ಜಿಲ್ಲಾಡಳಿತದಿಂದ ಅಪಾಯಕಾರಿ ಕಟ್ಟಡ ನಿರ್ಮಾಣ
ಮತ್ತೀಕೆರೆ ಜಯರಾಮ್
ರಾಮನಗರ: ರೈತ ದೇಶದ ಬೆನ್ನೆಲುಬು ಎನ್ನುವ ಘೋಷಣೆ ಇದೆ. ಆಳುವ ವರ್ಗ ಯಾವಾಗಲೂ ರೈತಾಪಿ ವರ್ಗದ ಬಗ್ಗೆಯೇ ಜಪಿಸುತ್ತಿರುತ್ತದೆ. ಹೀಗಿರುವಾಗ ರೈತರಿಗೆ ಆಸರೆಯಾದ ಕೃಷಿ ಇಲಾಖೆಗೆ 2 ಗುಂಟೆ ಜಮೀನು ಮಂಜೂರು ಮಾಡದ ರಾಮನಗರ ಜಿಲ್ಲಾಡಳಿತವು ಇಲ್ಲೊಂದು ಅಪಾಯಕಾರಿ ಮತ್ತು ಅವೈಜ್ಞಾನಿಕ ಕಟ್ಟಡ ನಿರ್ಮಾಣಕ್ಕೆ ಕಾರಣೀಭೂತವಾಗಿದೆ.
ಸುತ್ತಲೂ ಅರಣ್ಯ ಪ್ರದೇಶ, ಗೋಮಾಳ ಸಹಿತ ಸಾಕಷ್ಟು ಸರ್ಕಾರಿ ಜಮೀನು ಕಬಳಿಕೆಯಾಗಿದೆ. ಸರ್ಕಾರಿ ವ್ಯವಸ್ಥೆಯಿಂದಲೇ ನಕಲಿ ದಾಖಲೆ ಸೃಷ್ಟಿಯಾಗಿ, ನೂರಾರು ಎಕರೆ ಸರ್ಕಾರಿ ಜಾಗ ಪರಭಾರೆಯಾದ ಪ್ರಕರಣಗಳು ಸಾಕಷ್ಟಿವೆ. ಇಷ್ಟಾಗಿಯೂ ಕೃಷಿ ಇಲಾಖೆಗೆ ಮಾತ್ರ ಅಂಗೈ ಅಗಲ ಜಾಗ ನೀಡದಿರುವುದು ವಿಪರ್ಯಾಸದ ಸಂಗತಿ.
ಜಾಗವಿಲ್ಲದೆ ಪರದಾಟ: ರಾಮನಗರ ಜಿಲ್ಲೆಗೆ 2 ವರ್ಷದ ಹಿಂದೆಯೇ ಮಣ್ಣು ಪರೀಕ್ಷಾ ಕೇಂದ್ರ ಮಂಜೂರಾಗಿದೆ. ಇದಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಕಟ್ಟಡ ನಿರ್ಮಿಸಿಕೊಳ್ಳಲು ಸೂಕ್ತ ಸ್ಥಳಾವಕಾಶ ಒದಗಿಸುವಂತೆ ಕೃಷಿ ಇಲಾಖೆ ನಾಲ್ಕಾರು ಬಾರಿ ಸಲ್ಲಿಸಿದ ಪ್ರಸ್ತಾವನೆಗೆ ಜಿಲ್ಲಾಡಳಿತ ಸ್ಪಂದಿಸಿಲ್ಲ. ಇದು ಅಪಾಯಕಾರಿ ಕಟ್ಟಡವೊಂದರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ.
ಕೃಷಿಯಂತಹ ಪ್ರಮುಖ ಇಲಾಖೆಗೆ ರಾಮನಗರದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡವಿರುವ ಆವರಣವಷ್ಟೇ ಲಭ್ಯವಿರುವ ಸ್ಥಳಾವಕಾಶ. ಈ ಪರಿಣಾಮ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಇತ್ತೀಚಿನವರೆಗೂ ಬಾಡಿಗೆ ಕಟ್ಟಡದಲ್ಲಿತ್ತು. ಈಚೆಗಷ್ಟೇ ಜಿಲ್ಲಾ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಅಪಾಯಕಾರಿ ಕಟ್ಟಡ: ಮಣ್ಣು ಪರೀಕ್ಷಾ ಕೇಂದ್ರಕ್ಕೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ಕೃಷಿ ಇಲಾಖೆಯು ಎರಡೂವರೆ ದಶಕದ ಹಿಂದಿನ ಸಾಧಾರಣ ಕಟ್ಟಡದ ಮೇಲೆ ಇನ್ನೊಂದು ಅಂತಸ್ತಿನ ಕಟ್ಟಡ ನಿರ್ಮಾಣದ ಅವೈಜ್ಞಾನಿಕ ಕಾಮಗಾರಿಗೆ ಚಾಲನೆ ನೀಡಿದೆ. ಅಧಿಕಾರಿಗಳು ಮಾಡಿಟ್ಟಿರುವ ಅವಾಂತರದಿಂದ ಮುಂದೊಂದು ದಿನ ಅಪಾಯ ಎದುರಾಗುವ ಸಂಭವವಿದೆ.
ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮೇಲೆ ತರಾತುರಿಯ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವಿಷಯದಲ್ಲಿ ಅಧಿಕಾರಿಗಳು ತಾಂತ್ರಿಕತೆಗೆ ಒತ್ತು ನೀಡಿರುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ಸದರಿ ಕಚೇರಿಯ ನೆಲ ಅಂತಸ್ತಿನ ಕಾಮಗಾರಿ 1985ರ ಮೇ 7ರಂದು ಆಗಿನ ಕೃಷಿ ಸಚಿವ ಎಂ.ಪಿ. ಪ್ರಕಾಶ್ ಅವರಿಂದ ಶಂಕುಸ್ಥಾಪನೆಗೊಂಡಿತ್ತು.
1992ರ ಫೆ.3ರಂದು ಅಂದಿನ ಕೃಷಿ ಸಚಿವ ಎನ್.ಚಿಕ್ಕೇಗೌಡ ಅವರಿಂದ ಉದ್ಘಾಟನೆಯಾಗಿತ್ತು.
ಕಟ್ಟಡ ಕಾಮಗಾರಿಯು ಶಂಕುಸ್ಥಾಪನೆಗೊಂಡ 3 ವರ್ಷದಲ್ಲೇ ಬಹುಪಾಲು ಪೂರ್ಣವಾಗಿತ್ತು. ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿ, ಉದ್ಘಾಟನೆ ಆಗುವಷ್ಟರಲ್ಲಿ 4 ವರ್ಷ ಬೇಕಾಯಿತು. ಹೀಗಾಗಿ ಕಟ್ಟಡಕ್ಕೆ 25 ವರ್ಷ ಆಯಸ್ಸು ಮುಗಿದಿದೆ.
ತರಾತುರಿ ಕಾಮಗಾರಿ: ಹಳೆಯ ಕಟ್ಟಡವನ್ನು ನಿರ್ಮಿಸುವಾಗ ಇನ್ನೊಂದು ಅಂತಸ್ತಿನ ನಿರ್ಮಾಣಕ್ಕೆ ಅಗತ್ಯವಿರುವ ಸಾಮರ್ಥ್ಯದ ಪಿಲ್ಲರ್, ಬೀಮ್ಸ್ ಹಾಗೂ ತಳಹದಿ ಹಾಕದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಷ್ಟಾಗಿಯೂ ಮೇಲಂತಸ್ತಿನ ಕಟ್ಟಡಕ್ಕೆ ಹೊಸದಾಗಿ ಪಿಲ್ಲರ್, ಬೀಮ್ ಅಳವಡಿಸುವ ಗೋಜಿಗೆ ಗುತ್ತಿಗೆ ಸಂಸ್ಥೆ ಮುಂದಾಗಿಲ್ಲ.
ಮಣ್ಣು ಆರೋಗ್ಯ ಕೇಂದ್ರ ಸ್ಥಾಪಿಸುವುದಕ್ಕಾಗಿ ರಾಜ್ಯ ಸರ್ಕಾರದಿಂದ 45 ಲಕ್ಷ ಮಂಜೂರಾಗಿದೆ. ಈ ಪೈಕಿ ರು.30 ಲಕ್ಷವನ್ನು ಗುತ್ತಿಗೆ ಸಂಸ್ಥೆಯಾದ ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಲಾಗಿದೆ. ಹಣ ವಾಪಸಾಗಬಹುದು ಎನ್ನುವ ಒಂದೇ ಕಾರಣಕ್ಕೆ ಕಾಟಾಚಾರದ ಈ ಕಾಮಗಾರಿ ತರಾತುರಿಯಿಂದ ನಡೆಯುತ್ತಿದ್ದು, ಇನ್ನು 2-3 ದಿನದಲ್ಲಿ ಆರ್ಸಿಸಿ ಹಾಕಲು ಸಿದ್ಧತೆ ನಡೆದಿದೆ.
ಎರಡೂವರೆ ದಶಕದಷ್ಟು ಹಳೆಯ ಕಟ್ಟಡದ ಮೇಲೆ ಮತ್ತೊಂದು ಕಟ್ಟಡ ನಿರ್ಮಿಸಬಹುದು ಎನ್ನುವ ಬಗ್ಗೆ ಕೃಷಿ ಇಲಾಖೆಯ ಕೇಂದ್ರ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದ ತಾಂತ್ರಿಕ ತಜ್ಞರು ಪರಿಶೀಲನಾ ವರದಿ ನೀಡಿದ್ದಾರೆ. ಇದಕ್ಕೆ ಅನುಸರಿಸಿದ ಮಾನದಂಡಗಳು ಮಾತ್ರ ಅರ್ಥವಾಗುತ್ತಿಲ್ಲ. ಸಣ್ಣ ಪ್ರಮಾಣದಲ್ಲಿ ಭೂ ಕಂಪ ಸಂಭವಿಸಿದರೂ ಮೇಲಂತಸ್ತಿನ ಕಟ್ಟಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಜಾಗದ ಸಮಸ್ಯೆ ಕಾರಣ
ಮಣ್ಣು ಪರೀಕ್ಷಾ ಕೇಂದ್ರಕ್ಕೆ ಸ್ಥಳಾವಕಾಶ ಲಭ್ಯವಿಲ್ಲದ ಕಾರಣ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಹಳೆಯ ಕಟ್ಟಡದ ಮೇಲೆ ಮತ್ತೊಂದು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಇಲಾಖೆಯ ಕೇಂದ್ರ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದ ತಂಡ ಕಟ್ಟಡವನ್ನು ಖುದ್ದು ಪರಿಶೀಲಿಸಿ, ವರದಿ ನೀಡಿದ ಬಳಿಕವಷ್ಟೇ ಕಾಮಗಾರಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ.
ಟಿ ಅಣ್ಣಯ್ಯ, ಜಂಟಿ ಕೃಷಿ ನಿರ್ದೇಶಕ, ರಾಮನಗರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

