'ಸಾಂಕ್ರಾಮಿಕ ರೋಗ ತಡೆಗೆ ಸಮುದಾಯದ ಸಹಕಾರ ಅವಶ್ಯ'
ಕ.ಪ್ರ. ವಾರ್ತೆ ಮಾಗಡಿ ಜೂ.28
ದೇಶಕ್ಕೆ ಮಾರಕವಾಗಿರುವ ಸಾಂಕ್ರಾಮಿಕ ಮಲೇರಿಯಾ ರೋಗ ತಡೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ ಸಮುದಾಯಗಳು ಸಹ ಭಾಗಿಯಾಗಿ ಒಗ್ಗಟ್ಟಾಗಿ ಜನಜಾಗೃತಿ ಮೂಡಿಸಲು ಸಹಕಾರಿಯಾಗಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಿಗಳ ನಿಯಂತ್ರಣಾಧಿಕಾರಿ ಡಾ. ಕೆ.ಎಂ. ಶ್ರೀನಿವಾಸನ್ ಹೇಳಿದರು.
ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೊಳ್ಳೆಗಳ ನಿಯಂತ್ರಣ ಒಂದೇ ಸಾಂಕ್ರಾಮಿಕ ಮಲೇರಿಯಾ ಹತೋಟಿಗೆ ಬಹುಮುಖ್ಯ ವಿಧಾನವಾಗಿದೆ. ಸೊಳ್ಳೆಗಳು ಶೇಖರಿಸಿಟ್ಟ ತೊಟ್ಟಿ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಸಾಂಕ್ರಾಮಿಕ ರೋಗಗಳು ಬಹಳ ಬೇಗ ಹರಡುತ್ತವೆ. ಮನೆಯಲ್ಲಿನ ನೀರಿನ ತೊಟ್ಟಿಗಳನ್ನು ಆಗಾಗ್ಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಛಗೊಳಿಸಬೇಕು. ಮನೆಯಂಗಳವನ್ನು ಶುಭ್ರವಾಗಿಟ್ಟುಕೊಳ್ಳಬೇಕು. ಮನೆ ಸುತ್ತಲ ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಂಡು ರಕ್ಷಣೆ ಮಾಡಿಕೊಳ್ಳಬೇಕು ಎಂದರಲ್ಲದೆ ಸೊಳ್ಳೆಗಳ ನಿಯಂತ್ರಣ ನಿಮ್ಮ ಕೈಯಲ್ಲಿದೆ ಎಂದು ಸ್ವಯಂ ರಕ್ಷಣಾ ವಿಧಾನಗಳನ್ನು ತಿಳಿಸಿಕೊಟ್ಟರು.
ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಇಲಾಖೆ ಜನ ಜಾಗೃತಿ ಮೂಡಿಸುತ್ತಿದೆ. ಇಲಾಖೆಯೊಂದಿಗೆ ನಾಗರಿಕರು ಸಹಕರಿಸುವ ಮೂಲಕ ಮಾರಕ ಸಾಂಕ್ರಾಮಿಕ ರೋಗ ತಡಗೆ ಇಲಾಖೆ ಸೂಚಿಸುವ ಮುಂಜಾಗ್ರತೆ ವಹಿಸಬೇಕು. ಆಗ ಮಾತ್ರ ರೋಗ ಹತೋಟಿಗೆ ತರಬಹುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಅನಿಲಕುಮಾರ್ ತಿಳಿಸಿದರು.
ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಶಶಾಂಕ್ ಮಾತನಾಡಿ ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರೊಂದಿಗೆ ಸಹಕರಿಸುವ ಮೂಲಕ ಸಕ್ರಿಯವಾಗಿ ರೋಗ ತಡೆಗೆ ಭಾಗವಹಿಸಿದ್ದಲ್ಲಿ ಮಲೇರಿಯಾ ನಿಯಂತ್ರಣ ಖಂಡಿತ ಸಾಧ್ಯವಿದೆ ಎಂದರು.
ನರ್ಸಿಂಗ್ ಸೂಪರಿಂಟೆಂಡೆಂಟ್ ವಲ್ಸಮ್ಮ, ಚಂದ್ರಶೇಖರ್, ರಾಮಚಂದ್ರ ನಾಯಕ್, ಆರ್. ರಂಗನಾಥ, ಸುಧಾಕರ್ ನಾಯಕ, ರಾಜಣ್ಣ, ನರಸಿಂಹಯ್ಯ, ತುಕಾರಾಂ, ನರಸಿಂಹಮೂರ್ತಿ, ರಘುನಂದನ್, ಶಿವಣ್ಣ, ಶಿವರಾಜು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಇತರರು ಭಾಗವಹಿಸಿದ್ದರು.
ಒಗ್ಗಟ್ಟಿನ ದುಡಿಮೆ ಪ್ರಗತಿಗೆ ನಾಂದಿ: ಧನಂಜಯ
ಮಾಗಡಿ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಗ್ರಾಮಾಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ.ಧನಂಜಯ ಅಭಿಪ್ರಾಯಪಟ್ಟರು.
ಇಲ್ಲಿನ ಚಿಕ್ಕಮುದಿಗೆರೆ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಬೆನ್ನೆಲಬು ರೈತ. ಗ್ರಾಮೀಣ ಭಾಗದ ರೈತರು ದೇಶದ ಅನ್ನದಾತರು. ಗ್ರಾಮಾಭಿವೃದ್ಧಿಗೆ ಪ್ರತಿಯೊಬ್ಬ ನಾಗರಿಕರ ಸೇವಾ ಮನೋಭಾವನೆ ಬಹಳ ಮುಖ್ಯ. ಗ್ರಾಮೀಣ ಜನತೆಯ ಆ ರೋಗ್ಯ, ಶಿಕ್ಷಣ, ಗ್ರಾಮ ನೈರ್ಮಲ್ಯ ಸುಧಾರಣೆಗೆ ಒತ್ತು ನೀಡಬೇಕು ಎಂದರು. ಪ್ರತಿ ಕುಟುಂಬ ವರ್ಗದವರೂ ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳಲು ಮುಂದಾಗಬೇಕು. ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ನೀರಿನ ಆಶ್ರಯಕ್ಕಾಗಿ ಗ್ರಾಮಗಳಲ್ಲಿನ ಕಟ್ಟೆಗಳನ್ನು ಉಳಿಸಿ ಸಂರಕ್ಷಿಸಬೇಕು. ಪರಿಸರ ಸಮತೋಲನ ಕಾಯ್ದುಕೊಳ್ಳಲು ಮರ-ಗಿಡಗಳನ್ನು ಬೆಳೆಸಬೇಕು. ನಿಮ್ಮೆಲ್ಲರ ಆಶೀರ್ವಾದಿಂದ ಚುನಾವಣೆಯಲ್ಲಿ ಗೆದ್ದಿದ್ದೇನೆ. ನಿಮ್ಮ ಋಣ ತೀರಿಸಲು ಸೇವೆ ಬದ್ಧನಾಗಿದ್ದೇನೆ. ಸರ್ಕಾರಿ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಚಿಕ್ಕಮುದಿಗೆರೆ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಳಾರಿ ಕಾವಲ್ ಪಿಡಿಓ ಎಸ್. ಲಕ್ಷ್ಮೀನಾರಾಯಣ ಸರ್ಕಾರದ ಯೋಜನಗಳ ಮಾಹಿತಿ ನೀಡಿದರು. ಗ್ರಾ.ಪಂ. ಕಾರ್ಯದರ್ಶಿ ರಮೇಶ್ ಫಲಾನುಭವಿಗಳ ಪಟ್ಟಿ ಓದಿ ಅನುಮೋದನೆ ಪಡೆದರು. ಉಪಾಧ್ಯಕ್ಷೆ ಚಿಕ್ಕಮ್ಮ, ಪಂಚಾಯ್ತಿ ಸದಸ್ಯರಾದ ರವೀಶ್, ರಾಜಣ್ಣ, ನಟರಾಜು, ಗಂಗರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

