2 ಕೊಲೆ ಸೇರಿ 7 ಪ್ರಕರಣ ಭೇದಿಸಿದ ಪೊಲೀಸರು
ಕ.ಪ್ರ. ವಾರ್ತೆ , ರಾಮನಗರ , ಜೂ. 5
ಒಟ್ಟು 2 ಕೊಲೆ ಪ್ರಕರಣ ಸೇರಿದಂತೆ 7 ಪ್ರಕರಣಗಳನ್ನು ಭೇದಿಸಿರುವ ಜಿಲ್ಲಾ ಪೊಲೀಸರು ಅಂತಾರಾಜ್ಯ ಕಳ್ಳರೂ ಸೇರಿದಂತೆ 9 ಮಂದಿಯನ್ನು ಬಂಧಿಸಿ, 300 ಗ್ರಾಂ. ಚಿನ್ನಾಭರಣ, 3 ಮಾರುತಿ ಒಮ್ನಿ ಕಾರುಗಳು, ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಅನುಪಮ್ ಅಗ್ರವಾಲ್ ತಮ್ಮ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣ 1
ಜಿಲ್ಲೆಯ ತಾವರೆಕೆರೆ ಠಾಣೆಯ 2, ಬೆಂಗಳೂರು ನಗರದ ಹುಳಿಮಾವು ಠಾಣೆಯ 1, ಕೆಂಗೇರಿ ಠಾಣೆಯ 1 ಪ್ರಕರಣ ಸೇರಿದಂತೆ ಇತ್ತೀಚೆಗಷ್ಟೇ ಮಾಗಡಿ ಜ್ಯೂವೆಲ್ಲರಿ ಅಂಗಡಿ ದರೋಡೆ ಮಾಡಿದ್ದ ಅಂತಾರಾಜ್ಯ ಕಳ್ಳರನ್ನು ಬಂಧಿಸಿ, ರು.12 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒರಿಸ್ಸಾ ಮೂಲದ ಸೈಯದ್ ಮುಬಾಸಿರ್ ಹಾಗೂ ರೋಷನ್ ಬೇಗ್, ಅರುಣ, ಅಲ್ಲರಕಾ, ತೌಸೀಫ್ ಅಹಮದ್, ಎಂ.ಜಿ. ಗಿರೀಶ್ ಕುಮಾರ್ ಮತ್ತು ನಿತಿನ್ ಎಂಬುವರನ್ನು ದಸ್ತಗಿರಿ ಮಾಡಲಾಗಿದೆ.
ಬಿಬಿಎಂ ವಿದ್ಯಾರ್ಥಿಗಳು: ಬಂಧಿತರು ಚಾಲಾಕಿ ದರೋಡೆಕೋರರಾಗಿದ್ದು ಜ್ಯೂವೆಲ್ಲರಿ ಅಂಗಡಿಗಳೇ ಇವರ ಟಾರ್ಗೆಟ್ ಆಗಿದ್ದವು. ಮೂರ್ನಾಲ್ಕು ದಿನ ಅಂಗಡಿಗಳ ಬಳಿ ಹೊಂಚುಹಾಕಿ, ಮಾಹಿತಿ ಸಂಗ್ರಹಿಸಿದ ನಂತರ ಯಾರೂ ಇಲ್ಲದ ವೇಳೆಯಲ್ಲಿ ಗ್ಯಾಸ್ಕ್ಟ್ ಮೂಲಕ ಅಂಗಡಿಗಳ ಶೆಲ್ಟರ್ ಒಡೆದು ನಿರಾತಂಕವಾಗಿ ಕಳ್ಳತನ ಮಾಡುತ್ತಿದ್ದರು.
ಏಳು ಮಂದಿ ದರೋಡೆಕೋರರ ಗುಂಪಿನಲ್ಲಿ ಇಬ್ಬರು ಬಿಬಿಎಂ ವಿದ್ಯಾರ್ಥಿಗಳಾಗಿದ್ದರು. ಯಾವುದೇ ಸುಳಿವು ಸಿಗದಂತೆ ಕಳ್ಳತನ ಮಾಡುತ್ತಿದ್ದ ತಂಡಕ್ಕೆ ಇವರು ಮಾಸ್ಟರ್ ಮೈಂಡ್ ಆಗಿದ್ದರು. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಡಿವೈಎಸ್ಪಿ ರಾಮಲಿಂಗಪ್ಪ ಹಾಗೂ ವೃತ್ತ ನಿರೀಕ್ಷಕ ವಿಶ್ವನಾಥ್ ನೇತೃತ್ವದ ತನಿಖಾ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಕರಣ 2
ಅನೈತಿಕ ಸಂಬಂಧವನ್ನು ವಿರೋಧಿಸಿದ ತಾಯಿಯನ್ನೇ ಮಗಳು, ಪ್ರಿಯಕರನ ಜತೆಸೇರಿ ಕೊಲೆ ಮಾಡಿದ ಪ್ರಕರಣವನ್ನು ಪೊಲಿಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮಂಗಳ ಗೌರಿ ಮತ್ತು ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.
ಕಳೆದ ಮೇ 25ರಂದು ಬಿಡದಿ ಠಾಣಾ ವ್ಯಾಪ್ತಿಯ ಹೆಗ್ಗಡಗೆರೆ ಕಾಲೋನಿಯಲ್ಲಿ 70 ವರ್ಷದ ವೃದ್ಧೆ ವೆಂಕಟಮ್ಮ ಕೊಲೆ ಮಾಡಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಕೊಲೆಯಾದ ವೆಂಕಟ್ಟಮ್ಮನ ಮಗಳಾದ ಮಂಗಳ ಗೌರಿಯನ್ನು ವಿಚಾರಣೆ ಮಾಡಲಾಗಿ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂಬುದು ಬೆಳಕಿಗೆ ಬಂದಿದೆ.
ಮಂಗಳಗೌರಿ ಮತ್ತು ನೆರೆಮನೆ ವಾಸಿಯಾಗಿದ್ದ ಸಂಬಂಧಿ ಕುಮಾರ್ ನಡುವೆ ಅನೈತಿಕ ಸಂಬಂಧವಿತ್ತು. ಇವರಿಬ್ಬರೂ ರಕ್ತ ಸಂಬಂಧಿಗಳಾಗಿದ್ದರಿಂದ ತಾಯಿ ವೆಂಕಟಮ್ಮ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಅಡ್ಡಗಾಲು ಹಾಕಿದ್ದರು. ಇದರಿಂದ ಕ್ರುದ್ಧರಾದ ಇವರಿಬ್ಬರೂ ವೆಂಕಟಮ್ಮ ಅವರನ್ನು ಮುಗಿಸಲು ನಿರ್ಧರಿಸಿದರು.
ಮನೆಯಲ್ಲಿ ವೆಂಕಟಮ್ಮ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ಮಂಗಳಗೌರಿ ತನ್ನ ಪ್ರಿಯಕರನ ಜೊತೆಗೂಡಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ನಂತರ ಸೀರೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು ಎಂಬುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.
ಪ್ರಕರಣ 3
ಕುಂಬಳಗೋಡು ಠಾಣಾ ವ್ಯಾಪ್ತಿಯ ಅಂಚೆ ಪಾಳ್ಯದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಶಾನು ಅಲಿಯಾಸ್ ಪ್ಯಾಟ್ರಿಕ್ ಎಂಬಾತನನ್ನು ಬಂಧಿಸಿದ್ದಾರೆ.
ಕೊಲೆಯಾದ ಸುರೇಶ ಮತ್ತು ಆರೋಪಿ ಶಾನು ಸ್ನೇಹಿತರಾಗಿದ್ದರು. ಸುರೇಶನಿಂದ ಶಾನು ರು.3000 ಹಣವನ್ನು ಸಾಲ ಪಡೆದಿದ್ದನು. ಸಾಲ ಹಿಂತಿರುಗಿಸುವಂತೆ ಸುರೇಶ ಪೀಡಿಸುತ್ತಿದ್ದನು. ಇದರಿಂದ ಕುಪಿತಗೊಂಡ ಶಾನು ಸ್ನೇಹಿತನನ್ನು ಚಾಕುವಿನಿಂದ ಎದೆಗೆ ಇರಿದು ಕೊಲೆ ಮಾಡಿದ್ದನು.
ಈ ಎಲ್ಲಾ ಪ್ರಕರಣಗಳನ್ನು ಭೇದಿಸಿರುವ ಪೊಲೀಸರನ್ನು ಎಸ್ಪಿ ಅನುಪಮ್ ಅಗ್ರವಾಲ್ ಅಭಿನಂದಿಸಿದರು. ದರೋಡೆ ಪ್ರಕರಣವನ್ನು ಭೇದಿಸಲು ನೆರವಾದ ಬೆಂಗಳೂರಿನ ಪೊಲೀಸ್ ಪೇದೆ ರಾಮು ಅವರಿಗೆ ನಗದು ಪುರಸ್ಕಾರ ನೀಡಿದರು. ಗೋಷ್ಠಿಯಲ್ಲಿ ಡಿವೈಎಸ್ಪಿ ರಾಮಲಿಂಗಪ್ಪ, ಸಿಪಿಐಗಳಾದ, ಭಾಸ್ಕರ್, ರಾಮಚಂದ್ರು, ವಿಶ್ವನಾಥ್ ಹಾಗೂ ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

