ಮಿನಿ ವಾಹನದ ಗಾಜು ಪುಡಿಚಾಲಕನ ಮೇಲೆ ಹಲ್ಲೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಸಮೀಪವೇ ಇರುವ ಹ್ಯಾಡಾಳ ಗ್ರಾಮದಲ್ಲಿ ಗುರುವಾರ ರಾತ್ರಿ ಕರವೇ ಶಾಖೆ ಉದ್ಘಾಟನೆ ಸಂದರ್ಭದಲ್ಲಿ ಕೆಲವರು ಮಿನಿ ವಾಹನದ ಗಾಜನ್ನು ಒಡೆದರಲ್ಲದೆ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದರು. ಈಗ ಚಾಲಕ ಮುನಿಗಂಗಪ್ಪ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹ್ಯಾಡಾಳ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಎಂ.ನಾರಾಯಣಗೌಡ ಬಣ) ಶಾಖೆ ಉದ್ಘಾಟನಾ ಸಮಾರಂಭದ ಚಪ್ಪರವನ್ನು ರಸ್ತೆ ಮಧ್ಯದಲ್ಲಿ ಹಾಕಿ ರಸ್ತೆಯ ಎರಡು ಕಡೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ಕಾರ್ಯಕ್ರಮ ಆರಂಭಿಸಿದ್ದರು. ಇದೇ ಗ್ರಾಮದ ಮುನಿಗಂಗಪ್ಪ ಸರಕು ಸಾಗಣೆ ಮಿನಿ ವಾಹನವನ್ನು ತನ್ನ ಮನೆ ಬಳಿ ನಿಲ್ಲಿಸಲು ಬಂದ ಸಂದರ್ಭದಲ್ಲಿ ರಸ್ತೆಗೆ ಕಲ್ಲುಗಳನ್ನು ಇಟ್ಟಿರುವುದನ್ನು ನೋಡಿ ಬೇರೆ ದಾರಿ ಕಾಣದೆ ಕಲ್ಲುಗಳನ್ನು ಸರಿಸಲು ಯತ್ನಿಸಿದ. ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿರುವ ಕಾರ್ಯಕರ್ತರು ಮತ್ತು ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ವಾಹನದ ಗಾಜನ್ನು ಪುಡಿಪುಡಿ ಮಾಡಿದರಲ್ಲದೆ ಚಾಲಕನ ಮೇಲೆಯೂ ಹಲ್ಲೆ ನಡೆಸಿದ್ದರಿಂದ ಮುನಿಗಂಗಪ್ಪನ ತಲೆ ಹಾಗೂ ಎದೆಗೆ ಗಾಯವಾಗಿ ರಕ್ತ ಸುರಿಯತೊಡಗಿತು.
ಗಾಯಾಳು ಸಂಬಂಧಿಗಳು ಮುನಿಗಂಗಪ್ಪನನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರಾತ್ರಿಯೇ ದಾಖಲು ಮಾಡಿದರು. ಈ ಘಟನೆಗೆ ಸಂಬಂಧಪಟ್ಟವರು ಮುನಿಗಂಗಪ್ಪನ ಮನೆಗೆ ಹೋಗಿ ಬೆದರಿಕೆ ಹಾಕಿದ್ದಲ್ಲದೆ ಮನೆಯಲ್ಲಿದ್ದ ಮುನಿಗಂಗಪ್ಪನ ಪತ್ನಿ ಮುನಿರತ್ನಮ್ಮ ಹಾಗೂ ಮಗಳು ಚೈತ್ರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾರೇಗೌಡ, ರಾಮಾಂಜಿನಿ, ಬಾಬು, ಮುರಳಿ, ಗಜೇಂದ್ರ ಹಾಗೂ ಬಸವರಾಜು ಎಂಬುವರ ಮೇಲೆ ಪೊಲೀಸರಿಗೆ ದೂರನ್ನು ನೀಡಲಾಗಿದೆ.
ಸರ್ಕಾರಿ ಆಸ್ಪತ್ರೆಗೆ ಮಾದಿಗ ದಂಡೋರ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಮಾರಪ್ಪ, ದಸಂಸ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ ಆಗಮಿಸಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

