿಂದ ನಡೆಯುತ್ತಿದೆ. ಕೇವಲ ನಾಗರಿಕರನ್ನು ಮೆಚ್ಚಿಸಲು ಮಾತ್ರ ಬಸ್ಗಳ ಪ್ರದರ್ಶನವಾಗದೆ, ಈ ಮಾರ್ಗದಲ್ಲಿ ನಿರಂತರ ಬಸ್ ಸಂಚಾರ ನಡೆಯುವಂತೆ ಶಾಸಕರು ಡಿಪೋ ಮತ್ತು ವಿಭಾಗೀಯ ಅಧಿಕಾರಿಗಳಿಗೆ ಸೂಚನೆ ಕೊಡಬೇಕು ಎಂಬ ಆಗ್ರಹ ನಾಗರಿರಿಂದ ಕೇಳಿಬಂತು.
ಅದೇ ರೀತಿ ಬೆಳಗ್ಗೆ 7ರಿಂದ 9 ಮತ್ತು ಸಂಜೆ 4ರಿಂದ 8 ಗಂಟೆ ನಡುವೆ ಹೆಚ್ಚಿನ ಬಸ್ಸುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಖಾಸಗಿ ಲಾಭಿ ನಿಲ್ಲಬೇಕು. ಜನಕ್ಕೆ ಸುಗಮ ಸಂಚಾರದ ವ್ಯವಸ್ಥೆಯಾಗಬೇಕು ಎಂಬ ಬೇಡಿಕೆಗಳು ಕೇಳಿಬಂದವು.
ಕೆಎಸ್ಆರ್ಟಿಸಿ ವಿಭಾಗೀಯ ವ್ಯವಸ್ಥಾಪಕ ಪ್ರಸಾದ್, ನಗರಸಭೆ ಪೌರಾಯುಕ್ತ ಚಿಕ್ಕಣ್ಣ, ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ನಗರ ಘಟಕದ ಅಧ್ಯಕ್ಷ ತಿ.ರಂಗರಾಜು, ನಗರ ಖಜಾಂಚಿ ಕೆ.ಜಿ.ಅಶೋಕ್, ಕೇಂದ್ರ ಉಕ್ಕು ಸಚಿವಾಲಯದ ನಿರ್ದೇಶಕ ಸಿ.ಜಿ.ನಾಗೇಶ್, ನಗರಸಭಾ ಸದಸ್ಯ ಕೆ.ಜಿ.ರಘುರಾಂ, ಬಾಬು, ವಿ.ಎಸ್.ರವಿಕುಮಾರ್, ಶಿವಕುಮಾರ್, ವೆಂಕಟರಾಜು ಸೇರಿದಂತೆ ಅನೇಕ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

