ವಿದ್ಯಾರ್ಥಿ ನಿಲಯಕ್ಕೆ ತಾ.ಪಂ. ಅಧ್ಯಕ್ಷರ ಭೇಟಿ
ಕ.ಪ್ರ.ವಾರ್ತೆ, ಮಾಗಡಿ, ಜೂ.20
ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ವಿದ್ಯಾರ್ಥಿ ನಿಲಯಕ್ಕೆ ತಾ.ಪಂ. ಅಧ್ಯಕ್ಷ ಬಿ.ಟಿ.ವೆಂಕಟೇಶ್ ದಿಢೀರ್ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆಯ ಆಗರವನ್ನು ಕಣ್ಣಾರೆ ಕಂಡು ಕೆಂಡಾಮಂಡಲರಾದರು.
ಈ ಸಂಬಂಧ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತಿಮ್ಮಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ಬಗ್ಗೆ ಗಮನ ಹರಿಸಿದ್ದೀರಾ ಎಂದು ಪ್ರಶ್ನಿಸಿದರು. 30 ಮಂದಿ ವಿದ್ಯಾರ್ಥಿಗಳಿಗೆ ಕೇವಲ 3 ಕೆ.ಜಿ. ತರಕಾರಿ ತರಿಸಿ ಅಡುಗೆ ಮಾಡುತ್ತಿರುವುದನ್ನು ಗಮನಿಸಿ, 30 ಮಕ್ಕಳಿಗೆ 3 ಕೆ.ಜಿ. ತರಕಾರಿ ಸಾಕಾಗುತ್ತದೆಯೇ ಎಂದು ಪ್ರಶ್ನಿಸಿದರಲ್ಲದೆ ಹೀಗಾದರೆ ಮಕ್ಕಳು ಹಾಸ್ಟೆಲ್‌ಗಳಿಗೆ ಸೇರುತ್ತಾರೆಯೇ, ಮಕ್ಕಳು ಚನ್ನಾಗಿ ಓದಿ ವಿದ್ಯಾವಂತರಾಗಲಿ ಎಂದು ಹಾಸ್ಟೆಲ್ ಸೇರಿಸುತ್ತಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ, ಮಕ್ಕಳಿಗೆ ಗುಣಮಟ್ಟದ ಪಾಠ ಪ್ರವಚನ, ಪೌಷ್ಟಿಕ ಆಹಾರ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ತಾಳುವುದು ಏಕೆ ಎಂದು ಪ್ರಶ್ನಿಸಿದರು. ಕೂಡಲೆ ಗುಣಮಟ್ಟದ ಶಿಕ್ಷಣ ನೀಡಬೇಕು. ಕಾಯಂ ಅಡುಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ತ್ಯಾಜ್ಯ ತೆಗೆಸಿ: ಇಲ್ಲಿನ ಶೌಚಾಲಯ ಗುಂಡಿ ತುಂಬಿ ಗಬ್ಬು ನಾರುತ್ತಿದ್ದರೂ ಪಿಟ್ ಗುಂಡಿಯ ತ್ಯಾಜ್ಯ ತೆಗೆಸದೆ ಇದ್ದುದನ್ನು ಕಂಡು ಕೋಪಗೊಂಡ ಅಧ್ಯಕ್ಷರು ಇನ್ನೆರಡು ದಿನಗಳಲ್ಲಿ ಶೌಚಾಲಯದ ತ್ಯಾಜ್ಯ ತೆಗೆಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ಹಾಗೂ ವಾರ್ಡ್‌ನ್ ವಿರುದ್ಧ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಶಿಪಾರಸು ಮಾಡುವುದಾಗಿ ಎಚ್ಚರಿಸಿದರು. ಹಾಸ್ಟೆಲ್ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರಲ್ಲದೆ ಹಾಸ್ಟೆಲ್ ಬದಿ ಇರುವ ಟ್ರಾನ್ಸ್ ಫಾರ್ಮರ್ ಅನ್ನು ಕೂಡಲೆ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು. ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ರುದ್ರಮೂರ್ತಿ ಹಾಜರಿದ್ದು ಹಾಸ್ಟೆಲ್ ವ್ಯವಸ್ಥೆ ಕುರಿತು ತಾ.ಪಂ. ಅಧ್ಯಕ್ಷ ವೆಂಕಟೇಶ್ ಅವರಿಗೆ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

