ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಗೈರು
ಕ.ಪ್ರ.ವಾರ್ತೆ ರಾಮನಗರ ಜೂ.6
ಜಿಲ್ಲಾ ಪಂಚಾಯಿತಿಯಲ್ಲಿ ಎತ್ತು ಏರಿಗೆ, ಕೋಣ ನೀರಿಗೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಸಾಮೂಹಿಕ ಗೈರು ಹಿನ್ನೆಲೆಯಲ್ಲಿ ಗುರುವಾರ ಕರೆದಿದ್ದ ಸಾಮಾನ್ಯ ಸಭೆಯನ್ನು ಕೋರಂ ಅಭಾವದ ಕಾರಣ ಮುಂದೂಡಲಾಗಿದೆ.
ಪ್ರತಿಪಕ್ಷ ಕಾಂಗ್ರೆಸ್ನ ಎಲ್ಲ ಸದಸ್ಯರು ಪಂಚಾಯತ್ ಭವನದಲ್ಲೇ ಇದ್ದರೂ ಸಭಾಂಗಣದಿಂದ ಹೊರಗುಳಿದರು. ಎರಡು ಬಾರಿ ಕರೆ ಗಂಟೆ ಬಾರಿಸಿದಾಗ್ಯೂ ಕೋರಂ ಲಭಿಸದ ಹಿನ್ನೆಲೆಯಲ್ಲಿ ಅಧ್ಯಕ್ಷ ಕೆ.ಮುದ್ದರಾಜ್ ಯಾದವ್ ಸಭೆಯನ್ನು ಮುಂದೂಡುವ ನಿರ್ಧಾರ ಪ್ರಕಟಿಸಿದರು.
ನಿಗದಿಯಂತೆ ಬೆಳಗ್ಗೆ 11ಕ್ಕೆ ಸಭೆ ಪ್ರಾರಂಭಿಸಲು ಅಧ್ಯಕ್ಷರು ಪೀಠ ಅಲಂಕರಿಸಿದಾಗ ಜೆಡಿಎಸ್ ಸದಸ್ಯರು ಮಾತ್ರವೇ ಹಾಜರಿದ್ದರು. 1 ತಾಸಿನ ಬಳಿಕ ಎರಡನೇ ಬಾರಿ ಕರೆಗಂಟೆ ಬಾರಿಸಿದಾಗಲೂ ಕೋರಂ ಲಭಿಸಲಿಲ್ಲ. ಕಡೆಗೆ ಅಧ್ಯಕ್ಷರು ಅನಿವಾರ್ಯವಾಗಿ ಸಭೆ ಮುಂದೂಡಬೇಕಾಯಿತು.
ಪಟ್ಟು ಬಿಡದ ಕಾಂಗ್ರೆಸ್: ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರಗುಳಿದು ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿದ್ದರು. ಅಲ್ಲಿಗೆ ತೆರಳಿದ ಅಧ್ಯಕ್ಷ ಮುದ್ದರಾಜ್ ಯಾದವ್ ಸಭೆಗೆ ಆಗಮಿಸುವಂತೆ ಮನವಿ ಮಾಡಿದಾಗ ಕಾಂಗ್ರೆಸ್ ಸದಸ್ಯರು ಹಲವು ಬೇಡಿಕೆಗಳನ್ನು ಮುಂದಿಟ್ಟರು.
3 ಸ್ಥಾಯಿ ಸಮಿತಿಗಳ ಪೈಕಿ 1 ಸ್ಥಾಯಿ ಸಮಿತಿ ಅಧ್ಯಕ್ಷರಿಂದ ರಾಜಿನಾಮೆ ಪಡೆದು, ಈಗಲೇ ಪ್ರಕಟಿಸಬೇಕು.
ತೆರವಾದ ಆ ಸ್ಥಾನವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕು. ಪ್ರತಿ ಸ್ಥಾಯಿ ಸಮಿತಿಯಲ್ಲೂ ತಮ್ಮ ಪಕ್ಷಕ್ಕೆ ಕನಿಷ್ಠ 2 ಸದಸ್ಯತ್ವ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಷರತ್ತು ವಿಧಿಸಿದರು.
ಈ ಕುರಿತು ತಮ್ಮ ಸ್ಥಾಯಿ ಸಮಿತಿ ಹಾಲಿ ಅಧ್ಯಕ್ಷರು, ಪಕ್ಷದ ಜಿ.ಪಂ. ಸದಸ್ಯರು ಹಾಗೂ ತಮ್ಮ ಪಕ್ಷದ ವರಿಷ್ಠರ ಜತೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುದ್ದುರಾಜ್ ಯಾದವ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರಾದರೂ ಕಾಂಗ್ರೆಸ್ಸಿಗರು ಪಟ್ಟು ಸಡಿಲಿಸಲಿಲ್ಲ.
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿಮ್ಮ ಅಧ್ಯಕ್ಷತೆಯಲ್ಲೇ ನಡೆದಿರುವಾಗ ನೀವು ಬೇರೆ ಯಾರನ್ನು ಕೇಳಬೇಕು. ನೀವೇ ತೀರ್ಮಾನ ಕೈಗೊಳ್ಳಿ ಎಂದು ಕಾಂಗ್ರೆಸ್ ಸದಸ್ಯರು ಮುದ್ದರಾಜ್ ಯಾದವ್ ಮೇಲೆ ಒತ್ತಡ ಹೇರಿದರು.
ಶಾಸಕರನ್ನೇ ಕರೆಸಿಕೊಳ್ಳಿ: ಸ್ಥಾಯಿ ಸಮಿತಿಗಳ ರಚನೆ ಪ್ರಕ್ರಿಯೆ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಕೋರಂ ಹಾಗೂ ಬಹುಮತಕ್ಕಾಗಿ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರನ್ನು ಕರೆಸಿಕೊಂಡಿದ್ದಂತೆ ಈಗಲೂ ಅವರನ್ನೇ ಕರೆಸಿಕೊಂಡು ಕೋರಂ ತೆಗೆದುಕೊಳ್ಳಿ ಎಂದು ಕಾಂಗ್ರೆಸ್ ಸದಸ್ಯರು ಅಧ್ಯಕ್ಷರನ್ನು ಛೇಡಿಸಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆಯ ನೆಪವೊಡ್ಡಿ ಕಾಂಗ್ರೆಸ್ ಸದಸ್ಯರ ಕ್ಷೇತ್ರಗಳಲ್ಲಿ ಕೊಳವೆ ಬಾವಿ ಕೊರೆಯುವುದಕ್ಕೆ ಅವಕಾಶ ನೀಡಲಿಲ್ಲ. ಆದರೆ, ಜೆಡಿಎಸ್ ಸದಸ್ಯರ ಕ್ಷೇತ್ರಗಳಲ್ಲಿ ಕೊಳವೆ ಬಾವಿ ಕೊರೆಸಿ ತಾರತಮ್ಯ ನೀತಿ ಅನುಸರಿಸಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಆರೋಪ ನಿರಾಧಾರ. ಸಾಕ್ಷ್ಯಗಳೇನಾದರೂ ಇದ್ದಲ್ಲಿ ಸಭೆಗೆ ಬಂದು ಚರ್ಚಿಸಿ ಎಂದ ಅಧ್ಯಕ್ಷ ಮುದ್ದುರಾಜ್ ಯಾದವ್, ಇತರೆ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದರಾದರೂ ಕಾಂಗ್ರೆಸ್ ಸದಸ್ಯರು ಒಪ್ಪಲಿಲ್ಲ. ಕಡೆಗೆ, ಸಂಧಾನ ವಿಫಲಗೊಂಡು ಅಧ್ಯಕ್ಷರು ಸಭಾಂಗಣಕ್ಕೆ ಮರಳಿದರು.
ಕಾದು ಕುಳಿತರು: ಇತ್ತ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷೆ ಸಹಿತ ಜೆಡಿಎಸ್ ಪಕ್ಷದ ಎಲ್ಲ 12 ಸದಸ್ಯರು ಹಾಜರಿದ್ದರು. ಇಬ್ಬರು ತಾ.ಪಂ. ಅಧ್ಯಕ್ಷರು, ಸಿಇಒ ಡಾ.ಎಂ.ವಿ. ವೆಂಕಟೇಶ್ ಸೇರಿದಂತೆ ಬಹುತೇಕ ಅಧಿಕಾರಿಗಳಿದ್ದರು. ಕಾಂಗ್ರೆಸ್ ಸದಸ್ಯರ ಸಾಮೂಹಿಕ ಗೈರು ಹಿನ್ನೆಲೆಯಲ್ಲಿ ಅವರೆಲ್ಲ ಸಭಾಂಗಣದಲ್ಲಿ ಕಾದು ಕುಳಿತುಕೊಳ್ಳುವಂತಾಗಿತ್ತು.
ಭೀಕರ ಬರದಿಂದ ತತ್ತರಗೊಂಡಿರುವ ರಾಮನಗರ ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದರೂ ಅಲ್ಲಲ್ಲಿ ಕುಡಿಯುವ ನೀರಿನ ಬವಣೆ ಮಾತ್ರ ನೀಗಿಲ್ಲ. ಸಾಂಕ್ರಾಮಿಕ ರೋಗಗಳ ಬಾಧೆ ತೀವ್ರಗೊಂಡು, ಜನರು ತತ್ತರಿಸಿದ್ದಾರೆ.
ಜೂ.14ಕ್ಕೆ ಸಭೆ
ಕೋರಂ ಅಭಾವದಿಂದ ಗುರುವಾರ ಮುಂದೂಡಲ್ಪಟ್ಟ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯನ್ನು ಜೂ.14ಕ್ಕೆ ನಿಗದಿಗೊಳಿಸಿ ಅಧ್ಯಕ್ಷ ಕೆ.ಮುದ್ದರಾಜ್ ಯಾದವ್ ಆದೇಶ ಹೊರಡಿಸಿದ್ದಾರೆ.
ತಾರಕಕ್ಕೇರಿದ ಸಂಘರ್ಷ
22 ಸದಸ್ಯ ಬಲದ ಜಿ.ಪಂ.ನಲ್ಲಿ 12 ಸದಸ್ಯರನ್ನು ಹೊಂದಿರುವ ಜೆಡಿಎಸ್ ಆಡಳಿತ ಹಿಡಿದಿದೆ. ತಮ್ಮ ಪಕ್ಷದಲ್ಲಿ ಎದುರಾಗಿದ್ದ ಆಂತರಿಕ ಭಿನ್ನಮತದ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೆ ಸಂಬಂಧ ಒಡಂಬಡಿಕೆ ಮಾತುಕತೆ ನಡೆಸಿದ್ದರು.
ಆದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ 2ನೇ 20 ತಿಂಗಳ ಅವಧಿ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷದಲ್ಲಿ ಗೊಂದಲ ನಿವಾರಣೆಯಾಗಿತ್ತು. ಆ ಸಂದರ್ಭದಲ್ಲಿ ಜೆಡಿಎಸ್ ತಾನು ಮಾಡಿಕೊಂಡ ಒಪ್ಪಂದವನ್ನು ಮುರಿದು, ಬಹುಮತದೊಂದಿಗೆ ಉಭಯ ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.
ಆ ಚುನಾವಣೆಯಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ತಿಕ್ಕಾಟ ಪ್ರಾರಂಭವಾಗಿತ್ತು. ಬಳಿಕ ನಡೆದ ಸ್ಥಾಯಿ ಸಮಿತಿಗಳ ರಚನೆ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸಿದ ಜೆಡಿಎಸ್ ಎಲ್ಲ 3 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಸಂಪ್ರದಾಯಕ್ಕೆ ತೀಲಾಂಜಲಿ ಹೇಳಿತ್ತು.
3 ಸ್ಥಾಯಿ ಸಮಿತಿಗಳ ಪೈಕಿ 1 ಸ್ಥಾನವನ್ನು ಪ್ರತಿಪಕ್ಷಕ್ಕೆ ನೀಡುವ ಸಂಪ್ರದಾಯ ಮೊದಲಿಂದಲೂ ನಡೆದುಕೊಂಡು ಬಂದಿದೆ. ಆದರೆ, ಇಲ್ಲಿ ಕಾಂಗ್ರೆಸ್ ಸದಸ್ಯರ ಅಸಹಾಕಾರದ ಪರಿಣಾಮ ಜೆಡಿಎಸ್ ಬಹುಮತದ ಆಧಾರದ ಮೇಲೆ ಎಲ್ಲ ಸಮಿತಿಗಳನ್ನು ತನ್ನದಾಗಿಸಿಕೊಂಡಿದೆ. ಇದರ ಪರಿಣಾಮ ಉಭಯ ಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

