ಕನ್ನಡಿಗರಿಗೆ ಶೇ.50ರಷ್ಟು ಉದ್ಯೋಗ ಮೀಸಲಾಗಲಿ
ಕ.ಪ್ರ.ವಾರ್ತೆ, ರಾಮನಗರ, ಜೂ.16-
ರಾಜ್ಯದಲ್ಲಿ ಸ್ಥಾಪನೆಯಾಗುವ ಬಹುರಾಷ್ಟ್ರೀಯ ಕಂಪನಿಗಳು ಶೇ. 50ರಷ್ಟು ಉದ್ಯೋಗವನ್ನು ಕನ್ನಡಿಗರಿಗಾಗಿ ಮೀಸಲಿಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಕಂಪೆನಿ ಸ್ಥಾಪಿಸಲು ಸರ್ಕಾರ ಅವಕಾಶ ನೀಡಬಾರದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಆಗ್ರಹಿಸಿದರು.
ಜಾನಪದ ಲೋಕದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ನಾಡು-ನುಡಿ ಕುರಿತು ಚಿಂತನ-ಮಂಥನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡಿಗರಿಗೆ ಉದ್ಯೋಗ ಮೀಸಲಿಡದ ಕಂಪನಿಗಳಿಗೆ ಯಾವುದೇ ಸವಲತ್ತು ಒದಗಿಸಬಾರದು ಎಂದರು.
ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುವ ಸರ್ಕಾರ ನಾಡಿನ ಜನರ ಹಿತ ಕಾಪಾಡುತ್ತಿಲ್ಲ. ಕಂಪನಿಗಳನ್ನು ಸ್ಥಾಪಿಸಲು ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ನೀಡುವ ಮೂಲಕ ಸರ್ಕಾರವೇ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ನಮ್ಮ ನೆಲ, ಜಲ, ವಿದ್ಯುತ್ ಎಲ್ಲವನ್ನೂ ಬಳಸಿಕೊಂಡು ಬೆಳೆಯುವ ಕಂಪನಿಗಳು ಕನ್ನಡಿಗರನ್ನು ಶೋಷಣೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
24 ಗಂಟೆ ವಿದ್ಯುತ್: ರೈತರಿಗೆ ಕೇವಲ 4 ಗಂಟೆ ಮಾತ್ರ ವಿದ್ಯುತ್ ನೀಡುವ ಸರ್ಕಾರ ಐಟಿ, ಬಿಟಿ ಕಂಪನಿಗಳಿಗೆ ದಿನದ 24 ಗಂಟೆಯೂ ವಿದ್ಯುತ್ ಒದಗಿಸುತ್ತಿದೆ. ಇದರಿಂದ ಆಹಾರ ಧಾನ್ಯ ಸೇರಿದಂತೆ ಕೃಷಿ ಉತ್ಪನ್ನಗಳ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಆಹಾರ ಧಾನ್ಯಗಳ ಅಭಾವ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅನ್ಯಭಾಷಿಕರ ಹಾವಳಿ: ನಾಡಪ್ರಭು ಕೆಂಪೇಗೌಡರು ಕಟ್ಟಿ ಬೆಳೆಸಿದ ಬೆಂಗಳೂರು ಇಂದು ಅನ್ಯ ಭಾಷಿಕರ ಹಾವಳಿಯಿಂದ ನಲುಗುತ್ತಿದೆ. ಕನ್ನಡಿಗರನ್ನು ಭೂತಗನ್ನಡಿ ಹಾಕಿ ಹುಡುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ಕನ್ನಡ ನಾಡು, ನುಡಿ, ಸಂಸ್ಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಒಂದು ನಿವೇಶನ ಕೊಂಡುಕೊಳ್ಳಲು ಸಾಧ್ಯವಾಗದಂತಹ ದುಃಸ್ಥಿತಿ ಕನ್ನಡಿಗರದ್ದಾಗಿದೆ. ಕೂಲಿ ಕಾರ್ಮಿಕರು ಐಟಿ, ಬಿಟಿ ಕಂಪನಿಗಳ ಉದ್ಯೋಗಿಗಳ ವಿರುದ್ಧ ಪೈಪೋಟಿ ನಡೆಸುವಂತಾಗಿದೆ. ಮಾಸಿಕ ಲಕ್ಷಾಂತರ ರು. ವೇತನ ಪಡೆಯುವ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಗಳು, ಕನ್ನಡಿಗರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಚನ್ನೇಗೌಡ ಆತಂಕ ವ್ಯಕ್ತಪಡಿಸಿದರು.
ಪ್ರಪಂಚದ ಆರು ಪ್ರಾಚೀನ ಭಾಷೆಗಳ ಪೈಕಿ ಕನ್ನಡವೂ ಒಂದಾಗಿದೆ. ಭಾಷೆ ಕೇವಲ ಸಂಪರ್ಕ ಮಾಧ್ಯಮವಷ್ಟೇ ಅಲ್ಲ. ಅದೊಂದು ಸಂಸ್ಕೃತಿ, ಕರಾರು, ಅಭಿಮಾನ, ಕೃತಜ್ಞತೆ, ಜೀವನ ರೂಪಿಸಿಕೊಳ್ಳುವ ಚೈತನ್ಯ ಮಾತೃ ಭಾಷೆಗಿದೆ ಎಂದು ಶಿಬಿರವನ್ನು ಉದ್ಘಾಟಿಸಿದ ಜಾನಪದ ಲೋಕದ ಕ್ಯುರೇಟರ್ ಕುರುವ ಬಸವರಾಜು ಅಭಿಪ್ರಾಯಪಟ್ಟರು.
ನಿರೂಪಿಸುತ್ತೆ: ಯಾವ ರಾಜ್ಯದಲ್ಲಿ ಸಂಪತ್ತು, ಶಾಂತಿ, ಸುವ್ಯವಸ್ಥೆ ನೆಲೆಸಿರುತ್ತದೆಯೋ ಆ ರಾಜ್ಯದಲ್ಲಿ ಉನ್ನತ ಮಟ್ಟದ ಸಾಹಿತ್ಯ ರಚನೆಯಾಗುತ್ತದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ನಮ್ಮ ಭಾಷೆ ಹಾಗೂ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ನಿರೂಪಿಸುತ್ತದೆ ಎಂದು ತಿಳಿಸಿದರು.
ಇಂತಹ ಸಂಪತ್ಭರಿತ ಇತಿಹಾಸವನ್ನು ಹೊಂದಿರುವ ಕನ್ನಡಿಗರು ಇಂದು ಭಾಷೆಯ ಉಳಿವಿಗಾಗಿ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾದ ದುಃಸ್ಥಿತಿ ಬಂದೊದಗಿದೆ. ಇದಕ್ಕೆ ಮಾತೃ ಭಾಷೆಯ ಮೇಲೆ ಕನ್ನಡಿಗರಿಗೆ ನಿರಾಸಕ್ತಿ ಹಾಗೂ ಆಂಗ್ಲ ಭಾಷೆಯ ಮೇಲಿನ ವ್ಯಾಮೋಹವೇ ಕಾರಣ. ಕನ್ನಡ ಭಾಷೆ ಅಳಿದರೆ ಇಡೀ ಕನ್ನಡ ಸಂಸ್ಕೃತಿಯೇ ನಾಶವಾದಂತೆ. ಆದ್ದರಿಂದ ಕನ್ನಡಿಗರು ನಮ್ಮ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜಾಗರೂಕರಾಗಬೇಕಿದೆ ಎಂದು ಎಚ್ಚರಿಸಿದರು. ಶಿಬಿರದಲ್ಲಿ ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಚನ್ನವೀರೇಗೌಡ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

