ವಂಶವೃಕ್ಷ ನೀಡಿಕೆಗೆ ತಿಲಾಂಜಲಿ?
ಕ.ಪ್ರ.ವಾರ್ತೆ ಯಲಹಂಕ ಜೂ. 27-
ವಂಶವೃಕ್ಷ ನೀಡುವ ನೂರಾರು ವರ್ಷದಿಂದ ಆಚರಣೆ ಪದ್ಧತಿಗೆ ಬೆಂಗಳೂರು ಉತ್ತರ ತಾಲೂಕು ಕಂದಾಯ ಅಧಿಕಾರಿಗಳು ತಿಲಾಂಜಲಿ ನೀಡಿದ್ದಾರೆ.
ಒಂದು ಕುಟುಂಬದಲ್ಲಿನ ತಂದೆ, ತಾಯಿ, ಮಕ್ಕಳು, ಬದುಕಿರುವವರು, ಸಾವನ್ನಪ್ಪಿರುವವರು, ವಾರಸುದಾರರ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಸ್ಥಳೀಯ ಕಂದಾಯ ಕಾರ್ಯದರ್ಶಿ ಗ್ರಾಮದಲ್ಲಿ ಸಾಕ್ಷಿಗಳ ಸಮ್ಮುಖದಲ್ಲಿ ಕುಟುಂಬದವರು ಮತ್ತು ಸಾಕ್ಷಿಗಳ ಸಹಿ ಪಡೆದು ಬರೆದುಕೊಡುವ ದಾಖಲೆಯೇ ವಂಶವೃಕ್ಷ.
ಈ ದಾಖಲೆಯನ್ನು ನೂರಾರು ವರ್ಷದಿಂದ ಕಂದಾಯ ಅಧಿಕಾರಿಗಳು ನೀಡುತ್ತಿದ್ದರು. ಆದರೆ ಕಳೆದ ಐದಾರು ತಿಂಗಳಿನಿಂದ ಈ ದಾಖಲೆ ನೀಡುವ ಪದ್ಧತಿ ರದ್ದುಪಡಿಸಿದ್ದಾರೆ. ಭೂಮಿ ಮಾರುವವರು, ಕೊಳ್ಳುವವರು, ವಾರಸುದಾರರ ಮಾಹಿತಿ ದಾಖಲೆ ದೊರೆಯದೆ ತೂಂದರೆ ಅನುಭವಿಸುತ್ತಿದ್ದಾರೆ.
ಪರದಾಟ: ಹಕ್ಕು ಬದಲಾವಣೆ, ಆಸ್ತಿ ನೋಂದಣಿ ಸೇರಿದಂತೆ ಹಲವಾರು ಕಾರ್ಯಗಳಿಗೆ ಸಾರ್ವಜನಿಕರು ಪರದಾಡುವಂತಾಗಿದೆ. ಇದಕ್ಕೆ ಪರ್ಯಾಯವಾಗಿ ವಂಶ ವೃಕ್ಷವನ್ನು ಪಡೆಯಬೇಕಾದರೆ ಛಾಪಾ ಕಾಗದದಲ್ಲಿ ನೋಟರಿಯಿಂದ ಪ್ರಮಾಣ ಪತ್ರ ಮಾಡಿಸುಬೇಕು. ಛಾಪಾ ಕಾಗದ, ನೋಟರಿ, ಟೈಪಿಂಗ್ ಎಂದುನೂರಾರು ರೂಪಾಯಿ ಖರ್ಚು ಮಾಡಬೇಕಾಗಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ನಗರ ಪ್ರದೇಶಕ್ಕೆ ಅಥವಾ ಕೊರ್ಟ್ ಕಚೇರಿಗಳ ಬಳಿ ಹೋಗಿ ದಾಖಲೆ ಪಡೆಯಬೇಕು. ಇದಕ್ಕೆ ಸಮಯ ವ್ಯರ್ಥವಾಗುತ್ತದೆ ಎಂಬುದು ನಾಗರಿಕರ ದೂರು.
ಈ ಬಗ್ಗೆ ಅದ್ದೆ ವಿಶ್ವನಾಥಪುರದ ಕಂದಾಯ ಕಾರ್ಯದರ್ಶಿ ಮೋಹನ್ ಅವರು, 'ಇತ್ತಿಚಿನ ದಿನಗಳಲ್ಲಿ ಸ್ಥಳೀಯರು ವಂಶವೃಕ್ಷ ಬರೆಯುವುದಕ್ಕೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೆಲವರು ಇದೇ ರೀತಿ ಬರೆದುಕೊಡುವಂತೆ ದೌರ್ಜನ್ಯ ಮಾಡುತ್ತಿದ್ದಾರೆ. ಅಲ್ಲದೆ ಹಳ್ಳಿಗಳು ಹಿಂದಿನ ರೀತಿಯಲ್ಲಿರದೆ ಬೆಂಗಳೂರು ಸುತ್ತ ಮುತ್ತ ನಗರ ಪ್ರದೇಶಗಳಾಗಿ ಬೆಳೆದಿವೆ. ಸ್ಥಳೀಯರು ಯಾರು ಎಂದು ಕರಾರುವಕ್ಕಾಗಿ ಗುರ್ತಿಸಲು ಸಾಧ್ಯವಾಗದಿದ್ದಾಗ ವಂಶವೃಕ್ಷ ತಪ್ಪಾಗುತ್ತವೆ. ಇದರಿಂದ ನಮ್ಮ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕೆಲವರು ಕೋರ್ಟ್ ಕಚೇರಿಗೆ ಹೋಗಿ ಕಾರ್ಯದರ್ಶಿಗಳು, ಆರ್ಐಗಳು ಸಸ್ಪೆಂಡ್ ಆಗಿದ್ದಾರೆ. ಈ ದೃಷ್ಟಿಯಿಂದ ನಾವು ವಂಶವೃಕ್ಷ ದಾಖಲೆ ನೀಡುವುದನ್ನು ತಾಲೂಕಿನ ಎಲ್ಲಾ ಕಾರ್ಯದರ್ಶಿಗಳ ಸಂಘದಿಂದ ನಿರ್ಣಯ ತೆಗೆದುಕೊಂಡು ನಿಲ್ಲಿಸಿದ್ದೇವೆ' ಎನ್ನುತ್ತಾರೆ.
ಈ ನಿರ್ಣಯದ ಬಗ್ಗೆ ಯಲಹಂಕದ ತಹಶೀಲ್ದಾರ್ ಕಚೇರಿಯ ಉಪತಹಶೀಲ್ದಾರ್ ನರಸಿಂಹಮೂರ್ತಿ ಮಾತನಾಡಿ, ನೂರಾರು ವರ್ಷದಿಂದ ಆಚರಣೆಯಲ್ಲಿದ್ದ ಒಂದು ಪದ್ಧತಿಯನ್ನು ಏಕಾಏಕಿ ನಿಲ್ಲಿಸಲು ಬರುವುದಿಲ್ಲ. ದೂರುಗಳು ಬಂದರೆ ಅಂತಹ ಕಾರ್ಯದರ್ಶಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬೆಂಗಳೂರು ನಗರ ಜಿಲ್ಲೆ ಉಪವಿಭಾಗಾಧಿಕಾರಿ ಕಾಂತರಾಜು ಅವರನ್ನು ಮಾತನಾಡಿಸಿದಾಗ ವಂಶವೃಕ್ಷವನ್ನು ಕಂದಾಯ ಕಾರ್ಯದರ್ಶಿಗಳು ನೀಡದಿರುವ ಬಗ್ಗೆ ದೂರುಗಳು ಬರುತ್ತಿದ್ದು ದಾಖಲೆ ನೀಡಬಾರದು ಎಂದು ಆದೇಶವಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರಿಂದ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ದೂರಿನ ಬಗ್ಗೆ ನಾಗದಾಸನಹಳ್ಳಿಯ ಮರಿಯಣ್ಣ, ನೂರಾರು ವರ್ಷದಿಂದ ತಾತ ಮುತ್ತಾತಂದಿರ ದಾಖಲೆಯನ್ನು ಬೇಕಾದಾಗ ಗ್ರಾಮದಲ್ಲೇ ಪಡೆಯಬಹುದಿತ್ತು. ಆದರೆ ಇಂದು ನೂರಾರು ಖರ್ಚು ಮಾಡಿಕೊಂಡು ಅಫಿಡಾವಿಟ್ ತರಬೇಕು ಎನ್ನುತ್ತಾರೆ. ಉಚಿತವಾಗಿ ದೊರೆಯುತ್ತಿದ್ದ ದಾಖಲೆ ಈಗ ಖಚು ಮಾಡಿಕೊಂಡು ಅಲೆಯಬೇಕಾಗಿದೆ. ಇದು ಬಡವರಿಗೆ ಅಸಹಾಯಕರಿಗೆ ಕಷ್ಚದ ಕೆಲಸ ಎನ್ನುತ್ತಾರೆ.
-ರಾಮು ಕೊಲ್ಕಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

