ಶ್ರೇಣೀಕೃತ ಸಮಾಜದಿಂದ ಶೋಷಿತರ ಹಕ್ಕು ದಮನ
ಕ.ಪ್ರ. ವಾರ್ತೆ ್ಣ ದೊಡ್ಡಬಳ್ಳಾಪುರ ್ಣ ಮಾ.13
ಕಪ್ರ ವಾರ್ತೆ,,ಮಾ.13- ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ನೇತೃತ್ವದಲ್ಲಿ ಸಾಮಾಜಿಕ ಪರಿವರ್ತನಾ ಚಳವಳಿಯ ಮಹಾಚೇತನ ಮಹಾತ್ಮ ಜ್ಯೋತಿ ಬಾ ಪುಲೆ ಅವರ 186ನೇ ಜನ್ಮದಿನಾಚರಣೆ ನೆನಪಿನಲ್ಲಿ ಸಮಾನ ಶಿಕ್ಷಣಕ್ಕಾಗಿ ಶಿಕ್ಷಣ ಹಕ್ಕು ಕಾಯ್ದೆ ಕುರಿತ ಸಂವಾದ ಕಾರ್ಯಕ್ರಮ ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಉದ್ಘಾಟಿಸಿದರು. ಅವರು ಮಾತನಾಡಿ, ಬ್ರಾಹ್ಮಣ ಯಜಮಾನ್ಯದ ಶೋಷಣೆ ಮತ್ತು ಶ್ರೇಣೀಕೃತ ಸಮಾಜದ ವಿರುದ್ಧ ಹೋರಾಟಕ್ಕೆ ಮತ್ತು ರಾಷ್ಟ್ರೀಯ ಐಕ್ಯತೆಯ ಧ್ಯೇಯದ ಬಗ್ಗೆ ಗಟ್ಟಿದನಿಯಾಗಿ ಬಂದ ಜ್ಯೋತಿ ಬಾ ಪುಲೆ ಇಂದಿನ ಆದರ್ಶ. ಭಾರತದ ಚರಿತ್ರೆಯನ್ನು ಬಗೆದು ನೋಡಿದರೆ, ಪುರೋಹಿತಶಾಹಿ ನಡೆಸಿದ ದೌರ್ಜನ್ಯದ ಕರಾಳ ಇತಿಹಾಸ ಗೋಚರವಾಗುತ್ತದೆ. ಇಲ್ಲಿನ ತಳ ಸಮುದಾಯಗಳನ್ನು ಶ್ರೇಣಿಕೃತ ಜಾತಿ ವ್ಯವಸ್ಥಿಯಿಂದ ಸಿಲುಕಿಸಿ ಅವರನ್ನು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯವಾಗಿ ದಮನ ಮಾಡಲಾಗಿದೆ.
ಅಲ್ಲದೆ ಜ್ಞಾನ ಸಂಪತ್ತಿನ ಪ್ರತೀಕವಾದ ಅಕ್ಷರ ವಂಚಿತರನ್ನಾಗಿ ಮಾಡಿ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದದ್ದು ಘೋರ. ಇಂತಹ ಪುರೋಹಿತಶಾಹಿ ವಿರುದ್ಧ ಸಡ್ಡು ಹೊಡೆದ ಜ್ಯೋತಿ ಬಾ ಪುಲೆ ಹಿಂದುಳಿದ ಮತ್ತು ತುಳಿತಕ್ಕೊಳಗಾದ ಸಮುದಾಯಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಸಾರ್ವತ್ರಿಕ ಶಿಕ್ಷಣ ನೀಡಿ, ತಳ ಸಮುದಾಯಗಳು ಮಾನಸಿಕ ಗುಲಾಮಗಿರಿಯಿಂದ ಹೋರಬರಲು ಕಾರಣರಾದರು ಎಂದರು.
ನೊಂದ ಜಾತಿಗೆ ಬೆನ್ನೆಲಬು: ಜಿಲ್ಲಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪುಲೆ ಅವರ ಮುಂದುವರೆದ ಭಾಗವಾಗಿ ಡಾ.ಅಂಬೇಡ್ಕರರು ಸ್ವತಂತ್ರ ಭಾರತದ ಸಂವಿಧಾನದಲ್ಲಿ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿ ಪರಿಗಣಿಸಿ ನೊಂದ ಜಾತಿಗಳಿಗೆ ಬೆನ್ನೆಲುಬಾದರು.
ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಒಂದು ವ್ಯಾಪಾರವನ್ನಾಗಿಸಿ ತಳ ಸಮುದಾಯಗಳನ್ನು ವಂಚಿಸಲು ಸಜ್ಜಾಗಿವೆ. ಈ ಹುನ್ನಾರಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಆರ್.ಟಿ.ಇ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯ ಆಗು-ಹೋಗುಗಳ ಬಗ್ಗೆ ಅಧ್ಯಯನ ಮಾಡುವುದು ಎಲ್ಲ ಜನರ ಜವಾಬ್ದಾರಿಯಾಗಿದೆ.
ಶಿಕ್ಷಣ ಹಕ್ಕು ಕಾಯ್ದೆ ಎಲ್ಲ ಹಂತಗಳಲ್ಲೂ ನಿಜವಾದ ಶೋಷಿತರಿಗೆ ಸಹಕಾರಿಯಾಗಬೇಕು. ಈ ನಿಟ್ಟಿನಲ್ಲಿ ಸಂಘಟನಾತ್ಮಕ ಜಾಗೃತಿ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ)ಯ ಜಿಲ್ಲಾ ಸಂಘಟನಾ ಸಂಚಾಲಕ ರಾಜು ಸಣ್ಣಕ್ಕಿ, ಕೆ.ಆರ್.ಮುನಿಯಪ್ಪ, ಮೂರ್ತಿ, ನಾರಾಯಣಸ್ವಾಮಿ, ಚಿನ್ನಸ್ವಾಮಿ, ಖಜಾಂಚಿ ವೆಂಕಟೇಶಪ್ಪ, ಪೂಜಪ್ಪ, ದೊಡ್ಡಬಳ್ಳಾಪುರ ತಾಲೂಕು ಸಮಿತಿಯ ಕೊನಘಟ್ಟ ಮಹೇಶ್, ನರಸಿಂಹಮೂರ್ತಿ, ವೆಂಕಟೇಶ್, ಗೂಳ್ಯ ಮಂಜುನಾಥ್, ಆಂಜಿನಪ್ಪ, ದೇವನಹಳ್ಳಿ ತಾ.ಸಂಚಾಲಕ ತಿಮ್ಮರಾಯಪ್ಪ, ಹೊಸಕೋಟೆ ತಾ.ಸಂಚಾಲಕ ನಾಗೇಶ್ ಸೇರಿದಂತೆ ಸಂಘಟನೆಯ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

