ಐಪಿಎಲ್ ಬೆಟ್ಟಿಂಗ್: ಗುಂಪುಗಳ ಮಾರಾಮಾರಿ
ಕ.ಪ್ರ.ವಾರ್ತೆ , ಸೂಲಿಬೆಲೆ , ಜೂ. 5
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಕಾಸ್ತ್ರಗಳಿಂದ ಮಾರಾಮಾರಿ ನಡೆದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಾವರೆಕೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ರಮೇಶ್, ಮಂಜುನಾಥ್, ಕಿರಣ್ ಕುಮಾರ್, ಜಗದೀಶ್, ಪೂಜಾರಿ ಮುನಿಯಪ್ಪ ಎಂಬುವರು ಗಂಭೀರವಾಗಿ ಗಾಯಗೊಂಡು ಹೊಸಕೋಟೆ ಎಂವಿಜೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾವರೆಕೆರೆ ಗ್ರಾಮದಲ್ಲಿ ಗಂಗಾಧರ್ ಎಂಬವರ ಮನೆ ನಿರ್ಮಾಣ ಕಾರ್ಯದಲ್ಲಿ ಮೇಸ್ತ್ರಿಯಾಗಿ ಶ್ರೀನಿವಾಸಪುರ ಮೂಲದ ನವೀನ್ ಕಾರ್ಯನಿರ್ವಹಿಸುತ್ತಿದ್ದಾನೆ. ಇಲ್ಲಿಗೆ ಮಣಿ ಎಂಬವ ಮಾತುಕತೆಯಾದಂತೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಗೆದ್ದ ಹಣವನ್ನು ಕೇಳಲು ಸೋಮವಾರ ಹೋಗಿದ್ದ. ಆ ವೇಳೆ ಅಲ್ಲಿಗೆ ಬಂದ ಮನೆಯ ಯಾಜಮಾನ ಗಂಗಾಧರ್ ಮತ್ತು ಮಣಿ ನಡುವೆ ಮಾತಿನ ಜಟಾಪಟಿಯಾಗಿದೆ. ತಾರಕಕ್ಕೇರಿದ ವಾಗ್ವಾದದಿಂದ ಗಂಗಾಧರ್ ಮತ್ತು ಅವರ ಅಣ್ಣ ಅಜಯ್ ಹಾಗೂ ಮಣಿ ಹೊಡೆದಾಡಿಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಣಿ ಆ ದಿನವೇ ನಂದಗುಡಿ ಠಾಣೆಗೆ ದೂರು ನೀಡಿದರೆ, ಗಂಗಾಧರ್ ಮೂವರ ಮಂದಿ ವಿರುದ್ಧ ದೂರು ದಾಖಲಿಸಿದ್ದರು.
ಖಾರದ ಪುಡಿ ಎರಚಿ ಹಲ್ಲೆ: ಇದೇ ವಿಚಾರವಾಗಿ ಮಂಗಳವಾರ ಮಧ್ಯಾಹ್ನ ಮತ್ತೆ ಈ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ರಾತ್ರಿಯಾಗುತ್ತಿದ್ದಂತೆ ಮಣಿ ಮತ್ತವರ ಸಹಚರರು ಗಂಗಾಧರ್ ಅವರ ಗುಂಪಿನ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಕೆರಳಿದ ಗಂಗಾಧರ್ ತನ್ನ ಸಹಚರರಾದ ರವಿ, ಕಿರಣ್, ಸಚಿನ್, ವಿನೋದ್, ಮುನಿರಾಜ, ಪೂಜಾರಿ ಮುನಿಯಪ್ಪ ಇನ್ನಿತರರ ಜೊತೆಗೂಡಿ ಮಣಿ ಕಡೆಯವರ ಮನೆಗಳಿಗೆ ನುಗ್ಗಿ ಮಹಿಳೆಯರು ಮಕ್ಕಳು ಎನ್ನದೇ ಸಿಕ್ಕ ಸಿಕ್ಕವರ ಮೇಲೆ ಖಾರದ ಪುಡಿ ಎರಚಿದ್ದಾರೆ. ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿದರು ಎನ್ನಲಾಗಿದೆ.
ಘಟನೆಯ ವಿಷಯ ತಿಳಿದ ನಂದಗುಡಿ ಸಿಪಿಐ ವಸಂತ್, ಪಿಎಸ್ಐ ಪ್ರಕಾಶ್ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಘಟನೆಗೆ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿವೆ.
ಲಕ್ಷಾಂತರ ರುಪಾಯಿ ವ್ಯವಹಾರ: ತಾವರೆಕೆರೆ ಗ್ರಾಮದಲ್ಲಿ ಈ ಘಟನೆ ತೀವ್ರ ಮಟ್ಟದ ಸ್ವರೂಪ ಪಡೆದುಕೊಳ್ಳಲು ಐಪಿಎಲ್ ಬೆಟ್ಟಂಗ್ನ ಲಕ್ಷಾಂತರ ರುಪಾಯಿ ವ್ಯವಹಾರವೇ ಕಾರಣ ಎನ್ನಲಾಗಿದೆ.
ಇಲ್ಲಿ 10 ಸಾವಿರದಿಂದ ಹಿಡಿದು ಲಕ್ಷಗಳವರೆಗೂ ಬೆಟ್ಟಿಂಗ್ ನಡೆಯುತ್ತಿತ್ತು ಎನ್ನಲಾಗಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದ್ದು, ಜನ ಭೀತಿಗೊಳಗಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

