ಬೆಂಗಳೂರು ಗ್ರಾಮಾಂತರ

ಬಿಎಸ್‌ವೈ ಬಿಜೆಪಿಗೆ ಅನಿವಾರ್ಯ, ಮರಳಿ ಕರೆತನ್ನಿ

Published On :

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತೆ ತನ್ನ ವೈಭವ ಕಾಣಬೇಕಾದರೆ ಯಡಿಯೂರಪ್ಪ ಅವರು ಪಕ್ಷಕ್ಕೆ ಅನಿವಾರ್ಯ. ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ಆಗಬೇಕು.
ಹೀಗೆಂದು ವಿಧಾನ ಪರಿಷತ್ ಸದಸ್ಯ, ಪಕ್ಷದ ಮಾಜಿ ವಕ್ತಾರ ಗೊ. ಮಧುಸೂಧನ್ ಅವರು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪಕ್ಷದಲ್ಲಿ ಗುಂಪುಗಾರಿಕೆಯಿಂದಲೇ ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವಂತಾಯಿತು. ಇದರಿಂದ ಕಾರ್ಯಕರ್ತರು, ಪಕ್ಷದ ಹಿತೈಷಿಗಳು ನೊಂದಿದ್ದಾರೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿಸದ ಸೋಲು ಅನುಭವಿಸಿದೆ. ಸಾಕಷ್ಟು ಇತಿಹಾಸ ಹೊಂದಿರುವ ಬಿಜೆಪಿ ಗಳಿಸಿದ್ದು ಶೇ. 20ರಷ್ಟು ಮತವಾದರೆ, ಬಿಜೆಪಿಯಿಂದ ಸಿಡಿದು ಹೋಗಿರುವ ಯಡಿಯೂರಪ್ಪ ಅವರ ಕೆಜೆಪಿ ಶೇ. 10ರಷ್ಟು ಮತ ಪಡೆದಿದೆ. ಇಬ್ಬರೂ ಒಟ್ಟಾಗಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸೋಲಲು ಇದೊಂದೇ ಅಂಶವಲ್ಲ, ಗುಂಪುಗಾರಿಕೆಯೂ ಕಾರಣ. ಇದೇ ಪರಿಸ್ಥಿತಿ ಮುಂದುವರಿದರೆ ಲೋಕಸಭೆ ಚುನಾವಣೆಯಲ್ಲೂ ವಿಧಾನಸಭೆ ರೀತಿಯ ಫಲಿತಾಂಶ ಹೊರಬೀಳಬಹುದು. ಆದ್ದರಿಂದ ಗುಂಪುಗಾರಿಕೆ ಬಿಟ್ಟು ಎಲ್ಲರೂ ಒಟ್ಟಾಗಬೇಕು. ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಬೇಕು. ಅದೇ ರೀತಿ ಬಿಎಸ್‌ಆರ್ ಕಾಂಗ್ರೆಸ್‌ನ ಶ್ರೀರಾಮುಲು ಕೂಡ ಬಿಜೆಪಿಯ ಸಾಕಷ್ಟು ಮತಗಳನ್ನು ಕಸಿದುಕೊಂಡಿದ್ದಾರೆ. ಯಡಿಯೂರಪ್ಪ ಅವರ ಜತೆ ಶ್ರೀರಾಮುಲು ಕೂಡ ಪಕ್ಷದಲ್ಲಿ ಉಳಿದುಕೊಂಡಿದ್ದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತಿರಲಿಲ್ಲ ಎಂದು ಪತ್ರದಲ್ಲಿ ಮಧುಸೂಧನ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.