ಬೆಂಗಳೂರು ಗ್ರಾಮಾಂತರ

ದೇಸೀ ಕಲೆ ಮಾನವೀಯ ಮೌಲ್ಯಗಳ ಕಣಜ

Published On :

ಕ.ಪ್ರ.ವಾರ್ತೆ    ರಾಮನಗರ    ಜೂ.8
ದೇಶೀಯ ಕಲೆಗಳು ಮಾನವೀಯ ಮೌಲ್ಯಗಳ ಕಣಜಗಳು. ಇವು ಮನರಂಜನೆ ನೀಡುವ ಜತೆಗೆ ಮನಸ್ಸಿನ ಕಲ್ಮಶಗಳನ್ನು ತೊಡೆದು ಮಾನವೀಯ ಭಾವನೆಗಳನ್ನು ಬಿತ್ತುತ್ತವೆ ಎಂದು ಎಂದು ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ತಿಳಿಸಿದರು.
ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್‌ನ 6ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪದ ಕಲೆಗಳು ದೇಶೀಯ ನೃತ್ಯ ಪ್ರಕಾರಗಳು, ಗಾಯನ, ನಾಟಕಗಳು ಮನಸ್ಸಿಗೆ ಮುದ ನೀಡುತ್ತವೆ. ಅಲ್ಲದೆ ಜೀವನ ರೂಪಿಸಿಕೊಳ್ಳುವ ಪಾಠವನ್ನು ಕಲಿಸುತ್ತವೆ ಎಂದರು.
ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಯುವ ಜನತೆ ದೇಶೀಯ ಕಲೆಗಳನ್ನು ಮರೆಯುತ್ತಿದ್ದಾರೆ. ಅಳಿವಿನಂಚಿಗೆ ತಲುಪಿರುವ ದೇಶೀಯ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾಗಿದೆ. ಈ ನಿಟ್ಟಿನಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕೇವಲ ಹಣ ಗಳಿಸುವುದನ್ನೇ ಕಾಯಕವಾಗಿಸಿಕೊಂಡ ಜನರು, ಒತ್ತಡದಲ್ಲಿ ಸಿಲುಕಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಜಾನಪದ ಕಲೆಗಳೇ ಔಷಧಿಯಾಗಿವೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾನಪದ ಸಂಶೋಧಕ ಡಾ.ಎಂ.ಬೈರೇಗೌಡ ತಿಳಿಸಿದರು.
ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಮಾತನಾಡಿ, ರಾಮನಗರ ಜಿಲ್ಲೆ ಜಾನಪದ ಕಲೆಗಳ ತವರೂರಾಗಿದೆ. ಇಲ್ಲಿಯ ಸಾಕಷ್ಟು ಮಂದಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಕಲಾವಿದರಿದ್ದಾರೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತ ಕಲಾ ಮಂದಿರ ಇಲ್ಲದಿರುವುದು ದುರ್ದೈವದ ಸಂಗತಿಯಾಗಿದೆ ಎಂದರು.
ಈಗಾಗಲೇ ಹಲವಾರು ಬಾರಿ ರಂಗ ಮಂದಿರ ನಿರ್ಮಾಣದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವುದು ವಿಪರ್ಯಾಸ. ದೇಶೀಯ ಕಲೆಗಳನ್ನು ಉಳಿಸುವ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಕೂಡಲೇ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಎಲ್ಲಾ ಸವಲತ್ತುಗಳನ್ನು ಒಳಗೊಂಡ ಸುಸಜ್ಜಿತ ರಂಗ ಮಂದಿರ ನಿರ್ಮಾಣಗೊಂಡರೆ ಅಲ್ಲಿ ನಿರಂತರವಾಗಿ ಕಲಾ ಪ್ರದರ್ಶನಕ್ಕೆ ಅವಕಾಶವಾಗುತ್ತವೆ, ಕಲಾವಿದರನ್ನು ಪ್ರೋತ್ಸಾಹಿಸುವ ಜತೆಗೆ, ನಾಗರಿಕರಲ್ಲಿ ದೇಶೀಯ ಕಲೆಗಳ ಬಗ್ಗೆ ಅಭಿಮಾನವನ್ನು ಉಂಟುಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ನಗರಸಭೆಯ ಮಾಜಿ ಉಪಾಧ್ಯಕ್ಷ ಬಿ.ಉಮೇಶ್, ಗ್ರಾ.ಪಂ. ಸದಸ್ಯರಾದ ರೇಣುಕಾ, ಲಲಿತಾ ಹಾಗೂನಾರಾಯಣಸ್ವಾಮಿ, ಕಾ.ಪ್ರಕಾಶ್, ಗೋಪಾಲ್, ವೆಂಕಟೇಶ್, ವನಜಾ ಕೃಷ್ಣಮೂರ್ತಿ ಭಾಗವಹಿಸಿದ್ದರು. ಸಂಸ್ಕೃತಿ ಸೌರಭ ಟ್ರಸ್ಟ್‌ನ ಅಧ್ಯಕ್ಷ ರಾ.ಬಿ.ನಾಗರಾಜ್ ಸ್ವಾಗತಿಸಿದರು. ರಾಜಶೇಖರ್ ಪಾಟೀಲ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.