ರೈತರಿಂದ ಖರೀದಿಸುವ ಹಾಲಿನ ಬೆಲೆ ಹೆಚ್ಚಳ
ಚನ್ನಪಟ್ಟಣ: ಹಾಲಿನ ಮಾರಾಟ ದರ ಹೆಚ್ಚಳಮಾಡಿದ್ದರೂ ರೈತರಿಗೆ ಪರಿಷ್ಕೃತ ದರ ನೀಡಲು ಮೀನಾಮೇಷ ಎಣಿಸುತ್ತಿದ್ದ ಬಮೂಲ್ ಕೊನೆಗೂ ಹೋರಾಟಕ್ಕೆ ಮಣಿದು ರೈತರಿಂದ ಖರೀದಿಸುವ ಹಾಲಿನ ಬೆಲೆ ಹೆಚ್ಚಳಮಾಡಿದೆ.
ಶುಕ್ರವಾರ ನಡೆದ ಆಡಳಿತ ಮಂಡಲಿ ಸಭೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ ರೈತರು ಖರೀದಿಸುವ ಪ್ರತಿಲೀಟರ್ ಹಾಲಿಗೆ 2.40 ಪೈಸೆ ದರ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಏ.1 ರಿಂದ ಜಾರಿಗೆ ಬರಲಿದೆ. ಇದೀಗ ಪ್ರತಿ ಲೀಟರ್ ಹಾಲಿಗೆ ಬಮೂಲ್ 19.50 ರು. ನೀಡುತ್ತಿದ್ದು ಏ.1 ರಿಂದ ಪ್ರತಿಲೀಟರ್ ಹಾಲಿಗೆ 21.90 ರು. ನೀಡಲಿದೆ, ಇದರ ಜತೆಗೆ ಸರ್ಕಾರ ಪ್ರತಿಲೀಟರ್ ಹಾಲಿಗೆ 2 ರು. ಸಹಾಯಧನ ನೀಡುತ್ತಿದ್ದು ರೈತರಿಗೆ ಪ್ರತಿಲೀಟರ್ ಹಾಲಿಗೆ 23.90 ರು. ದೊರೆಯಲಿದೆ.
ಹೋರಾಟಕ್ಕೆ ಮಣಿದ ಒಕ್ಕೂಟ: ಬರದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಗ್ರಾಹಕರಿಗೆ ಹೊರೆಯಾದರೂ ಪ್ರತಿಲೀಟರ್ ಹಾಲಿಗೆ ಕಳೆದ ತಿಂಗಳು ಮೂರು ರು. ಹೆಚ್ಚಳ ಮಾಡಿತ್ತು.
ಆದರೆ ಬೆಂಗಳೂರು ಹಾಲು ಒಕ್ಕೂಟ ರೈತರಿಗೆ ಹೆಚ್ಚಿನ ದರ ನೀಡದೆ ಹಳೆ ದರಕ್ಕೆ ಖರೀದಿ ಮಾಡಿ ಹೊಸದರದಲ್ಲಿ ಮಾರಾಟ ಮಾಡುತಿತ್ತು. ಬರದ ಹಿನ್ನೆಲೆಯಲ್ಲಿ ಮೇವು, ಪಶು ಆಹಾರ, ಔಷಧ ಸೇರಿದಂತೆ ಹೈನೋದ್ಯಮ ದುಬಾರಿ ಎನಿಸಿದ ಪರಿಣಾಮ ಹಾಲಿನ ಬೆಲೆ ಹೆಚ್ಚಳ ಮಾಡುವಂತೆ ರೈತಸಂಘ ದನಿ ಎತ್ತಿದ್ದು ಇದಕ್ಕೆ ಮಂಡಲಿಯ ಕೆಲ ನಿರ್ದೇಶಕರು ದನಿಗೂಡಿಸಿದ್ದರು.
ಹೋರಾಟಕ್ಕೆ ನಿರ್ಣಯ: ರೈತರಿಗೆ ಹಾಲಿನ ದರ ಹೆಚ್ಚಳ ಮಾಡದ ಬಮೂಲ್ ಅಧ್ಯಕ್ಷರು ಮತ್ತು ಅಧಿಕಾರಿಗಳ ಕ್ರಮವನ್ನು ಖಂಡಿಸಿ ಮಂಡಲಿ ನಿರ್ದೇಶಕರಾದ ಎಸ್. ಲಿಂಗೇಶ್ಕುಮಾರ್, ಪಿ. ನಾಗರಾಜು,
ಆನೇಕಲ್ ರಮೇಶ್, ಕನಕಪುರ ನಟೇಶ್ ಸೇರಿದಂತೆ ಸಾಕಷ್ಟು ನಿರ್ದೇಶಕರು ಹಾಲು ಉತ್ಪಾದಕರೊಂದಿಗೆ ಸೇರಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಇದರಿಂದ ಎಚ್ಚೆತ್ತುಕೊಂಡ ಬಮೂಲ್ ಹಾಲಿನ ದರ ಹೆಚ್ಚಳ ಮಾಡುವ ಮೂಲಕ ಪ್ರತಿಭಟನೆಎದುರಿಸುವುದನ್ನು ತಪ್ಪಿಸಿಕೊಂಡಿದೆ.
ಕಾರ್ಯದರ್ಶಿಗಳಿಗೂ ಯುಗಾದಿ ಕೊಡುಗೆಣ ಇಂದಿನ ಬಮೂಲ್ ಆಡಳಿತ ಮಂಡಲಿ ಸಭೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಮತ್ತು ನೌಕರಿರಿಗೆ ಯುಗಾದಿ ಕೊಡುಗೆ ನೀಡಿದ್ದು ಪ್ರತಿಲೀಟರ್ ಹಾಲಿಗೆ 15 ಪೈಸೆ ಹಣವನ್ನು ಕಾರ್ಯದರ್ಶಿಗಳು ಮತ್ತು ನೌಕರರಿಗೆ ನೀಡಲಿದೆ.
ಹೋರಾಟಕ್ಕೆ ಸಂದ ಜಯ: ಬರದಿಂದ ನಲುಗಿರುವ ರೈತರಿಗೆ ಹೈನೋದ್ಯಮ ಅತ್ಯಗತ್ಯವಾಗಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಪರ ಒಕ್ಕೂಟ ನಿಲ್ಲಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ನಾವು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಮಂಡಲಿ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್ ತಿಳಿಸಿದ್ದಾರೆ. ಒಕ್ಕೂಟ ಪ್ರತಿ ದಿನ 10 ಲಕ್ಷ ಲೀಟರ್ಗೂ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದು ಲಕ್ಷಾಂತರ ಕುಟುಂಬಗಳು ಹೈನೋದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿದ್ದು ಬರದ ಹಿನ್ನೆಲೆಯಲ್ಲಿ ಮೇವಿನ ಸಮಸ್ಯೆ ತಲೆದೋರಿದ್ದು ಹೈನೋದ್ಯಮವನ್ನೇ ನಂಬಿರುವ ರೈತರನ್ನು ರಕ್ಷಿಸಲು ಒಕ್ಕೂಟ ಖರೀದಿಸುವ ಹಾಲಿನ ದರಹೆಚ್ಚಳ ಮಾಡಬೇಕಾದ್ದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಸಹಾಯಧನ ನೀಡಿ: ಸರ್ಕಾರ ರೈತರಿಗೆ ಪ್ರತಿ ಲೀಟರ್ ಹಾಲಿಗೆ 2 ರು. ಸಹಾಯಧನ ನೀಡುತ್ತಿದ್ದು, ಕಳೆದ 5ತಿಂಗಳಿಂದ ಸಹಾಯ ಧನ ಬಿಡುಗಡೆ ಮಾಡದಿದ್ದು ಇದರಿಂದಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯ ರೈತರಿಗೆ 30ಕೋಟಿ ರು. ಗಳಿಗೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಬೇಕಿದ್ದು ಬರದಿಂದ ಕಂಗಾಲಾಗಿರುವ ರೈತರಿಗೆ ಈ ಹಣ ನೀಡಿದರೆ ಸಾಕಷ್ಟು ಅನುಕೂಲವಾಗಲಿದೆ.
12 ಕೋಟಿ ಏನಾಯ್ತು: ಸರ್ಕಾರ ದರ ಹೆಚ್ಚಳಮಾಡಿದ ದಿನಕ್ಕೂ ಬಮೂಲ್ ಪರಿಷ್ಕೃತ ದರ ನೀಡುತ್ತಿರುವ ದಿನಕ್ಕೂ 50 ದಿನಗಳ ವ್ಯತ್ಯಾಸವಿದ್ದು ಈ ಅವಧಿಯಲ್ಲಿ ಒಕ್ಕೂಟ ಸುಮಾರು 12 ಕೋಟಿ ರು. ಗಳಿಗೂ ಅಧಿಕ ಲಾಭಗಳಿಸಿದ್ದು ಈ ಹಣ ಏನಾಯ್ತು ಎಂಬುದನ್ನ ಒಕ್ಕೂಟ ಬಹಿರಂಗ ಪಡಿಸಬೇಕೆಂದು ರೈತ ಸಂಘದ ಸಿ.ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ. ಈಹಣವನ್ನು ರೈತರಿಗೆ ಹಂಚಿಕೆ ಮಾಡಬೇಕು, ಬರದಿಂದ ರೈತರು ಕಂಗಾಲಾಗಿದ್ದು, ಸರ್ಕಾರ ಮತ್ತು ಒಕ್ಕೂಟ ಉಚಿತವಾಗಿ ಪಶು ಆಹಾರ, ರಿಯಾಯಿತಿ ದರದಲ್ಲಿ ಮೇವು ಪೂರೈಕೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

