ನಗರಸಭೆಯಿಂದ ಕಸ ವಿಲೇವಾರಿಗೆ ಕಳ್ಳ ಮಾರ್ಗ
ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ರಾಮನಗರ ಜೂ.18
ಕಸ ವಿಲೇವಾರಿಗೆ ಕಳ್ಳ ಮಾರ್ಗ ಅನುಸರಿಸುವಲ್ಲಿ ರಾಮನಗರ ನಗರಸಭೆ ಆಡಳಿತವು ಬಿಬಿಎಂಪಿಯನ್ನೂ ಮೀರಿಸಿದೆ.
ನಗರದ ಕಸವನ್ನು ರಾಜಾರೋಷವಾಗಿಯೇ ಬೆಟ್ಟದ ತಪ್ಪಲು, ಕಟ್ಟೆ, ಕಾಲುವೆ, ಬಡಾವಣೆಗಳ ಅಂಚಿನಲ್ಲೇ ವಿಲೇವಾರಿ ಮಾಡಿಸುವ ಮೂಲಕ ಅಧಿಕಾರಿಗಳೇ ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದಾರೆ.
ನಗರದ ಕಸವನ್ನು ಹೊರ ವಲಯದಲ್ಲಿರುವ ರಟ್ಟೆ ಬೆಟ್ಟದ ತಪ್ಪಲು, ಕೊತ್ತಿಪುರ ಮತ್ತು ರೆಹಮಾನಿಯಾ ನಗರಕ್ಕೆ ಹೊಂದಿಕೊಂಡಿರುವ ಜಾಗದಲ್ಲೇ ವಿಲೇವಾರಿ ಮಾಡಲಾಗುತ್ತಿದೆ. ಕಳೆದ ಐದಾರು ತಿಂಗಳಿಂದ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಿ, ಬೆಂಕಿ ಹಚ್ಚುವ ಕೆಲಸ ನಿರಂತರವಾಗಿ ನಡೆದುಕೊಂಡು ಬಂದಿದೆ.
ಈವರೆಗೆ ಸರಿ ಸುಮಾರು 1 ಸಾವಿರಕ್ಕೂ ಹೆಚ್ಚು ಲಾರಿ, ಟ್ರ್ಯಾಕ್ಟರ್ ಲೋಡ್ನಷ್ಟು ಘನತ್ಯಾಜ್ಯವನ್ನು ತಂದು ಹಾಕಿ, ಬೆಂಕಿ ಹಾಕಿದ್ದಾರೆ. ಸುತ್ತಮುತ್ತಲ ನಿವಾಸಿಗಳು ಉಸಿರುಗಟ್ಟುವ ವಾತಾವರಣದಲ್ಲಿ ಬದುಕುವಂತಾಗಿದೆ. ಈ ಕುರಿತು ಸಾರ್ವಜನಿಕರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರಾದರೂ ಅಧಿಕಾರಿಗಳು ಲೆಕ್ಕಕ್ಕೆ ಹಾಕಿಕೊಂಡಿಲ್ಲ. ಬಿಬಿಎಂಪಿ ವ್ಯಾಪ್ತಿಯ ಕಸವನ್ನು ಅಲ್ಲಿನ ಗುತ್ತಿಗೆದಾರರು ನೆರೆ ಜಿಲ್ಲೆಗಳ ಜನ ವಸತಿ ಪ್ರದೇಶದ ಸನಿಹ, ರಸ್ತೆ ಇಕ್ಕೆಲಗಳಲ್ಲಿ ರಾತ್ರೋ ರಾತ್ರಿ ತಂದು ಸುರಿದು ಬೆಂಕಿ ಹಚ್ಚಿ ಹೋಗುತ್ತಿದ್ದರು. ಆದರೆ, ರಾಮನಗರ ನಗರಸಭೆ ಆಡಳಿತ ಹಗಲಲ್ಲೇ ತಂದು ಕಸ ವಿಲೇವಾರಿ ಮಾಡುವ ಮೂಲಕ ಮೊಂಡು ಧೈರ್ಯ ಪ್ರದರ್ಶಿಸುತ್ತಿದೆ.
ಗೋಳು ತಪ್ಪಲಿಲ್ಲ: ರಾಮನಗರ ಮತ್ತು ಚನ್ನಪಟ್ಟಣ ಉಭಯ ನಗರಸಭೆಗಳ ವ್ಯಾಪ್ತಿಯ ಕಸ ವಿಲೇವಾರಿಗೆಂದೇ ಕಣ್ವ ಸಮೀಪ ಸುಮಾರು 40 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿದೆ. ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿಕೊಂಡು, ಕಸ ವಿಲೇವಾರಿಗೆ ಮುಂದಾಗಬೇಕಾದ ರಾಮನಗರ ನಗರಸಭೆಯು ಕಳ್ಳ ಮಾರ್ಗವನ್ನೇ ಮುಂದುವರೆಸಿದೆ.
ಸರ್ಕಾರದಿಂದ ಸ್ಥಳಾವಕಾಶ ಕಲ್ಪಿಸಿಕೊಂಡ ಹೊಸತರಲ್ಲಿ ನಾಲ್ಕಾರು ಲಾರಿ, ಟ್ರ್ಯಾಕ್ಟರ್ಗಳಲ್ಲಿ ಕಸವನ್ನು ಕಣ್ವ ಬಳಿಯ ಘಟಕಕ್ಕೆ ಕೊಂಡೊಯ್ದು ವಿಲೇವಾರಿ ಮಾಡಲಾಗುತ್ತಿತ್ತು. ಅಲ್ಲಿ ವೈಜ್ಞಾನಿಕವಾಗಿ ಘಟಕ ಸ್ಥಾಪಿಸಿಕೊಳ್ಳದ ಪರಿಣಾಮ ಸ್ಥಳೀಯರಿಂದ ವಿರೋಧ ಎದುರಾಯಿತು. ಅದರ ಬೆನ್ನಲ್ಲೇ ಅಧಿಕಾರಿಗಳು ಕಳ್ಳ ಮಾರ್ಗಕ್ಕೆ ಇಳಿದರು.
ನಿರುಪಯುಕ್ತ ಯಂತ್ರ: ಕಸ ವಿಲೇವಾರಿ ವ್ಯವಸ್ಥೆ ಸರಳೀಕರಣಗೊಳಿಸಲು ರಾಮನಗರ ನಗರಸಭೆ ರು.24 ಲಕ್ಷ ವೆಚ್ಚದಲ್ಲಿ ಕಾಂಪ್ಯಾಕ್ಟರ್ ಯಂತ್ರ ಹೊಂದಿದ ವಾಹನವನ್ನು ಖರೀದಿಸಿದೆ. ಸುಮಾರು 4-5 ಲಾರಿ ಲೋಡ್ನಷ್ಟ ಕಸವನ್ನು 1 ಲಾರಿಯಷ್ಟು ಪ್ರಮಾಣಕ್ಕೆ ಇಳಿಸುವ ಸಾಮರ್ಥ್ಯ ಸದರಿ ಯಂತ್ರಕ್ಕಿದೆ. ಅದನ್ನು ಬಳಸಿದ ನಿದರ್ಶನವೇ ಇಲ್ಲ.
ವಾಹನವನ್ನು ನಗರಸಭೆ ಕಚೇರಿ ಎದುರು ಪ್ರದರ್ಶನಕ್ಕೆ ಇರಿಸಿದಂತಿದೆ. ಪರಿಸರ ಮಾಲಿನ್ಯ ತಡೆ ನಿಟ್ಟಿನಲ್ಲಿ ರು.5 ಕೋಟಿ ವೆಚ್ಚದ ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗುವ ಬಗ್ಗೆ ಬಡಾಯಿ ಕೊಚ್ಚಿಕೊಂಡಿರುವ ಅಧಿಕಾರಿಗಳು ಪ್ರಸ್ತುತ ಇರುವ ವ್ಯವಸ್ಥೆಯನ್ನೇ ಅಚ್ಚುಕಟ್ಟಾಗಿ ಬಳಸಿಕೊಳ್ಳದಿರುವುದು ವಿಪರ್ಯಾಸದ ಸಂಗತಿ.
ಜೀವ ತೆಗೆದ ಕಸ: ಬೆಟ್ಟದ ತಪ್ಪಲು, ನಗರದಂಚಿನ ಬಯಲು ಪ್ರದೇಶದಲ್ಲಿ ರೈತರು ತಮ್ಮ ದನ, ಕರು, ಕುರಿ, ಮೇಕೆಗಳನ್ನು ಮೇಲು ಬಿಡುತ್ತಾರೆ. ಈ ಭಾಗದಲ್ಲಿ ಕಸ ವಿಲೇವಾರಿ ಮತ್ತು ಕಸದ ರಾಶಿಗೆ ಬೆಂಕಿ ಹಚ್ಚುವ ಅಧಿಕಾರಿಗಳ ತಿಳಿಗೇಡಿತನ ಪ್ರಾರಂಭ ಆದಾಗಿನಿಂದ ಹತ್ತಾರು ಜಾನುವಾರುಗಳು ಜೀವ ಕಳೆದುಕೊಂಡಿರುವ ನಿದರ್ಶನವಿದೆ.
ಗರಿಕೆ, ಗಿಡಗಂಟಿ ಮೇಯಲು ಬಂದ ಜಾನುವಾರುಗಳು ಕೆಲಮೊಮ್ಮೆ ಆರೋಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್ ಸಹಿತ ವಿಷಯುಕ್ತ ತ್ಯಾಜ್ಯವನ್ನು ಸೇವಿಸಿರುವುದೇ ಅವುಗಳ ಸಾವಿಗೆ ಕಾರಣ. ಮದುವೆ ಮನೆ ತ್ಯಾಜ್ಯ ತಂದು ವಿಲೇವಾರಿ ಮಾಡಿದಾಗಂತೂ ಗಬ್ಬು ವಾಸನೆಯಿಂದ ಆಸುಪಾಸಿನ ಜನರು ಮೂಗು ಮುಚ್ಚಿಕೊಂಡು ವಾಸಿಸುವಂತಾಗುತ್ತಿದೆ.
ಮುಚ್ಚಿ ಹೋದ ಕಾಲುವೆ: ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಕಸವನ್ನು ಬಯಲಿನಲ್ಲಷ್ಟೇ ಅಲ್ಲದೆ ಅಲ್ಲಿರುವ ರಾಜ ಕಾಲುವೆ, ರಸ್ತೆ ಬದಿಯ ಕಾಲುವೆಗಳಿಗೆ ತಂದು ಸುರಿಯುತ್ತಿದ್ದಾರೆ. ಈ ಪರಿಣಾಮ ಸರ್ಕಾರಿ ನಕ್ಷೆಯಲ್ಲಿರುವ ಕಟ್ಟೆ, ಕಾಲುವೆಗಳೇ ಮುಚ್ಚಿ ಹೋಗಿವೆ. ಒಂದೊಮ್ಮೆ ರಭಸವಾಗಿ ಮಳೆಯಾದಲ್ಲಿ ಕಾಲುವೆ ಕಸವೆಲ್ಲಾ ಕೆರೆ, ಕಟ್ಟೆ ಸೇರಿಕೊಂಡು ಮತ್ತಷ್ಟು ಮಾಲಿನ್ಯ ಉಂಟಾಗುವುದು ಖಚಿತ.
ಕೊತ್ತಿಪುರದ ಕೆರೆ ಸಮೀಪ ಇರುವ ಸರ್ಕಾರಿ ಜಾಗದವನ್ನು ಸ್ಥಳೀಯ ನಿವಾಸಿಗಳು ಸ್ಮಶಾನಕ್ಕಾಗಿ ಬಳಸಿಕೊಳ್ಳುತ್ತಿದ್ದರು. ನಗರಸಭೆಯ ಧನದಾಹಿ ಅಧಿಕಾರಿಗಳು ಕಸವನ್ನು ಅಲ್ಲೂ ವಿಲೇವಾರಿ ಮಾಡಿಸಿದ್ದು, ಬಡ ಜನತೆಗೆ ಸ್ಮಶಾನ ಸೌಲಭ್ಯ ಇಲ್ಲದಂತೆ ಮಾಡಿದ್ದಾರೆ. ಈ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ಲೂಟಿಯ ಜಾಡು: ರಾಮನಗರದಲ್ಲಿ ಪ್ರತಿ ನಿತ್ಯ ಸರಾಸರಿ 40 ಟನ್ ಘನ ತ್ಯಾಜ್ಯ ಉತ್ಪಾದನೆ ಆಗುತ್ತಿದೆ ಎಂದು ಸ್ವತಃ ನಗರಸಭೆ ಅಧಿಕಾರಿಗಳೇ ಹೇಳಿದ್ದಾರೆ. ಈ ಪೈಕಿ ಕಣ್ವದ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿದ್ದಕ್ಕಿಂತ ಬೆಟ್ಟದ ತಪ್ಪಲು ಮತ್ತು ಬಡಾವಣೆಗಳಂಚಿನಲ್ಲಿ ಸುರಿದು ಬೆಂಕಿ ಹಚ್ಚಿದ್ದೆ ಹೆಚ್ಚು. ನಗರಸಭೆಯಲ್ಲೇ ಪರಿಸರ ಎಂಜಿನಿಯರ್ ಇದ್ದರೂ ಸದ್ದು ಮಾಡಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಸಾರಾಸಗಟು ಇಡೀ ಘನ ತ್ಯಾಜ್ಯ ವಿಲೇವಾರಿಗೆ ವೆಚ್ಚ ಪಾವತಿ ಆಗುತ್ತಲೇ ಇದೆ. ದೂರದ ಕಣ್ವದ ಬದಲು ನಗರದಂಚಿನಲ್ಲೇ ಕಸ ವಿಲೇವಾರಿ ಮಾಡುವುದರಿಂದ ಉಳಿತಾಯ ಆಗಿರುವ ಲಕ್ಷಾಂತರ ರು. ಹಣವೆಲ್ಲಾ ಅಧಿಕಾರಿ, ಸಿಬ್ಬಂದಿಯ ಜೇಬು ಸೇರುತ್ತಿದೆ. ನಗರಸಭೆ ಬೊಕ್ಕಸಕ್ಕೂ ನಷ್ಟ ತಂದು, ನಗರ ನೈರ್ಮಲ್ಯವನ್ನೂ ಹಾಳುಗೆಡವುತ್ತಿರುವ ಅಧಿಕಾರಿಗಳ ಈ ಆಟಾಟೋಪ ಅಂತ್ಯವಾದರೂ ಯಾವಾಗ ಎನ್ನುವುದು ಯಕ್ಷಪ್ರಶ್ನೆ.
ಸ್ಥಳ ಪರಿಶೀಲಿಸಿ ಕ್ರಮ
ರಾಮನಗರದ ತ್ಯಾಜ್ಯವನ್ನು ಕಣ್ವ ಬಳಿ ಇರುವ ಘಟಕದಲ್ಲೇ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇಷ್ಟಾಗಿಯೂ ನಗರದ ಹೊರ ವಲಯದಲ್ಲಿ ಕಸ ವಿಲೇವಾರಿ ಕುರಿತು ದೂರುಗಳು ಕೇಳಿ ಬಂದಿವೆ. ಖುದ್ದು ಸ್ಥಳ ಪರಿಶೀಲಿಸಿ ಆಯುಕ್ತರು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸಿ, ಕ್ರಮ ಕೈಗೊಳ್ಳಲಾಗುವುದು.
ಟಿ ವಿ.ಶ್ರೀರಾಮರೆಡ್ಡಿ, ಜಿಲ್ಲಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

