ಬೋರ್‌ವೆಲ್‌ನ ವಿದ್ಯುತ್‌ತಂತಿ ತಗುಲಿ ಮಗು ಸಾವು
ಕನಕಪುರ: ರಸ್ತೆಬದಿಯಲ್ಲಿ ಆಟವಾಡುತ್ತಿದ್ದ ಮಗುವೊಂದು ಬೋರ್‌ವೆಲ್‌ನ ವಿದ್ಯುತ್‌ತಂತಿ ತಗುಲಿ ದಾರುಣವಾಗಿ ಮೃತಪಟ್ಟ ಘಟನೆ ಕನಕಪುರದ ಖಾಲಕ್ ನಗರದಲ್ಲಿ ನಡೆದಿದೆ.
ನತದೃಷ್ಟ ಮಗು ಫಾರೂಕಿಯಾ ಮಸೀದಿ ಸಮೀಪದ ನಿವಾಸಿಗಳಾದ ಸುಭಾನ್ ಹಾಗೂ ರಫೀನಾ ದಂಪತಿಗಳ ಎರಡೂವರೆ ವರ್ಷಗಳ ಅಫ್‌ನಾಸ್‌ಎಂದು ತಿಳಿದು ಬಂದಿದೆ.
ಘಟನೆಯ ವಿವರ: ನೀರು ಸರಬರಾಜು ಮಾಡಲು ನಿರ್ಮಿಸಿದ್ದ ಕೊಳವೆ ಬಾವಿಗೆ ಪುರಸಭೆಯು ನೆಲಮಟ್ಟದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಭದ್ರತೆಯ ಕೊರತೆ ಹಾಗೂ ಹೊರಗುತ್ತಿಗೆದಾರರ ನಿರ್ಲಕ್ಷ್ಯವೇ ಅಮಾಯಕ ಕೂಸಿನ ಸಾವಿಗೆ ಕಾರಣವೆಂದು ತಿಳಿದುಬಂದಿದೆ.
ಆಟವಾಡುತ್ತಿದ್ದ ಮಗು ಅಪಾಯವನ್ನು ತಿಳಿಯದೆ ತೆರೆದಿದ್ದ ಸ್ವಿಚ್‌ಬೋರ್ಡ್‌ಗೆ ಕೈಹಾಕಿದ ತಕ್ಷಣ ತೀವ್ರ ವಿದ್ಯುದಾಘಾತಕ್ಕೆ ಸಿಲುಕಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗುವನ್ನು ಚಿಕಿತ್ಸೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಜನರು ಪುರಸಭೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬೇಜವಾಬ್ದಾರಿಯಿಂದ ವರ್ತಿಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಪುರಸಭಾ ಮುಖ್ಯಾಧಿಕಾರಿ ಮಾಯಣಗೌಡ, ಹೊರಗುತ್ತಿಗೆ ಸಿಬ್ಬಂದಿ ರಾಮಕೃಷ, ಮೆಹಬೂಬ್ ಸಾಬ್, ವೇಣು ಹಾಗೂ ನಿರ್ಲಕ್ಷ್ಯತೆ ತೋರಿದ ಕಿರಿಯ ಅಭಿಯಂತರ ವಿಜಯಕುಮಾರ್ ಅವರನ್ನು ಅಮಾನತುಗೊಳಿಸಲು ಶಿಫಾರಸು ಮಾಡಿ ನಗರಾಭಿವೃದ್ಧಿ ಇಲಾಖೆಗೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.
ಚುನಾವಣಾ ಪ್ರಚಾರದ ಭರಾಟೆಯಲ್ಲಿದ್ದ ಶಾಸಕ ಡಿ.ಕೆ.ಶಿವಕುಮಾರ್, ಮುಖಂಡರುಗಳಾದ ಡಿ.ಕೆ.ಸುರೇಶ್, ಜಿಪಂಸದಸ್ಯ ಇಕ್ಬಾಲ್‌ಹುಸೇನ್,ಮಾಜಿ ವಿಪ ಸದಸ್ಯ ಎಸ್.ರವಿ, ಮೊದಲಾದವರು ಸ್ಥಳಕ್ಕೆ ಭೇಟಿನೀಡಿ ಸಂತಾಪ ಸೂಚಿಸಿದ್ದಾರೆ. ಘಟನಾಸ್ಥಳಕ್ಕೆ ವೃತ್ತನಿರೀಕ್ಷಕ ಧನಂಜಯ, ಉಪನಿರೀಕ್ಷಕ ಆಶೋಕ್‌ಕುಮಾರ್ ಆಗಮಿಸಿ ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

