ಕಾರ್ಯಕ್ರಮ ಮಾಹಿತಿ ಕಡ್ಡಾಯವಾಗಿ ನಮೂದಿಸಿ
ಕ.ಪ್ರ. ವಾರ್ತೆ ಮಾಗಡಿ ಜೂ.15
ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳ ಕರ್ತವ್ಯ ಮತ್ತು ಕಾರ್ಯಕ್ರಮಗಳ ಮಾಹಿತಿಯನ್ನು ಕಡ್ಡಾಯವಾಗಿ ನಾಮಫಲಕದಲ್ಲಿ ನಮೂದಿಸಬೇಕು. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸದ ಕಂದಾಯ ಇಲಾಖೆ ಸಿಬ್ಬಂದಿಗಳ ಮೇಲೆ ಶಿಸ್ತಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ನಾನೇ ಶಿಫಾರಸು ಮಾಡುತ್ತೇನೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಧಿಕಾರಿಗಳ ಬೇಜವಾಬ್ದಾರಿ, ಕರ್ತವ್ಯ ಲೋಪದಿಂದ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಬಹಳ ಶ್ರಮವಹಿಸಬೇಕಾಯಿತು. ಯಾವ ಹಳ್ಳಿಗಳಿಗೆ ಹೋದರೂ ಪಹಣಿ ತಿದ್ದುಪಡಿ, ಜಮೀನು ಸರ್ವೆಗೆ ಅರ್ಜಿ ಸಲ್ಲಿಸಿ ವರ್ಷ ಕಳೆದಿದೆ. ಇಲ್ಲಿಯವರೆವಿಗೂ ಅಧಿಕಾರಿಗಳು ಸರಿಪಡಿಸಿಕೊಟ್ಟಿಲ್ಲ ಎಂದು ರೈತರು ತಮ್ಮ ಸಮಸ್ಯೆಗಳನ್ನು ಚುನಾವಣೆ ವೇಳೆ ಎಳೆಎಳೆಯಾಗಿ ಬಿಚ್ಚಿಟ್ಟಾಗ ನನ್ನಂದಲೂ ತಪ್ಪಾಗಿದೆ ಎಂದು ಅರಿವಿಗೆ ಬಂತು.ಚುನಾವಣೆ ಎದುರಿಸಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಅಧಿಕಾರಿಗಳು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದಾದರೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಅರ್ಜಿ ಕಳೆದು ಹೋಗಿದೆ, ಅವರ ಬಳಿ ಇದೆ ಎಂದು ರೈತರನ್ನು ಸುಮ್ಮನೆ ಅಲೆಸಬೇಡಿ, ಕಚೇರಿ ಬರುವ ಸಾರ್ವಜನಿಕರಿಗೆ
ಸ್ಪಂದಿಸಿ, ಆದಷ್ಟು ಬೇಗ ಕೆಲಸ ಮಾಡಿಕೊಡಬೇಕು. ಗೋಮಾಳ ಗುಳುಂ, ಸರ್ಕಾರದ ಅನುಮತಿ ಇಲ್ಲದೆ ಬಂಡೆಗಳು, ಕಲ್ಲು, ಮರಳು, ಮರ ಕಳ್ಳರನ್ನು ಹಿಡಿದು ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಸರ್ಕಾರಿ ಪ್ರದೇಶಗಳ ರಕ್ಷಣೆ ಅಧಿಕಾರಿಗಳ ಕರ್ತವ್ಯವಾಗಬೇಕು. ಇಂತಹ ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ನನ್ನ ಬಳಿ ಬಂದರೆ ನಾನೇ, ನೇರವಾಗಿ ನಿಮ್ಮ ಮೇಲೆ ಶಿಸ್ತಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಶಿಪಾರಸು ಮಾಡುವುದಾಗಿ ಎಚ್ಚರಿಸಿರಲ್ಲದೆ, ಇಲ್ಲಿ ಕೆಲಸ ಮಾಡಲು ಆಗದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು ಎಂದು ಹೇಳಿದರಲ್ಲದೆ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂಬ ನಾಮಫಲಕ ಹಾಕುವಂತೆ ತಹಸೀಲ್ದಾರ್ಗೆ ಬಾಲಕೃಷ್ಣ ಸೂಚಿಸಿದರು.
ಸಿಸಿ ಕ್ಯಾಮರಾ ಅಳವಡಿಸಿ: ಸಿಬ್ಬಂದಿಗಳು ನಿತ್ಯ ತಮ್ಮ ಕರ್ತವ್ಯವವನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದ ಬಗ್ಗೆ ನಿಗಾ ಇಡಲು ಕಚೇರಿಯಲ್ಲಿ ಸಿಸಿ ಕ್ಯಾಮರ ಅಳವಡಿಸಲು ತಗಲುವ ವೆಚ್ಚವನ್ನು ನಾನೇ ಬರಿಸುತ್ತೇನೆ. ಗ್ರಾಮ ಲೆಕ್ಕಾಧಿಕಾರಿಗಳ ಕರ್ತವ್ಯದ ವಸತಿ ಗೃಹ ಒದಗಿಸಲು ಸೂಕ್ತ ಕ್ರಮ ವಹಿಸುತ್ತೇನೆ ಎಂದು ಶಾಸಕರು ತಿಳಿಸಿದರು.
ಸಮರೋಪಾದಿಯಲ್ಲಿ: ಇದೇ ವೇಳೆ ತಹಸೀಲ್ದಾರ್ ಡಾ. ಹರೀಶ್ ನಾಯಕ್ ಮಾತನಾಡಿ ರೈತರ ಪಹಣಿ ತಿದ್ದು ಪಡಿ ಸಮಾರೋಪಾದಿಯಲ್ಲಿ ನಡೆದಿದೆ. 2011-12ನೇ ಸಾಲಿನಲ್ಲಿ ತಾಲೂಕು ಬರಪೀಡಿತ ಘೋಷಣೆಯಾಗಿದ್ದು, 2.50 ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ 15 ಸಾವಿರ ಚೆಕ್ಗಳು ವಿತರಣೆಯಾಗಿದ್ದು, ಸುಮಾರು 1.20 ಕೋಟಿ ರು. ಬಳಕೆಯಾಗಿದೆ. 2012-13ನೇ ಸಾಲಿಗೆ ತಾಲೂಕನ್ನು ಮತ್ತೊಮ್ಮೆ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು, ತೋಟಗಾರಿಕೆ ಬೆಳೆಗಳಿಗೆ 1.20 ಕೋಟಿ, ಕೃಷಿ ಬೆಳೆಗೆ 2 ಕೋಟಿ ಅನುದಾನ ಅವಶ್ಯಕತೆ ಇದೆ ಎಂದು ಪ್ರಸ್ತಾವನೆ ಕಳಿಸಲಾಗಿದೆ. ಮುಜರಾಯಿ ದೇವಾಲಯಗಳ ಹುಂಡಿ ಹಣವನ್ನು ಬ್ಯಾಂಕ್ಗಳಲ್ಲಿ ಠೇವಣಿಯಿಡಲಾಗಿದೆ. ಆರ್.ಆರ್.ಟಿ. ಶಾಖೆಯಲ್ಲಿನ 2400 ಪ್ರಕರಣಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಭೂಮಿ ತಂತ್ರಾಂಶಲ್ಲಿ ಕಳೆದ ಎರಡು ವರ್ಷಗಳಿಂದ ಬಾಕಿಯಿದ್ದ 836 ಪ್ರಕರಣಗಳನ್ನು ಖಾತೆ ಮಾಡಲಾಗಿದೆ. 134 ಕೋರ್ಟ್ ಆದೇಶಗಳನ್ನು, 403 ಖಾತೆ ಬದಲಾವಣೆ, 433 ತಿಳುವಳಿಕೆ, 1345 ಹಕ್ಕು - ಋಣಗಳು ಸೇರಿದಂತೆ 2400 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಇಲಾಖೆಯ ಪ್ರಗತಿ ಕುರಿತು ಶಾಸಕರಲ್ಲಿ ತಹಸೀಲ್ವಾರ್ ಹರೀಶ್ ನಾಯಕ್ ವಿವರಿಸಿರು. ಈಗಾಗಲೇ ಸಿಬ್ಬಂದಿಗಳಿಗೆ ಕರ್ತವ್ಯ ಲೋಪದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಸುಮಾರು 10 ಗ್ರಾಮಲೆಕ್ಕಾಧಿಕಾರಿಗಳ ಕೊರತೆಯಿದ್ದು, ಹುದ್ದೆ ತುಂಬಬೇಕು ಎಂದರಲ್ಲದೆ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ಶಾಸಕರಲ್ಲಿ ವಿವರಿಸಿದರು.
ತಾ.ಪಂ. ಅಧ್ಯಕ್ಷ ಬಿ.ಟಿ.ವೆಂಕಟೇಶ್, ಮಾಜಿ ಅಧ್ಯಕ್ಷ ಎಸ್. ಕಾಂತರಾಜು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

