ರಿಯಲ್ ಎಸ್ಟೇಟ್ ಮಾಫಿಯಾ ಮುಗಿಲು ಮುಟ್ಟಿದ ಅಟ್ಟಹಾಸ
- ಮತ್ತೀಕೆರೆ ಜಯರಾಮ್
ರಾಮನಗರ: ಮಣ್ಣಿನ ಮಕ್ಕಳ ಸಾಮ್ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಅಟ್ಟಹಾಸ ಮುಗಿಲು ಮುಟ್ಟಿದೆ. ಪ್ರಭಾವಿಗಳ ಕಪಿಮುಷ್ಟಿಯಲ್ಲಿರುವ ಕಂದಾಯ ಇಲಾಖೆ ಭ್ರಷ್ಟ ಕೂಪಕ್ಕೆ ಸಿಲುಕಿ ಅದೆಷ್ಟೋ ರೈತರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಗಂಗಯ್ಯ ಆತ್ಮಹತ್ಯೆ ಈ ಜಿಲ್ಲೆಯಲ್ಲಿ ನಲುಗಿದ ರೈತರ ದಯನೀಯ ಸ್ಥಿತಿಗೆ ಕೈಗನ್ನಡಿಯಾಗಿದೆ.
ವಿಧಾನಸೌಧದ ನಿರ್ಮಾತೃಕೆಂಗಲ್ ಹನುಮಂತಯ್ಯ, ಮಣ್ಣಿನಮಗ ಎಚ್.ಡಿ.ದೇವೇಗೌಡ, ಅವರ ಮಗ ಎಚ್.ಡಿ.ಕುಮಾರಸ್ವಾಮಿ ರಾಮನಗರದಿಂದಲೇ ಗೆದ್ದು ಮುಖ್ಯಮಂತ್ರಿ ಗದ್ದುಗೆ ಏರಿದವರು. ಈಗಲೂ ಪ್ರಭಾವಿ ರಾಜಕಾರಣಿಗಳೇ ಜಿಲ್ಲೆ ಪ್ರನಿಧಿಸುತ್ತಿದ್ದರೂ ರಾಮನಗರದಲ್ಲಿ ರಾಜಕೀಯ ಅರಾಜಕತೆ ಎದುರಾಗಿದೆ. ಈ ಪರಿಣಾಮ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದ್ದು, ಅಧಿಕಾರಿಗಳ ಸ್ವೇಚ್ಛಾಚಾರ ಮೇರೆ ಮೀರಿದೆ.
ನೆರವಿಗೆ ನಿಲ್ಲುವವರಿಲ್ಲ: ಆರು ವರ್ಷ ತುಂಬುವ ಮೊದಲೇ ಇಲ್ಲಿನ ಜಿಲ್ಲಾಧಿಕಾರಿ ಕುರ್ಚಿಗೇರಿದವರು 9 ಬಾರಿ ಬದಲಾಗಿದ್ದಾರೆ. ಆರು ಉಸ್ತುವಾರಿ ಸಚಿವರು ಬಂದು ಹೋಗಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದ ಈ ಜಿಲ್ಲೆ ಉಸ್ತುವಾರಿ ಸಚಿವರೇ ಇಲ್ಲದಂತಹ ಶೂನ್ಯ ಸ್ಥಿತಿ ಕಂಡಿದೆ. ಸಂಸದರು ಇತ್ತ ಗಮನ ಹರಿಸುತ್ತಲೇ ಇಲ್ಲ. ಇನ್ನು ಜಿಲ್ಲೆ ಶಾಸಕರು ಜನಪರ ಕಾಳಜಿ ತೋರಿದ್ದು ಅಷ್ಟಕ್ಕಷ್ಟೇ. ಅಧಿಕಾರಿಗಳಿಗೆ ಲಗಾಮು ಹಾಕೋರಿಲ್ಲ.
ಬೆಂಗಳೂರಿನ ಮಗ್ಗುಲಲ್ಲಿರುವ ಈ ಜಿಲ್ಲೆಯಲ್ಲಿ ಆರೇಳು ವರ್ಷದಿಂದ ರಿಯಲ್ ಎಸ್ಟೇಟ್ ಹಾವಳಿ ಹೆಚ್ಚಿದೆ. ಇಲ್ಲಿರುವ ಗೋಮಾಳ, ಕೆರೆ, ಕಟ್ಟೆ, ಸ್ಮಶಾನ, ಅರಣ್ಯ ಭೂಮಿಯೂ ಕಬಳಿಕೆಯಾಗುತ್ತಿದೆ. ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಪ್ರಭಾವಿಗಳಿಗೆ ಪರಭಾರೆ ಮಾಡಿಕೊಡುವ ಅಕ್ರಮದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ತೊಡಗಿದ್ದಾರೆ. ಇಷ್ಟು ಸಾಲದೆನ್ನುವಂತೆ, ಖಾಸಗಿ ಸ್ವತ್ತಿನ ಕಬಳಿಕೆಗೂ ಕುತಂತ್ರ ನಡೆದಿದೆ. ಯಾರದೋ ಹೆಸರಿನಲ್ಲಿರುವ ಆಸ್ತಿಗೆ ಮತ್ತಿನ್ಯಾರನ್ನೋ ಮಾಲೀಕರನ್ನಾಗಿಸಿ ಕಂದಾಯ ಇಲಾಖೆ ಸಿಬ್ಬಂದಿ ಕೈಚಳಕ ತೋರುತ್ತಿದ್ದಾರೆ. ಮೂಲ ಮಾಲೀಕರು ತಮ್ಮದೇ ಆಸ್ತಿ ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರಿ, ವರ್ಷಾನುಗಟ್ಟಲೆ ಪರದಾಡುತ್ತಿರುವಂತಹ ಅದೆಷ್ಟೋ ಪ್ರಕರಣಗಳು ನಮ್ಮ ಕಣ್ಮುಂದೆ ಇವೆ.
ಸರ್ವೆಯಲ್ಲಿ ಕರಾಮತ್ತು : ಜಮೀನಿನ ಅಳತೆ, ನಕಾಶೆ ಪ್ರತಿ, ಪೋಡಿ ಕೆಲಸ ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ದೊಡ್ಡ ಮಟ್ಟದ ಗೋಲ್ಮಾಲ್ ನಡೆದುಕೊಂಡು ಬಂದಿದೆ. ಬಕಾಸುರರಿಂದ ತುಂಬಿ ತುಳುಕುತ್ತಿರುವ ಭೂ ಮಾಪನ ಕಚೇರಿಗಳಲ್ಲಿ ಬಡ ರೈತರ ಗೋಳು ಕೇಳುವವರಿಲ್ಲ.
ವಿಲೇ ಆಗದ ಅರ್ಜಿ : ಪಹಣಿ ಸಹಿತ ಭೂ ದಾಖಲೆಗಳು ಕೈ ಬರಹದಲ್ಲಿದ್ದಾಗ ಕಂದಾಯ ಇಲಾಖೆ ಸಿಬ್ಬಂದಿ ಮನಸೋ ಇಚ್ಛೆ ಬರೆದಿಟ್ಟು, ರೈತರ ನೆಮ್ಮದಿಗೆ ಭಂಗ ತಂದಿಟ್ಟಿರುವ ನಿದರ್ಶನಗಳು ಸಹಸ್ರಾರು ಇವೆ. ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣದಲ್ಲೂ ತೀರ್ಪು ಆಧರಿಸಿ ದಾಖಲೆ ಸಿದ್ಧಪಡಿಸಿಲ್ಲ. ಪಹಣಿಯಲ್ಲಿ ಮಾಲೀಕರ ಜತೆಗೆ ಬೇರೆ ಇನ್ಯಾರದ್ದೋ ಹೆಸರು ಕಾಣಿಸಿ, ಗೊಂದಲ ಮಾಡಿಟ್ಟ ತಾಜಾ ನಿದರ್ಶನ ಚನ್ನಪಟ್ಟಣದ ಹನುಮಾಪುರದೊಡ್ಡಿ ಗ್ರಾಮದಲ್ಲಿದೆ.
ಆ ಗ್ರಾಮದ ಭೂ ಮಾಲೀಕರೊಬ್ಬರ ಪಹಣಿಯಲ್ಲಿ ಅವರ ಹೆಸರಿನೊಂದಿಗೆ ನೆರೆ ಗ್ರಾಮದ ಮತ್ತೊಬ್ಬ ಹೆಸರನ್ನು ಕೂರಿಸಲಾಗಿದೆ. ಕಂದಾಯ ಇಲಾಖೆಯೇ ಮಾಡಿರುವ ಈ ತಪ್ಪನ್ನು ಸರಿಪಡಿಸುವಂತೆ ಭೂ ಮಾಲೀಕರ ಕುಟುಂಬದವರು ನಾಲ್ಕಾರು ವರ್ಷದಿಂದ ತಾಲೂಕು ಕಚೇರಿಗೆ ಅಲೆಯುತ್ತಲೇ ಇದ್ದಾರೆ. ಇನ್ನು, ಅದೇ ಗ್ರಾಮದಲ್ಲಿ ಒಂದಲ್ಲಾ 4 ಬಾರಿ ಕ್ರಯವಾಗಿ ಕೈ ಬದಲಾದ ಜಮೀನಿನ ಮಾಲೀಕತ್ವ ಮತ್ತಿನ್ಯಾರದೋ ಹೆಸರಲ್ಲಿರುವುದು ಕಂದಾಯ ಇಲಾಖೆ ವೈಫಲ್ಯಕ್ಕೆ ಸಾಕ್ಷಿ.
ಭೂ ಕ್ರಯ ತಾಪತ್ರಯ: ರಾಮನಗರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರು, ಉದ್ಯಮಿಗಳು, ಹೊರ ರಾಜ್ಯ ಮತ್ತು ಜಿಲ್ಲೆಗಳ ಶ್ರೀಮಂತರ ಭಾರಿ ಪ್ರಮಾಣದಲ್ಲಿ ಕೃಷಿ ಭೂಮಿ ಖರೀದಿಸಿದ್ದಾರೆ. ಹೊರಗಿನವರು ಕಪ್ಪು ಹಣ ಹೂಡಿ ಖರೀದಿಸಿದ ಜಮೀನಿನ ಖಾತೆಗಳು ಸರಾಗವಾಗಿಯೇ ನಡೆಯುತ್ತವೆ. ಆದರೆ, ರೈತರು ಜಮೀನು ಖರೀದಿಸುವುದಕ್ಕೆ ಹಣ ಹೊಂದಿಸುವುದಕ್ಕಿಂತಲೂ ಖಾತೆ ಬದಲಾವಣೆ ತಡೆದು, ಅಧಿಕಾರಿಗಳು ನೀಡುತ್ತಿರುವ ನೊಟೀಸ್ಗೆ ಉತ್ತರಿಸಲು ದಾಖಲೆ ಮತ್ತು ಅದರೊಟ್ಟಿಗೆ ಕೊಡಲು ಲಂಚ ಹೊಂದಿಸುವುದೇ ದೊಡ್ಡ ತಲೆನೋವು. ರು.1 ಲಕ್ಷಕ್ಕಿಂತ ಕಡಿಮೆ ಮೊತ್ತದ ಜಮೀನು ಖರೀದಿಗೂ ನೊಟೀಸ್ ನೀಡಿದ ನಿದರ್ಶನಗಳುಂಟು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

