ಒಂದು ರೇಖೆ ಸಾವಿರ ಪದಗಳಿಗೆ ಸಮ: ಯೋಗೇಶ್ವರ್
ಚನ್ನಪಟ್ಟಣ: ಕಲಾವಿದನ ಕುಂಚದಲ್ಲಿ ಮೂಡಿಬರುವ ಒಂದು ರೇಖೆ ಸಾವಿರ ಪದಗಳಿಗೆ ಸಮ. ಇಂಥ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವೆಲ್ಲ ಮುಂದಾಗಬೇಕೆಂದು ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು.
ಇಲ್ಲಿನ ಬಾಲು ಪಬ್ಲಿಕ್ ಶಾಲೆ ಆವರಣದಲ್ಲಿ ಅಸಿರ ಚಿತ್ರಕಲಾ ಟ್ರಸ್ಟ್ನ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿ ಕೊಳ್ಳಲಾಗಿದ್ದ ಚಿತ್ರಕಲೆ, ವ್ಯಂಗ್ಯಚಿತ್ರ ಪ್ರದರ್ಶನ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿತ್ರಕಲೆ ನಮ್ಮ ಮಾನಸಿಕ ವಿಕಸನಕ್ಕೆ ಕಾರಣವಾಗಿದ್ದು ಇಂಥ ಕಲೆಯನ್ನು ಪ್ರತಿಯೊಬ್ಬ ಮಗುವಿಗೂ ಕಲಿಸ ಬೇಕಾಗಿದೆ ಎಂದರು.
ಸರ್ಕಾರ ಶಾಲಾ ಮಕ್ಕಳಿಗೆ ಚಿತ್ರಕಲೆಯನ್ನು ಒಂದು ವಿಷಯವಾಗಿ ಕಲಿಸಲು ಮುಂದಾಗಬೇಕಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯಬೇಕಿದ್ದು ಮಕ್ಕಳಿಗೆ ಶಾಲಾ ಮಟ್ಟದಲ್ಲಿ ಚಿತ್ರಕಲೆಯ ಬಗ್ಗೆ ಅರಿವು ಮೂಡಿಸಬೇಕೆಂದರು.
ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಶ್ರಮಿಸುತ್ತಿರುವ ಅಸಿರ ಚಿತ್ರಕಲಾ ಟ್ರಸ್ಟ್ನ ಪಾತ್ರ ನಿಜಕ್ಕೂ ಪ್ರಶಂಸನಾರ್ಹ. ಈ ಟ್ರಸ್ಟ್ ಮತ್ತಷ್ಟು ಅಭಿವೃದ್ಧಿ ಹೊಂದಿ ತಾಲೂಕಿನಲ್ಲಿ ಚಿತ್ರಕಲೆಯ ಬಗ್ಗೆ ಸಾಕಷ್ಟು ವಿದ್ಯಾರ್ಥಿಗಳಿಗೆ ಸದಭಿರುಚಿ ಬೆಳೆಸಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಿವೈಎಸ್ಪಿ ಧರಣೇಂದ್ರ ಮಾತನಾಡಿ, ಚಿತ್ರಕಲೆಯನ್ನು ಪರಿಣಾಮ ಕಾರಿಯಾಗಿ ವಿಸ್ತರಿಸುವ ಕೆಲಸ ನಡೆಯಬೇಕಿದ್ದು ಟ್ರಸ್ಟ್ನ ಜತೆಗೆ ಸಹೃದಯರು ಒತ್ತಾಸೆಯಾಗಿ ನಿಲ್ಲಬೇಕೆಂದು ಅಭಿಪ್ರಾಯಪಟ್ಟರು.
ಹಲವಾರು ವರ್ಷಗಳಿಂದ ವ್ಯಂಗಚಿತ್ರಕಾರನಾಗಿ ಸೇವೆಸಲ್ಲಿಸುತ್ತಾ ಬಂದಿರುವ ಅಕ್ಕೂರು ರಮೇಶ್ ತಮ್ಮದೇ ಒಂದು ಟ್ರಸ್ಟ್ ಸ್ಥಾಪಿಸುವ ಮೂಲಕ ತಮ್ಮಲ್ಲಿ ಅಡಕವಾಗಿರುವ ಕಲೆಯನ್ನು ಎಲ್ಲರಿಗೂ ಹಂಚಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಜನಪರ ಶಕ್ತಿ ವೇದಿಕೆ ರಾಜ್ಯಾಧ್ಯಕ್ಷೆ ಆರ್.ಮಧುಮತಿ ಮಾತನಾಡಿ, ಎಲ್ಲಾ ಕ್ಷೇತ್ರವೂ ಮಹತ್ವವಾದುದೆ, ಸಾಧಿಸುವ ಚಲದೊಂದಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಮುನ್ನುಗ್ಗಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ, ಯಾವುದಕ್ಕೂ ಅಂಜದೆ ಗೆಲವಿನತ್ತ ಮುಂದಡಿ ಇಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಮಕ್ಕಳಲ್ಲಿನ ಬಹುಮುಖ ಪ್ರತಿಭೆ ಚಿತ್ರಕಲೆಯಲ್ಲಿ ವ್ಯಕ್ತವಾಗುತ್ತದೆ, ಸರ್ಕಾರಿ ಶಾಲೆಯಲ್ಲಿ ಚಿತ್ರಕಲೆ ವಿಷಯಕ್ಕೆ ಶಿಕ್ಷಕರ ಅಲಭ್ಯತೆಯಿಂದಾಗಿ ಹಿನ್ನಡೆಯಾಗುತ್ತಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಚಿತ್ರಕಲೆಗೆ ಶಿಕ್ಷಕರುಗಳನ್ನು ನೇಮಕ ಮಾಡಿಕೊಂಡಿದ್ದು, ಆ ಮೂಲಕ ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಅಸಿರಾ ಚಿತ್ರಕಲಾ ಇನ್ಸ್ಟಿಟ್ಯೂಟ್ನ ಕಾರ್ಯದರ್ಶಿ ಅಕ್ಕೂರು ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಡಿವೈಎಸ್ಪಿ ಧರಣೀಂದ್ರ, ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ, ಆರ್ಕಿಟೆಕ್ಟ್ ಬಸವರಾಜು, ಕ್ರೀಡಾಪಟು ಗೋವಿಂದರಾಜು, ವಿಚಾರವಾದಿ ಆರ್.ಕೆ.ಸ್ವಾಮಿ, ಮಂಜುನಾಥ್, ಮೊಕ್ತಾರ್ ಕಂದಮೀರಿ, ಶ್ರೀನಿವಾಸ್, ಕುನ್ನಯ್ಯ ರನ್ನು ಸನ್ಮಾನಿಸಲಾಯಿತು.
ಬಾಲು ಪಬ್ಲಿಕ್ ಶಾಲೆಯ ಜಂಟಿ ಕಾರ್ಯದರ್ಶಿ ಬಾಲಸುಬ್ರಮಣ್ಯಂ, ಮುಖಂಡ ಎಸ್.ಸಿ.ಶೇಖರ್, ಶಾಲೆಯ ಮುಖ್ಯಶಿಕ್ಷಕಿ ಮೆಹರ್ ಸುಲ್ತಾನ, ಅನಿತಾ ಶಂಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

