ಬೆಂವಿವಿಗೆ ದಕ್ಕುವುದೇ 'ಎ' ಮಾನ್ಯತೆ?
ದೇವರಾಜ್ ಎಲ್.
ಕ.ಪ್ರ.ವಾರ್ತೆ ಬೆಂಗಳೂರು ಜೂ.23
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ದಕ್ಕುವುದೇ ಈ ಬಾರಿ 'ಎ' ಮಾನ್ಯತೆ...?
ವಿಶ್ವವಿದ್ಯಾಲಯದ ಕಾರ್ಯವೈಖರಿ ಇಂತಹ ಅನುಮಾನ ಸೃಷ್ಟಿಸಿದೆ.
ಏಕೆಂದರೆ, ಪ್ರತಿ ವರ್ಷ ನ್ಯಾಕ್ಗೆ ಸಲ್ಲಿಸಬೇಕಾಗಿರುವ ವಾರ್ಷಿಕ ಗುಣಮಟ್ಟ ಖಾತರಿ ವರದಿಯನ್ನೇ (ಕ್ವಾಲಿಟಿ ಅಶ್ಯೂರೆನ್ಸ್ ರಿಪೋರ್ಟ್) ವಿವಿ ಇದುವರೆಗೂ ಸಲ್ಲಿಸಿಲ್ಲ.
ಅಲ್ಲದೆ, ಮರು ಮಾನ್ಯತೆ ಕುರಿತಂತೆ ಮಾನ್ಯತೆ ಅವಧಿ ಪೂರ್ಣಗೊಳ್ಳುವ ಆರು ತಿಂಗಳ ಮೊದಲೇ ವಿವಿ ನ್ಯಾಕ್ಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದರೆ, ಈ ಪ್ರಕ್ರಿಯೆಯನ್ನೂ ವಿವಿ ಇನ್ನೂ ಮಾಡಿಲ್ಲ.
ನ್ಯಾಕ್ ಮಾನ್ಯತೆ ಕಡ್ಡಾಯ: ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) 2012ರ ನಿಯಮ ಪ್ರಕಾರ ಪ್ರತಿಯೊಂದು ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತೆ ಸಂಸ್ಥೆ(ನ್ಯಾಕ್)ಯಿಂದ ಮಾನ್ಯತೆ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದರೆ ಅನುದಾನ ದೊರೆಯುವುದಿಲ್ಲ.
2001-02ನೇ ಅವಧಿಯಲ್ಲಿ ವಿವಿ ಕುಲಪತಿಯಾಗಿದ್ದ ಡಾ.ಕೆ.ಸಿದ್ದಪ್ಪ ಅವರ ಅವಿರತ ಪ್ರಯತ್ನದಿಂದಾಗಿ
ಆಡಳಿತ ಮಂಡಳಿಯ ಕಾರ್ಯ ವೈಫಲ್ಯ: 2002 ಸೆಪ್ಟಂಬರ್ನಲ್ಲಿ ನ್ಯಾಕ್ನಿಂದ 'ಎ' ಮಾನ್ಯತೆ ಸಿಕ್ಕಿತ್ತು. ನಂತರ 2008ರಲ್ಲಿ ನವೀಕರಣಗೊಂಡು ವಿಶ್ವವಿದ್ಯಾಲಯಕ್ಕೆ ಎ ಗ್ರೇಡ್ ದೊರೆಯಿತು. ಈ ಮಾನ್ಯತೆ ಸೆಪ್ಟಂಬರ್ನಲ್ಲಿ ಅಂತ್ಯಗೊಳಲ್ಲಿದ್ದು, ಮರು ನವೀಕರಣಕ್ಕೆ ವಿವಿ ಅರ್ಜಿ ಸಲ್ಲಿಸದಿರುವುದು ಆಡಳಿತ ಮಂಡಳಿಯ ಕಾರ್ಯ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ.
ಅಪ್ಲೋಡ್ ಆಗಿಲ್ಲ: ನ್ಯಾಕ್ ಮಾರ್ಗಸೂಚಿಯಂತೆ ಎಲ್ಲಾ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲೂ ಶೈಕ್ಷಣಿಕ ಗುಣಮಟ್ಟವನ್ನು ಸದಾ ಕಾಪಡಲು ಆಂತರಿಕ ಗುಣಮಟ್ಟ ಖಾತರಿ ಕೇಂದ್ರ (ಐಕ್ಯೂಎಸಿ) ಎಂಬ ಪ್ರಬಲ ಕೋಶ ಸ್ಥಾಪಿಸಬೇಕಿರುತ್ತದೆ. ಆದರೆ, ಈ ಕೋಶ ಬೆಂಗಳೂರು ವಿವಿಯಲ್ಲಿ ನೆಪಮಾತ್ರಕ್ಕೆ ಇದ್ದು, ಕಳೆದ ಎರಡು ವರ್ಷಗಳಿಂದ ಯಾವುದೇ ಕೆಲಸ ಕಾರ್ಯಗಳ ಮಾಹಿತಿ ಅಪ್ಲೋಡ್ ಆಗದಿರುವುದು ಬೆಳಕಿಗೆ ಬಂದಿದೆ.
ಎಕ್ಯೂಎಆರ್ ಸಲ್ಲಿಕೆಯಾಗಿಲ್ಲ: ನ್ಯಾಕ್ ನಿಯಮಾವಳಿಯಂತೆ ಪ್ರತಿ ವರ್ಷ ವಿಶ್ವವಿದ್ಯಾಲಯಗಳು ತಾನು ಕೈಗೊಂಡ ವಾರ್ಷಿಕ ಗುಣಾತ್ಮಕ ಕಾರ್ಯಕ್ರಮಗಳ ಬಗ್ಗೆ ಸಮಗ್ರ ವರದಿಯನ್ನು ನ್ಯಾಕ್ಗೆ ಸಲ್ಲಿಸಬೇಕು. ಶೈಕ್ಷಣಿಕ ಮತ್ತು ಆಡಳಿತ್ಮಾತ್ಮಕ ವಿಷಯಗಳಲ್ಲಿ ಗುಣಾತ್ಮಕ ಪದ್ಧತಿಯ ರೂಪುರೇಷೆ ಸಿದ್ಧಪಡಿಸುವುದು ಐಕ್ಯೂಎಸಿ ಪ್ರಮುಖ ಧ್ಯೇಯ. ಆದರೆ, ಯಾವುದೇ ವರದಿಯನ್ನು ನ್ಯಾಕ್ಗೆ ಸಲ್ಲಿಸದಿರುವುದು ಕಟು ಸತ್ಯವಾಗಿದೆ.
ಕಮಿಂಗ್ ಸೂನ್!: ಮಾನ್ಯತೆ ರದ್ದುಗೊಳ್ಳುವ ಆರು ತಿಂಗಳ ಮೊದಲೇ ವಿವಿ ಮರು ಮಾನ್ಯತೆಗೆ ತನ್ನ ವೆಬ್ಸೈಟ್ ಮೂಲಕ ನ್ಯಾಕ್ ಅಧಿಕೃತ ವೆಬ್ಸೈಟ್ಗೆ ಅರ್ಜಿ ಸಲ್ಲಿಸಬೇಕು. ನ್ಯಾಕ್ ಮಾರ್ಗಸೂಚಿಯಂತೆ ವಿವಿ ತನ್ನ ಅಧಿಕೃತ ವೆಬ್ಸೈಟ್ ಇರಬೇಕು. ಆದರೆ, ವಿವಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಹಳ ಮುಖ್ಯವಾದ ಲಿಂಕ್ ಐಕ್ಯೂಎಸಿ ಬಗ್ಗೆ ಕ್ಲಿಕ್ ಮಾಡಿದರೆ ಕಮಿಂಗ್ ಸೂನ್... ಎಂಬ ಮಾಹಿತಿಯಷ್ಟೇ ಬರುತ್ತಿದೆ.
ಪ್ರಕ್ರಿಯೆ ಹಂತದಲ್ಲಿದೆ: ಯುಜಿಸಿ ಅಂಗ ಸಂಸ್ಥೆಯಾದ ನ್ಯಾಕ್ ಸಂಸ್ಥೆಯು 2012ನೇ ಸಾಲಿನಲ್ಲಿ ದೇಶಾದ್ಯಂತ 68 ಅಕಾಡೆಮಿಕ್ ಸ್ಟಾಫ್ ಕಾಲೇಜುಗಳ ಮೌಲ್ಯಮಾಪನ ಮತ್ತು ಪರಿಶೀಲನೆ ನಡೆಸಿದೆ. ಈ ಪೈಕಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 58 ಅಂಕಗಳನ್ನು ನೀಡಿದೆ. ಅಂದರೆ, ಉತ್ತಮ, ಮಧ್ಯಮ ಹಾಗೂ ಯಾವುದೇ ಪ್ರಕ್ರಿಯೆ ಇಲ್ಲ ಎಂಬ ಮೂರು ದರ್ಜೆಗಳಲ್ಲಿ ವಿವಿ ಎರಡನೇ ದರ್ಜೆಗೆ ಸೇರಿದೆ.
ಬಿಎಡ್ ಸಂಯೋಜನೆ, ಮೂಲಸೌಕರ್ಯ ಕೊರತೆ ಸೇರಿದಂತೆ ಈ ಎಲ್ಲಾ ಗೊಂದಲ ನಡುವೆ ಸಿಲುಕಿರುವ ಬೆಂಗಳೂರು ವಿವಿಗೆ ನ್ಯಾಕ್ ಮರುಮಾ 'ಎ' ಗ್ರೇಡ್ ಸಿಗುವುದೇ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ.
ವೆಬ್ಸೈಟ್ನಲ್ಲಿ ಪ್ರಕಟಿಸಿಲ್ಲ
ಐದು ವರ್ಷಗಳಲ್ಲಿ ನ್ಯಾಕ್ಗೆ ಮರು- ಮಾನ್ಯತೆಗೆ ಅರ್ಜಿಸಲ್ಲಿಸುವಲ್ಲಿ ವಿಫಲವಾದ ಮದ್ರಾಸ್ ವಿಶ್ವವಿದ್ಯಾಲಯ ಗ್ರೇಡ್ ತೆಗೆದುಕೊಳ್ಳುವಲ್ಲಿಯೂ ವಿಫಲವಾಯಿತು. ಮದ್ರಾಸ್ ವಿವಿ ಕುಲಪತಿಯಾಗಿದ್ದ ಪ್ರೊ.ಆರ್. ಥಾಂಡವನ್ ಅವರ ಆಡಳಿತ ವೈಫಲ್ಯದಿಂದ ಈ ರೀತಿಯಾಗಿದೆ ಎಂದು ಹೇಳಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಬೆಂಗಳೂರು ವಿವಿ ಬಗ್ಗೆ ಹೆಚ್ಚಿನ ಗಮನವಹಿಸಿರುವ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಮೂಲ ಸೌಕರ್ಯಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೌಲ್ಯಮಾಪನ ನಡೆಸಿದ ವರದಿಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸುತ್ತೇನೆ ಎಂದು ಹೇಳಿದ್ದರು. ಆದರೆ, ಇದುವರೆಗೂ ಪ್ರಕಟಿಸಿಲ್ಲ.
ಇದೀಗ ತಾನೆ ಎಕ್ಯೂಎಆರ್ಗೆ ಸಮನ್ವಯಾಧಿಕಾರಿಯನ್ನು ನೇಮಕ ಮಾಡಿದ್ದೇವೆ. ಸದ್ಯದಲ್ಲೇ ನ್ಯಾಕ್ಗೆ ವರದಿ ಸಲ್ಲಿಸುತ್ತೇವೆ. ಮತ್ತೆ ವಿವಿಗೆ 'ಎ' ಗ್ರೇಡ್ ಸಿಗುತ್ತದೆ ಎಂಬ ನಂಬಿಕೆ ಇದೆ.
-ಪ್ರೊ.ಬಿ.ತಿಮ್ಮೇಗೌಡ,
ಕುಲಪತಿ, ಬೆಂವಿವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

