ಬೆಂಗಳೂರು ಗ್ರಾಮಾಂತರ

ಸೂರಿಲ್ಲದ ಬಡವರಿಗೆ 5 ವರ್ಷದೊಳಗೆ ಸೂರು

Published On :

ಕ.ಪ್ರ.ವಾರ್ತೆ ಟಿ ರಾಮನಗರ ಟಿ ಜೂ.24
ರಾಜ್ಯದಲ್ಲಿ ಸೂರಿಲ್ಲದ ಎಲ್ಲ ಬಡ ಕುಟುಂಬಗಳಿಗೂ ಇನ್ನು ಐದು ವರ್ಷದೊಳಗಾಗಿ ಸೂರು ಕಲ್ಪಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಿದೆ ಎಂದು ವಸತಿ ಸಚಿವ ಎಂ.ಎಚ್.ಅಂಬರೀಷ್ ಘೋಷಿಸಿದರು.
ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ರೋಟರಿ ಜಿಲ್ಲಾ 3190 ಹಾಗೂ ರೋಟರಿ ಬೆಂಗಳೂರು ಹೈಗ್ರೌಂಡ್ಸ್ ವತಿಯಿಂದ ಸೋಮವಾರ ನೂತನ ತಂತ್ರಜ್ಞಾನದೊಂದಿಗೆ ನಿರ್ಮಿಸಿರುವ ಬಸವ ವಸತಿ ಮನೆಗಳ ಹಕ್ಕು ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಹಲವು ಘೋಷಣೆಗಳ ಜಾರಿಗೆ ಕ್ರಮ ಕೈಗೊಂಡಿದೆ. ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಮನೆ ನಿರ್ಮಾಣಕ್ಕೆ ನೀಡುವ ಪ್ರೋತ್ಸಾಹ ಧನವನ್ನು ರು.1.20 ಲಕ್ಷಕ್ಕೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದರು.
ಸರ್ಕಾರದ ಸಂಕಲ್ಪ: ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸಲು ಕಾಂಗ್ರೆಸ್ ಸರ್ಕಾರ ಸಂಕಲ್ಪ ತೊಟ್ಟಿದೆ. ಬಡವರ ಬಗ್ಗೆ ಅತಿಯಾದ ಆಸಕ್ತಿ ವಹಿಸಿರುವ ತಮ್ಮ ಸರ್ಕಾರವು ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಂಡಿದೆ ಎಂದು ಅಂಬರೀಶ್ ತಿಳಿಸಿದರು.
ರಾಜ್ಯಾದ್ಯಂತ ವಸತಿ ರಹಿತರು, ಸೂರಿಲ್ಲದವರ ಪಟ್ಟಿ ಮಾಡಲು ಚಿಂತನೆ ನಡೆಸಲಾಗಿದೆ. ಲಭ್ಯತೆಯ ಆಧಾರದ ಮೇಲೆ ಹಂತ ಹಂತವಾಗಿ ಸೂರು ಕಲ್ಪಿಸುವ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ಹೇಳಿದರು.
ಬಡ ಜನತೆಗೆ ರು.1ಕ್ಕೆ 1 ಕೆಜಿ ಅಕ್ಕಿ, ಪರಿಶಿಷ್ಟರು ಮತ್ತು ಹಿಂದುಳಿದವರ ಸಾಲ ಮನ್ನಾ ಸಹಿತ ಈಗಾಗಲೇ ಬಡವರ ಪರವಾದ ಅನೇಕ ಯೋಜನೆಗಳು ಜಾರಿಯ ಘೋಷಣೆಯಾಗಿವೆ. ಪ್ರಣಾಳಿಕೆಯಂತೆ ಉಳಿದ ಕಾರ್ಯಕ್ರಮಗಳ ಅನುಷ್ಠಾನವೂ ಖಚಿತ ಎಂದರು.
ಬಡವರಿಂದ ಶ್ರೀಮಂತ: ಶ್ರೀಮಂತರು ಯಾರೂ ಕನ್ನಡ ಸಿನೆಮಾ ನೋಡೋದಿಲ್ಲ. ಅವರೇನಿದ್ದರೂ ಇಂಗ್ಲಿಷ್, ಹಿಂದಿ ಸಿನೆಮಾ ನೋಡುತ್ತಾರೆ. ಕನ್ನಡ ಸಿನೆಮಾ ನೋಡುವವರು ಬಡವರಷ್ಟೇ. ಅವರಿಂದಾಗಿಯೇ ನಾನು ಶ್ರೀಮಂತನಾದವನು. ಈಗ ವಸತಿ ಸಚಿವನಾಗಿ ಬಡವರ ಸೇವೆಗೆ ತೊಡಗಿಸಿಕೊಂಡಿರುವೆ ಎಂದು ತಿಳಿಸಿದರು.
ವಸತಿ ಸಚಿವನಾಗಿ ನನಗೆ ಇದೇ ಮೊದಲ ಕಾರ್ಯಕ್ರಮ. ಟಿ.ಬೇಕುಪ್ಪೆ ಗ್ರಾಮದ ಬಡವರಿಗೆ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾದ ಮನೆ ಹಾಗೂ ಅದರ ಹಕ್ಕು ಪತ್ರ ವಿತರಣೆಯಂತಹ ಕಾರ್ಯಕ್ರಮವೇ ಮೊದಲನೆಯದ್ದಾಗಿದ್ದಕ್ಕೆ ತುಂಬಾ ಸಂತಸವಾಗುತ್ತಿದೆ ಎಂದು ಅಂಬರೀಷ್ ಹರ್ಷ ವ್ಯಕ್ತಪಡಿಸಿದರು.
ಕಳೆದ ಅವಧಿಯಲ್ಲಿ ಪ್ರತಿಪಕ್ಷದ ಶಾಸಕರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಸರ್ಕಾರೇತರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸರ್ಕಾರದ ಮಹತ್ವಾಕಾಂಕ್ಷಿ ಬಸವ ಯೋಜನೆ ಮನೆಗಳ ನಿರ್ಮಾಣ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವುದು ನಿಜಕ್ಕೂ ಒಳ್ಳೆಯ ಕೆಲಸ ಎಂದು ಅವರು ಪ್ರಶಂಸಿಸಿದರು.
ಕ್ರಾಂತಿಕಾರಿ ಬದಲಾವಣೆ: ಕನಕಪುರವನ್ನು 25 ವರ್ಷ ಪ್ರತಿನಿಧಿಸಿದ್ದವರು ಏನೇನೂ ಅಭಿವೃದ್ಧಿ ಮಾಡಿಲ್ಲ. ತಾವೀಗ ಕನಕಪುರದ ಸರ್ವತೋಮುಖ ಅಭಿವೃದ್ಧಿ ಮತ್ತು ಕ್ರಾಂತಿಕಾರಿ ಬದಲಾವಣೆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಮೈಲುಗಲ್ಲು ಸ್ಥಾಪಿಸಿರುವುದಾಗಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಕೆ.ಶಿವಕುಮಾರ್ ತಮ್ಮ ಸಾಧನೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ತಮ್ಮ ಈ ಸಾಧನೆಗಳನ್ನು ನೋಡಿ ಜನತೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಅವರ ಋಣ ತೀರಿಸುವುದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಕನಕಪುರದ ಸಮಗ್ರ ಅಭಿವೃದ್ಧಿಯೇ ತಮ್ಮ ಪರಮೋಚ್ಚ ಗುರಿ ಎಂದು ಅವರು ಹೇಳಿದರು.
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ಕೇವಲ 40 ದಿನಗಳ ಅವಧಿಯಲ್ಲಿ 58 ಮನೆಗಳನ್ನು ನಿರ್ಮಿಸಿ ರಾಷ್ಟ್ರಕ್ಕೆ ಮಾದರಿಯಾಗಿದೆ.  ಕನಕಪುರದಲ್ಲಿ 75 ಎಕರೆ ಭೂಮಿ ಖರೀದಿಸಿ ಶ್ರೀ ಬಾಲ ಗಂಗಾಧರನಾಥ ಸ್ವಾಮಿ ಬಡಾವಣೆ ನಿರ್ಮಿಸುವ ಮೂಲಕ ಸೂರಿಲ್ಲದವರಿಗೆ ಸೂರು ಒದಗಿಸುವ ಹಾಗೂ ನಿವೇಶನ ಒದಗಿಸುವ ಕಾರ್ಯ ಹಮ್ಮಿಕೊಂಡಿರುವುದೂ ಮಾದರಿ ಯೋಜನೆಯಾಗಲಿದೆ ಎಂದರು.
ನಾನು ಕೈಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳ ಕುರಿತು ವಿರೋಧ ಪಕ್ಷದವರು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಹಾಗೂ ತಾಲೂಕಿನ ಜನತೆಯ ಸಂಬಂಧ ಭಕ್ತ-ಭಗವಂತನ ಸಂಬಂಧವಿದ್ದಂತೆ. ಅವರ ಅಭಿವೃದ್ಧಿಯೇ ನನಗೆ ಮುಖ್ಯ. ಅವರ ಸಹಕಾರದಿಂದ ಕನಕಪುರವನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿಸುವೆ ಎಂದು ತಿಳಿಸಿದರು.   
5 ಸಾವಿರ ಮನೆಗಳಿಗೆ ಬೇಡಿಕೆ:ಕನಕಪುರ ಪಟ್ಟಣದಲ್ಲಿ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪಟ್ಟಣಕ್ಕೆ ಇನ್ನೂ 2 ಸಾವಿರ ಹಾಗೂ ಗ್ರಾಮೀಣ ಪ್ರದೇಶಕ್ಕೆ 3 ಸಾವಿರ ಮನೆಗಳು ಬೇಕಿದೆ. ಈ ಮನೆಗಳನ್ನು ಮಂಜೂರು ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ವಸತಿ ಸಚಿವರೆದುರು ಶಿವಕುಮಾರ್ ಮುಂದಿಟ್ಟರು.  
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಮಹದೇವ ಪ್ರಸಾದ್ ಮತ್ತು  ರೋಟರಿ ಡಿಸ್ಟ್ರಿಕ್ 3190 ಗವರ್ನರ್ ಆರ್.ಬಿ. ಬದ್ರಿಪ್ರಸಾದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ಜಗದೀಶ್, ತಾ.ಪಂ. ಅಧ್ಯಕ್ಷೆ ನಾಗರತ್ನಮ್ಮ, ಜಿ.ಪಂ. ಸದಸ್ಯರಾದ ಮಾದೇವಿ, ವೆಂಕಟೇಶಯ್ಯ, ನಳಿನಿ ರವಿಶಂಕರ್, ಲಕ್ಷ್ಮಮ್ಮ,ತಹಸೀಲ್ದಾರ್ ದಾಕ್ಷಾಯಿಣಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ವಸತಿ ಸಚಿವ ಅಂಬರೀಶ್ ಅವರನ್ನು ಡಿ.ಕೆ.ಶಿವಕುಮಾರ್ ಮತ್ತು ಸಹೋದರ ಡಿ.ಕೆ.ಸುರೇಶ್ ಸನ್ಮಾನಿಸಿದರು. ಬಳಿಕ ಪುರಸಭೆ ವತಿಯಿಂದಲೂ ಸನ್ಮಾನ ನೆರವೇರಿತು. ಕನಪುರದಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಇದೇ ವೇಳೆ ಉದ್ಘಾಟಿಸಲಾಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.