ಬೆಂಗಳೂರು ಗ್ರಾಮಾಂತರ

ತಿಪ್ಪಗೊಂಡನಹಳ್ಳಿ ಜಲಾಶಯವೀಗ ಖಾಲಿ, ಖಾಲಿ

Published On :

ಕ.ಪ್ರ. ವಾರ್ತೆ, ಮಾಗಡಿ, ಮಾ.17
ಅರ್ಕಾವತಿ ಮತ್ತು ಕುಮದ್ವತಿ ನದಿಯ ಸಂಗಮವೇ ಪ್ರಸಿದ್ಧ ತಿಪ್ಪಗೊಂಡನಹಳ್ಳಿ ಜಲಾಶಯ. ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ನಿರ್ಮಿತ ಬೃಹತ್ತಾದ ಪ್ರಸಿದ್ಧ ತಿಪ್ಪಗೊಂಡನಹಳ್ಳಿ ಜಲಾಶಯವೀಗ ಖಾಲಿ, ಖಾಲಿ.
ಈಗ ಇಲ್ಲಿಂದ ಹನಿ ನೀರು ಸಹ  ಬೆಂಗಳೂರಿಗೆ ಪೂರೈಕೆಯಾಗುತ್ತಿಲ್ಲ. ಸಮುದ್ರದ ನಂಟು, ಉಪ್ಪಿಗೆ ಬರ, ಎಂಬಂತೆ  ಬೆಂಗಳೂರಿಗೆ  ಪೂರೈಕೆಯಾಗುತ್ತಿರುವ  ಕಾವೇರಿ ನೀರನ್ನು ಪೈಪ್ ಮೂಲಕವೇ  ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿನ ನೌಕರರಿಗೆ  ಪೂರೈಕೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವುದು ವಿಪರ್ಯಾಸದ ಸಂಗತಿ.
ಗರಿಷ್ಠ ಮಟ್ಟ 75 ಅಡಿ: ಈ ಜಲಾಶಯದ ನೀರಿನ ಗರಿಷ್ಠ ಮಟ್ಟ 75 ಅಡಿಗಳು. ಇಲ್ಲಿಂದ ಬೆಂಗಳೂರಿನ ಪಶ್ಚಿಮ ಭಾಗದ ಬಹುತೇಕ ಬಡಾವಣೆಗಳಿಗೆ ಕುಡಿವ ನೀರು ಪೂರೈಕೆಯಾಗುತ್ತಿತ್ತು. ಜಲಾಶಯದ ಪುನಶ್ಚೇತನಕ್ಕಾಗಿ ಕೆರೆಯಂಗಳದಲ್ಲಿ ಹೋಮ, ಹವನ ಪೂಜೆ ಪುನಸ್ಕಾರಗಳನ್ನು ಸರ್ಕಾರದ ವತಿಯಿಂದ ನಡೆಸಲಾಯಿತು. ಜಲಾಶಯದ ಪುನಶ್ಚೇನಕ್ಕೆ ಸರ್ಕಾರದಿಂದ  23 ಕೋಟಿ ರು. ಮಂಜೂರಾಗಿದ್ದರೂ  ಕೆಲಸ ಆರಂಭಗೊಳ್ಳಲೇ ಇಲ್ಲ. ಬೆಂಗಳೂರಿನ  ಬಹುಭಾಗಗಳಿಗೆ ಕುಡಿಯುವ ನೀರಿನ ಆಸೆಯಾಗಿರುವ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ದುರಸ್ಥಿಪಡಿಸಿ ನೀರು ಸಂಗ್ರಹವಾಗುವಂತೆ ಕಾಯ್ದುಕೊಳ್ಳಬೇಕು  ಎಂಬ ಘೋಷಣೆಯೊಂದಿಗೆ ಆ ಕೆರೆಯಿಂದ ಬೆಂಗಳೂರಿಗೆ ಶಾಸಕ ನೆ.ಲ.ನರೇಂದ್ರಬಾಬು ನೇತೃತ್ವದಲ್ಲಿ ಪಾದಯಾತ್ರೆ  ಸಹ ನಡೆಯಿತು. ಆದರೂ ಯಾವುದೇ ಕ್ರಮವನ್ನೂ ಸರ್ಕಾರ ಕೈಗೊಳ್ಳಲಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯಕ್ಕೆ  ಹಿಡಿದ ಕನ್ನಡಿಯಂತಿದೆ. ಈ ಜಲಾಶಯದ ಮಧ್ಯಭಾಗದಲ್ಲಿದೆ ಸಂಗಮೇಶ್ವರ (ಜಲಕಂಠೇಶ್ವರ) ದೇವಸ್ಥಾನ. ನೀರು ಖಾಲಿಯಾಗಿರುವುದರಿಂದ ದೇವಸ್ಥಾನದ ಪೂರ್ಣ ಭಾಗ ಈಗ ಗೋಚರಿಸಿದೆ.
ಪ್ರಮುಖ ಆಸರೆಯಾಗಿತ್ತು: ಬೆಂಗಳೂರಿನ ಪಶ್ಚಿಮ ಭಾಗಗಳ ಬಡಾವಣೆಗಳಿಗೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರು ಪೂರೈಕೆಗೆ ಪ್ರಮುಖ ಆಸರೆಯಾಗಿತ್ತು.
ತಿಪ್ಪಗೊಂಡನಹಳ್ಳಿ ಜಲಾಶಯದ ಸುತ್ತಮುತ್ತ 2 ಕಿ.ಮೀ ಸುತ್ತಳತೆಯಲ್ಲಿ   ಗಣಿಗಾರಿಕೆ ನಿಷೇಧಿಸಲಾಗಿದೆ. ಆದರೂ ನಿಷೇಧಿತ ಪ್ರದೇಶಗಳಲ್ಲೇ ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದೆ. ನಿಷೇಧಿಸಿದ ಪ್ರದೇಶದ  ಜಲಾಶಯದ ಸಮೀಪದಲ್ಲೇ ಸುಮಾರು 19ಕ್ಕೂ ಹೆಚ್ಚು ಕೈಗಾರಿಕೆಗಳು  ಕಾರ್ಯನಿರ್ವಹಿಸುತ್ತಿವೆ. ನೀರು ಕಲುಷಿತವಾಗಲು ಕಾರಣವಾಗಿದೆ. ಪರಿಸರ ಮಾಲಿನ್ಯವಾಗುತ್ತಿದೆ.  ಪ್ರಾಕೃತಿಕ ಪರಿಸರದ ಮಡಿಲಲ್ಲಿರುವ ಜಲಾಶಯಕ್ಕೆ ಧಕ್ಕೆಯಾಗದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸದ ಸಂಗತಿ.
ಜೀವ ಕಳೆ ಬರಲಿ: ಎತ್ತಿನಹೊಳೆ  ಏತನೀರಾವರಿ ಯೋಜನೆಯ ನೀರನ್ನು  ತಿಪ್ಪಗೊಂಡನಹಳ್ಳಿ, ವೈ.ಜಿಗುಡ್ಡ, ಮಂಚನಬೆಲೆ ಜಲಾಶಯಕ್ಕೆ ತುಂಬಿಸಿದರೆ ನಿಜಕ್ಕೂ ಮಾಗಡಿ  ತಾಲೂಕಿನ ಬಹುತೇಕ ಭೂಮಿ ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಆದಷ್ಟು ಬೇಗ ತಾಲೂಕಿಗೆ ನೀರು ಹರಿಯಲಿ, ಬರಡಾಗಿರುವ ಭೂಮಿ  ಹಚ್ಚ ಹಸಿರಾಗಲಿ,
ವಿನಾಶದ ಹಂಚಿನಲ್ಲಿರುವ ಜಲಾಶಯಕ್ಕೆ ಜೀವ ಕಳೆ ಬರಲಿ  ಎಂಬುದು  ನಾಗರಿಕರ ಆಶಯವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.