ದರೋಡೆಕೋರರಿಂದ 9 ಲಕ್ಷದ ಚಿನ್ನಾಭರಣ ವಶ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಜೂ. 4
ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ 5 ಮಂದಿ ಕಳ್ಳರ ತಂಡವನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಲ್ಲಿನ ಕುಚ್ಚಪ್ಪನಪೇಟೆ (ಕೊಂಗಾಡಿಯಪ್ಪ ಮುಖ್ಯರಸ್ತೆ ಕ್ರಾಸ್)ಯಲ್ಲಿ ನಡೆದಿದ್ದ ದರೋಡೆ ಪ್ರಕರಣ, ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಪ್ಪರಕಲ್ಲು ಬಳಿ ನಡೆದಿದ್ದ ಸರಗಳ್ಳತನ ಮತ್ತು ದೊಡ್ಡಬಳ್ಳಾಪುರದ ಮೇಘಾಂಜಲಿ ಕಲ್ಯಾಣ ಮಂದಿರ ಬಳಿ ನಡೆದಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ವಿಶ್ವನಾಥ(23) ಬಿನ್ ಪುಟ್ಟರಾಜು, ಗೋವಿಂದ(19) ಬಿನ್ ರಮೇಶ್, ರಂಜಿತ್(21) ಬಿನ್ ನಂಜಪ್ಪ, ಅರಳುಮಲ್ಲಿಗೆ ಗ್ರಾಮದ ರಾಜು(30) ಬಿನ್ ಮುನಿಯಪ್ಪ, ಬೆಂಗಳೂರಿನ ಆಡುಗೋಡಿಯ ನವೀನ್ಕುಮಾರ್(24) ಬಿನ್ ನಾಗರಾಜ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳು ವಿಚಾರಣೆಯಲ್ಲಿ ನೀಡಿದ ಮಾಹಿತಿಯಂತೆ ವಿವಿಧೆಡೆ ಅವರು ಕಳುವು ಮಾಡಿ ಒತ್ತೆ ಇಟ್ಟಿದ್ದ ಚಿನ್ನಾಭರಣಗಳು ಮತ್ತು ಮಾರಾಟ ಮಾಡಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಹಲವೆಡೆ ಮಾರಾಟ: ಕಳುವು ಮಾಡಿದ್ದ ಆಭರಣಗಳನ್ನು ಅವರು ದೊಡ್ಡಬಳ್ಳಾಪುರದ ಮುತ್ತೂಟ್ ಫೈನಾನ್ಸ್, ಕರೂರ್ ವೈಶ್ಯ ಬ್ಯಾಂಕ್, ಆಂಧ್ರಪ್ರದೇಶದ ಗೋರಂಟ್ಲ, ಬೆಂಗಳೂರಿನ ಯಶವಂತಪುರದ ಬಿಕೆ ನಗರ, ಆಡುಗೋಡಿ ಮತ್ತು ಅಟ್ಟೂರು ಲೇಔಟ್ಗಳಲ್ಲಿ ಹಲವರಿಗೆ ಮಾರಿದ್ದರು ಮತ್ತು ಕೆಲವೆಡೆ ಅಡವಿಟ್ಟು ಹಣ ಪಡೆದಿದ್ದರು. ಇವರಾರೂ ನೇರವಾಗಿ ಮಾರಾಟ ಮತ್ತು ಅಡವಿಡುವ ಕೆಲಸ ಮಾಡದೆ ಗೊತ್ತಿರುವ ಸ್ನೇಹಿತರನ್ನು ಈ ಕೃತ್ಯಗಳಿಗೆ ಬಳಸಿಕೊಂಡಿದ್ದರು. ಇಲ್ಲಿನ ವರ್ತಕ ಮಂಜುನಾಥ್ ಎಂಬುವವರ ಮನೆಗೆ ಈ ಐವರು ದರೋಡೆಕೋರರ ಗುಂಪು ನುಗ್ಗಿ ಮಂಜುನಾಥ್ ಅವರ ಹೆಂಡತಿ ಲಕ್ಷ್ಮೀದೇವಿ ಅವರಿಗೆ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಸಿ ನಗನಾಣ್ಯ ಲೂಟಿ ಮಾಡಿದ್ದರು. ಅಲ್ಲದೆ ಕಳುವು ಮಾಡುವ ವೇಳೆ ಲಕ್ಷ್ಮೀದೇವಿ ಅವರ
ಮೊಬೈಲ್ ಫೋನನ್ನು ಕೂಡ ತೆಗೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ದೂರು ನೀಡಿದ್ದ ಲಕ್ಷ್ಮೀದೇವಿ ಅವರು ಕೊಟ್ಟ ಮಾಹಿತಿ ಮತ್ತು ಸುಳಿವಿನ ಆಧಾರದಲ್ಲಿ ಪ್ರಕರಣವನ್ನು ಭೇದಿಸಲಾಗಿದೆ ಎಂದು ದೊಡ್ಡಬಳ್ಳಾಪುರ ಡಿವೈಎಸ್ಪಿ ವಿ.ಶ್ರೀಧರ್ ವಿವರಿಸಿದರು.
ತಂಡ ಕಾರ್ಯಾಚರಣೆ: ಪ್ರಕರಣ ಭೇದಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಪ್ರಕಾಶ್, ಅಪರ ಅಧೀಕ್ಷಕ ಡಿ.ನಾಗರಾಜ್, ಡಿವೈಎಸ್ಪಿ ಶ್ರೀಧರ್ ಮಾರ್ಗದರ್ಶನದಲ್ಲಿ ಸಿಪಿಐ ವಿ.ಶಿವಾರೆಡ್ಡಿ, ಪಿಎಸೈಗಳಾದ ಎ.ಪಿ.ಕುಮಾರ್, ಕೃಷ್ಣಕುಮಾರ್, ಸಿಬ್ಬಂದಿ ಸಿದ್ಧರಾಜು, ನಾರಾಯಣಸ್ವಾಮಿ, ಗಂಗಾಧರ್, ವೆಂಕಟೇಶ್, ಷೇಕ್ ಮುಕ್ತಾಫೀರ್ ಅಹ್ಮದ್, ಉಮೇಶ್ ಮತ್ತು ನಾರಾಯಣ ಅವರ ತಂಡ ರಚಿಸಲಾಗಿತ್ತು. ಈ ತಂಡ ಐದೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿತ್ತು. ಬಂಧಿತ ಆರೋಪಿಗಳ ವಿರುದ್ಧದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಠಾಣೆ, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ, ವಿಶ್ವನಾಥಪುರ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ. ವಶಪಡಿಸಿಕೊಂಡಿರುವ ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಿಂತಿರುಗಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

