ಕಾಂಗ್ರೆಸ್ ಚುನಾವಣಾ ಪ್ರಚಾರ ಆರಂಭ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಚುನಾವಣಾ ಪ್ರಚಾರವನ್ನು ಶನಿವಾರ ಬೆಳಗ್ಗೆ ಆರಂಭಿಸಿದೆ. ಪಕ್ಷದ ಹಿರಿಯ ಮುಖಂಡ, ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಲ್ಲಿನ ಡಿಕ್ರಾಸ್ ವಾರ್ಡ್ನಿಂದ ಆರಂಭವಾದ ಚುನಾವಣಾ ಪ್ರಚಾರ ಕಾರ್ಯ ನಗರದ ವಿವಿಧ ವಾರ್ಡುಗಳಲ್ಲಿ ನಡೆಯಿತು. ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಮಣೆ ಹಾಕದೆ ಪ್ರಾಮಾಣಿಕ ಮತ್ತು ನಿಷ್ಠ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡಿದೆ. ತನ್ಮೂಲಕ ಹೊಣೆಗೇಡಿ ರಾಜಕಾರಣವನ್ನು ದೂರ ಇಡುವ ಸಂದೇಶ ನೀಡಿದೆ. ದೊಡ್ಡಬಳ್ಳಾಪುರದ ಸಮಗ್ರ ಹಿತಾಸಕ್ತಿಯನ್ನು ಮುಖ್ಯವಾಗಿರಿಸಿಕೊಂಡು ಉತ್ತಮ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕೆ ಇಳಿಸಿದೆ. ಹೀಗಾಗಿ ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸುತ್ತಾರೆ ಎಂದರು.
ಪ್ರಸ್ತುತ ಆಡಳಿತಾರೂಢ ಪಕ್ಷಗಳ ಸ್ವಾರ್ಥ ರಾಜಕಾರಣ ಎಲ್ಲರನ್ನೂ ಕಂಗೆಡಿಸಿದೆ. ನಗರದ ಹಿತವನ್ನು ಸಂಪೂರ್ಣ ಬಲಿಕೊಟ್ಟವರಿಗೆ ಯಾವುದೇ ಕಾರಣಕ್ಕೂ ಜನಾಶೀರ್ವಾದ ಸಿಗದು. ಚುನಾವಣೆಗೆ ಅಭಿವೃದ್ಧಿಯ ದೊಡ್ಡ ಪಟ್ಟಿಗಳನ್ನು ಬಿಡುಗಡೆ ಮಾಡುವ ಜನ ನಿಜವಾಗಿಯೂ ತಾವು ಏನು ಮಾಡಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಟೀಕಿಸಿದರು. ವಿವಿಧ ವಾರ್ಡುಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತನೀಡುವಂತೆ ಮನವಿ ಮಾಡಿದರು.
ಚುನಾವಣಾ ಪ್ರಚಾರ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್, ಪಕ್ಷದ ತಾಲೂಕು ಅಧ್ಯಕ್ಷ ಅಪ್ಪಕಾರನಹಳ್ಳಿ ವೆಂಕಟೇಶ್, ನಗರಾಧ್ಯಕ್ಷ ತಿ.ರಂಗರಾಜು, ಮುಖಂಡರಾದ ಲಿಂಗನಹಳ್ಳಿ ಲಕ್ಷ್ಮೀಪತಿ, ಡಿ.ವಿ.ಅಶ್ವತ್ಥಪ್ಪ ಸೇರಿದಂತೆ ಪಕ್ಷದ ಅಭ್ಯರ್ಥಿಗಳು, ಕಾರ್ಯಕರ್ತರು, ಮುಖಂಡರು ಹಾಜರಿದ್ದರು.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ರಾಮನಗರ: ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಿದ್ದು, ನಗರ ವ್ಯಾಪ್ತಿಯಲ್ಲಿ 10 ಸಾವಿರ ನಿವೇಶನಗಳ ಹಂಚಿಕೆ ಘೋಷಣೆ ಮಾಡಲಾಗಿದೆ.
ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಸಯದ್ ಜಿಯಾವುಲ್ಲಾ, ಮುಖಂಡರಾದ ಮರಿದೇವರು, ಕೆ.ರಮೇಶ್ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾವೇರಿ ಹಾಗೂ ಮಂಚನಬೆಲೆ ಜಲಾಶಯಗಳಿಂದ ಶಾಶ್ವತ ನೀರು ಪೂರೈಕೆ ಯೋಜನೆ ರೂಪಿಸುವ ಭರವಸೆ ನೀಡಲಾಗಿದೆ. ಕನಿಷ್ಠ 2 ದಿನಕ್ಕೊಮ್ಮೆ ಸಮರ್ಪಕ ನೀರು ಪೂರೈಕೆ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಬೀಡಿ ಕಾರ್ಮಿಕರು, ಕೊಳಗೇರಿ ನಿವಾಸಿಗಳಿಗೆ ಮನೆ ಹಂಚಿಕೆ, ಉದ್ಯಾನವನಗಳ ನಿರ್ಮಾಣ, ನಗರಸಭೆ ಉಪ ಕಚೇರಿಗಳ ಸ್ಥಾಪನೆ, ಸೀರೆಹಳ್ಳಕ್ಕೆ ತಡೆಗೋಡೆಯ ಘೋಷಣೆ ಮಾಡಲಾಗಿದೆ.
ರೇಷ್ಮೆ ಆಮದಿನ ಮೇಲಿದ್ದ ಶುಲ್ಕವನ್ನು ಶೇಕಡಾ 5ರಿಂದ 15ಕ್ಕೆ ಏರಿಸಿರುವುದು ರೈತರು ಹಾಗೂ ರೀಲರ್ಗಳಿಗೆ ಅನುಕೂಲವಾಗಲಿದೆ. ಇದನ್ನು ಶೇ.25ಕ್ಕೆ ಏರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು
ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಜಿಯಾವುಲ್ಲಾ ತಿಳಿಸಿದರು.
ಅಧಿಕಾರದಲ್ಲಿದ್ದ ಜೆಡಿಎಸ್ ವಿರುದ್ಧ ನಗರದ ಜನತೆ ತಿರುಗಿ ಬಿದ್ದಿದ್ದು, ಕಾಂಗ್ರೆಸ್ ಕಡೆ ಒಲವು ತೋರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಎನ್ಆರ್ ವೆಂಕಟೇಶ್, ಕೃಷ್ಣಮೂರ್ತಿ, ಜಯಣ್ಣ, ಆರಿಫ್ ಖುರೇಶಿ, ಬಿ.ಸಿ. ಪಾರ್ವತಮ್ಮ, ಕಾಂತರಾಜ ಪಟೇಲ್, ದೊಡ್ಡಗಂಗವಾಡಿ ಗೋಪಾಲ್, ಪಾದ್ರಳ್ಳಿ ರಾಜು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

