ಬೆಂಗಳೂರು ಗ್ರಾಮಾಂತರ

ಅಂಚಿಕುಪ್ಪೆ: ಅಕ್ರಮ ಕಲ್ಲು ಗಣಿಗಾರಿಕೆ

Published On :

ಕ.ಪ್ರ.ವಾರ್ತೆ   ರಾಮನಗರ   ಜೂ.11
ಮಾಗಡಿ ತಾಲೂಕಿನ ಮಾಡಬಾಳು ಹೋಬಳಿ ಅಂಚಿಕುಪ್ಪೆ ಗ್ರಾಮದ ಸರ್ವೆ ನಂ.76ರಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಗೆ ಆಗ್ರಹಿಸಿ ಆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ವಿವೇಕಾನಂದ ವೃತ್ತದಿಂದ ಕಂದಾಯ ಭವನದವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅಕ್ರಮ ಗಣಿಗಾರಿಕೆ ವಿವರ: ಅಂಚಿಕುಪ್ಪೆ ಗ್ರಾಮದ ಸರ್ವೆ ನಂ.76ರ ಜಮೀನಿನಲ್ಲಿ ಅಶ್ವತ್ಥ್ ಹಾಗೂ ಕಾರ್ತಿಕೇಶ್ ಎಂಬುವರು ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಾದ ಮಾರೇಗೌಡನದೊಡ್ಡಿ, ಗವಿನಾಗಮಂಗಲ, ಕಾಳಯ್ಯನ ಪಾಳ್ಯ, ಕೆರೆಪಾಳ್ಯ, ಅತ್ತಿಮಗೆರೆ, ವಿ.ಜಿ.ದೊಡ್ಡಿ ಗ್ರಾಮದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಂಡೆ ಸಿಡಿಸಲು ಭಾರಿ ಪ್ರಮಾಣದ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ ಆಸುಪಾಸಿನ ಮನೆಗಳು ಬಿರುಕು ಬಿಟ್ಟಿವೆ. ಶಬ್ದಕ್ಕೆ ಹೆದರಿ ಜಾನುವಾರುಗಳು ಅಡ್ಡಾದಿಡ್ಡಿ ಓಡಿಹೋಗುತ್ತಿವೆ. ಅವುಗಳನ್ನು ಮತ್ತೆ ಹುಡುಕಿ ಹಿಡಿದು ತರುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪರಿಸರ ಮಾಲಿನ್ಯದಿಂದ ಕೆಲವರು ಉಸಿರಾಟದ
ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.   
ಬೆಳೆಗಳಿಗೂ ನಷ್ಟ: ಬಂಡೆಯನ್ನು ಸ್ಫೋಟಿಸಿದಾಗ ಸಣ್ಣ ಮತ್ತು ದಪ್ಪ ಕಲ್ಲುಗಳು ಹಾರಿ ಬಂದು ನೆರೆಯ ತೋಟಗಳಿಗೆ ಬೀಳುತ್ತಿವೆ. ಇದರಿಂದ ಮಾವಿನ ಮರದ ಕೊಂಬೆಗಳು ಮುರಿದು ಬೀಳುತ್ತಿವೆ. ಕಲ್ಲುಗಳು ಯಾವಾಗ ತಲೆ ಮೇಲೆ ಬೀಳುತ್ತವೋ ಎನ್ನುವ ಆತಂಕದಿಂದಲೇ ಜನರು ತಿರುಗಾಡುವ ಸ್ಥಿತಿಯು ಅಕ್ರಮ ಕಲ್ಲು ಗಣಿಗಾರಿಕೆಯಿಂದ ಎದುರಾಗಿದೆ ಎಂದರು.  
ಈ ಬಗ್ಗೆ ಗ್ರಾ.ಪಂ., ತಾಲೂಕು ಆಡಳಿತ, ಪರಿಸರ ಸಂರಕ್ಷಣಾ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಗಣಿಗಾರಿಕೆಯನ್ನು ನಿಷೇಧಿಸಿಲ್ಲ. ಜಿಲ್ಲಾಡಳಿತ ಈಗಲೂ ನಿರ್ಲಕ್ಷ್ಯ ಮಾಡಿದಲ್ಲಿ ಇದೇ ಕಚೇರಿ ಎದುರು ಅತ್ಮಾಹುತಿ ಮಾಡಿಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಸ್.ಆರ್.ನಾಯಕ್, ಹನುಮಯ್ಯ, ರವಿಗೌಡ, ನಜೀರ್ ಸಾಬ್, ಫಯಾಜ್, ವೆಂಕಟಸ್ವಾಮಯ್ಯ, ಚಿಕ್ಕಮಾರಕ್ಕ, ಸಾಕಮ್ಮ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.