ಆನೇಕಲ್: ಬಿಜೆಪಿಗೆ ಸೋಲಲ್ಲೂ ಗೆಲವು
ಕ.ಪ್ರ. ವಾರ್ತೆ ಆನೇಕಲ್ ಜೂ.12
ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸೋಲಲಿಲ್ಲ. ಮತದಾರ ಬಾಂಧವರು ಕಳೆದ ಚುನಾವಣೆಗಿಂತ ಹೆಚ್ಚಿನ ಮತ ನೀಡುವ ಮೂಲಕ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಅವರು ಆನೇಕಲ್ ತಾಲೂಕು ಬಿಜೆಪಿ ಘಟಕ ಏರ್ಪಡಿಸಿದ್ದ ಮತದಾರರಿಗೆ ಅಭಿನಂದನೆ ಹಾಗೂ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ ಪ್ರಸ್ತುತ ಚುನಾವಣೆಯಲ್ಲಿ 65 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯಲು ಕಾರಣರಾದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಮನಃಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.
ಸೋಲಿಗೆ ಕಾರಣ: ಬಿಜೆಪಿ ಪಕ್ಷದೊಳಗೆ ವಿವಿಧ ಹಂತಗಳ ಅಧಿಕಾರ ಅನುಭವಿಸಿದ ಕೆಲ ನಾಯಕರ ಕುತಂತ್ರ, ಅನ್ಯ ಪಕ್ಷದೊಂದಿಗಿನ ಒಳ ಒಪ್ಪಂದ ಹಾಗೂ ಅಪವಿತ್ರ ಮೈತ್ರಿ ನನ್ನ ಸೋಲಿಗೆ ಕಾರಣವಾಗಿದೆ. ಚುನಾವಣೆಯಲ್ಲಿ ಸೋಲು ಗೆಲವು ಸಹಜ. ರಾಜ್ಯದಲ್ಲೂ ಪಕ್ಷ ವಿರೋಧಿ ಅಲೆ ಇದ್ದಿತು. ಸೋಲನ್ನು ಸಹಜವಾಗಿ ಸ್ವೀಕರಿಸಿ ತಾಲೂಕಿನ ಅಭಿವೃದ್ಧಿಗಾಗಿ ಜಾರಿ ಮಾಡಿದ ಯೋಜನೆಗಳು ಪೂರ್ಣಗೊಳ್ಳಲು ನಿರಂತರ ಪ್ರಯತ್ನ ಮಾಡುತ್ತೇನೆ ಎಂದರು.
ಸಚಿವ ಸ್ಥಾನಕ್ಕೆ ಗೌರವ: ಸಮಾಜ ಕಲ್ಯಾಣ ಸಚಿವನಾಗಿ ರಾಜ್ಯಾದ್ಯಂತ ಸಂಚಾರದಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಕೇವಲ ಹಾಸ್ಟೆಲ್ ಮತ್ತು ಸಮವಸ್ತ್ರಕ್ಕೆ ಸೀಮಿತವಾಗಿದ್ದ ಇಲಾಖೆಗೆ ಸರ್ಜರಿ ಮಾಡಿ ಮೆಟ್ರಿಕ್ ಸಿಸ್ಟಂ ಜಾರಿ ಮಾಡಿರುವೆ. ಸರ್ಕಾರದಿಂದ ಸಿಗುವ ಎಲ್ಲ ಸವಲತ್ತು ವಿದ್ಯಾರ್ಥಿಗಳಿಗೆ ಸೋರಿಕೆ ರಹಿತವಾಗಿ ನೇರವಾಗಿ ತಲುಪುವಂತೆ ವ್ಯವಸ್ಥೆ ರೂಪಿಸಿರುವೆ. ಪ್ರತಿ ಜಿಲ್ಲೆಯಲ್ಲೂ ಜಡ್ಡುಗಟ್ಟಿದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಕೆಲಸ ಮಾಡುವಂತೆ ಪ್ರೇರಣೆ ನೀಡಿರುವೆ. ಹಾಲಿ ಸರ್ಕಾರ ಚಾಚೂ ತಪ್ಪದೆ ಹಿಡಿತ ಮುಂದುವರಿಸಿಕೊಂಡು ಹೋದರೇ ಸಾಕು ಎಂದರು. ಬಂದೀಖಾನೆ ಸಚಿವನಾಗಿ ಜೈಲುಗಳ ಸುಧಾರಣೆ, ಜಾಮರ್ ಅಳವಡಿಕೆ, ವಯಸ್ಸಾದ ಹಾಗೂ ಸನ್ನಡತೆ ಕೈದಿಗಳ ಬಿಡುಗಡೆಗೆ ಪ್ರಸ್ಥಾವನೆ ಮುಂತಾದ ಸುಧಾರಿತ ಕ್ರಮ ಅಳವಡಿಸಿ ಸಾಮಾಜಿಕ ನ್ಯಾಯಕ್ಕಾಗಿ ಉತ್ತಮ ಅಡಿಪಾಯ ಹಾಕಿರುವೆ. ಸಚಿವನಾಗಿ ರಾಜ್ಯದ ಜನತೆ ಒಪ್ಪುವಂತೆ ಶುದ್ಧ ಹಸ್ತದ ಸಚಿವ ಎಂಬ ಹೆಸರು ಪಡೆದು ಬಿಜೆಪಿ ಸರ್ಕಾರ ಹಾಗೂ ನನ್ನ ಕ್ಷೇತ್ರಕ್ಕೆ ಒಳ್ಳೆಯ ಹೆಸರು ತಂದಿರುವೆ ಎಂದರು.
ಪ್ರಾಮಾಣಿಕ ಪ್ರಯತ್ನ: ರಾಜಕಾರಣಿ ಯಾರಾದರೂ ಆಗಬಹುದು. ಕಪ್ಪು ಚುಕ್ಕೆ ಇಲ್ಲದ ಆಡಳಿತಕ್ಕಾಗಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೂ ಹಲವಾರು ಬಾರಿ ಪ್ರಶಂಸೆ ನೀಡಿದ್ದಾರೆ. ಬ್ಯಾಕ್ ಲಾಗ್ ಹುದ್ದೆ ನೇಮಕಾತಿ, ಶಿಂಷಾ ನೀರಾವರಿ ಯೋಜನೆ, ಮೈಸೂರಮ್ಮನ ದೊಡ್ಡಿ ಬ್ಯಾರೇಜ್, ಏತ ನೀರಾವರಿ ಯೋಜನೆಗಳು ಅಂತಿಮ ಮಂಜೂರಾತಿ ಪಡೆದಿದೆ. ರಾಜ್ಯ ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ನನ್ನ ಕಿರು ಕಾಣಿಕೆ ಎಂಬ ಹೆಮ್ಮೆ ನನಗಿದೆ ಎಂದು ಮನ ತುಂಬಿ ಹೇಳಿದರು.
ಪಕ್ಷ ಸಂಘಟನೆ: ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ, ನವ ನಾಯಕರ ನೇಮಕ, ನಿಷ್ಠಾವಂತರಿಗೆ ಅರ್ಹತೆಗೆ ತಕ್ಕ ಜವಾಬ್ದಾರಿ ನೀಡಿ ಮತ್ತೆ ಆನೇಕಲ್ ಕ್ಷೇತ್ರವನ್ನು ಬಿಜೆಪಿ ಮಡಿಲಿಗೆ ತರುತ್ತೇನೆ ಎಂದಾಗ ಕರತಾಡನದೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಯಕಾರ ಹಾಗೂ ಹರ್ಷ ಮುಗಿಲು ಮುಟ್ಟಿತು.
ಸಂಸತ್ ಚುನಾವಣೆ: ಕಾರ್ಯಕರ್ತರು ನರೇಂದ್ರ ಮೋದಿ ನೇತೃತ್ವದ ಲೋಕ ಸಭಾ ಚುನಾವಣೆಗೆ ಸನ್ನದ್ಧರಾಗಬೇಕು. ಪಕ್ಷದ ಜನಪ್ರಿಯ ಕಾರ್ಯಕ್ರಮಗಳನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕು. ಎಪಿಎಂಸಿ, ತಾಲೂಕು ಪಂಚಾಯ್ತಿ , ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳು ಹಾಗೂ ಸಹಕಾರ ಸಂಸ್ಥೆಗಳ ಆಡಳಿತ ಬಿಜೆಪಿಯ ತೆಕ್ಕೆಯಲ್ಲಿದೆ ಎಂಬುದನ್ನು ಮುಖಂಡರು ಮರೆಯಬಾರದು. ತಾಲೂಕಿನ ಅಭಿವೃದ್ಧಿ ಗಾಗಿ ಎಲ್ಲರೂ ಸಹಕಾರ ನೀಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಮುಖಂಡರಾದ ಶಿವಪ್ಪ, ಅತ್ತಿಬೆಲೆ ಬಸವರಾಜು, ಜಯಣ್ಣ, ಶಿವರಾಂ, ಬಿ.ಜಿ. ಆಂಜಿನಪ್ಪ, ಜಿಪಂ ನಾರಾಯಣಪ್ಪ, ನರಸಿಂಹಯ್ಯ, ಮುನಿರೆಡ್ಡಿ, ಮಹದೇವಯ್ಯ, ಕೆ. ನಾಗರಾಜು, ಎಂ. ನಾರಾಯಣಸ್ವಾಮಿ, ದಿಣ್ಣೂರು ರಾಜು, ಮಧು, ಸುಲೋಚನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

