ನಿತ್ಯಾನಂದನ ಧ್ಯಾನ ಪೀಠ ಎದುರು ಪ್ರತಿಭಟನೆ
ಕ.ಪ್ರ. ವಾರ್ತೆ ರಾಮನಗರ ಮಾ.17
ಮಹಾಲಿಂಗಪುರದ ಮಹಾಲಿಂಗೇಶ್ವರ ಮಠವನ್ನು ಕಬಳಿಸಲು ಸಂಚು ನಡೆಸಿರುವ ಕಪಟ ಸ್ವಾಮಿ ನಿತ್ಯಾನಂದನ ವಿರುದ್ಧ ವಿವಿಧ ಸಂಘಟನೆಗಳು ಬಿಡದಿಯ ಧ್ಯಾನ ಪೀಠ ಆಶ್ರಮದ ಎದುರು ಭಾನುವಾರ ಪ್ರತಿಭಟನೆ ನಡೆಸಿದವು.
ಕರ್ನಾಟಕ ನವ ನಿರ್ಮಾಣ ಸೇನೆ, ಅಖಿಲ ಭಾರತ ವೀರಶೈವ ಮಹಾ ಸಭಾ, ವೀರಶೈವ ಯುವ ಒಕ್ಕೂಟ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸೇರಿದಂತೆ ವಿವಿಧ ಸಂಘಟನೆ ಕಾರ್ಯಕರ್ತರು ಬಿಡದಿಯ ಬಸ್ ನಿಲ್ದಾಣದ ಬಳಿ ಜಮಾಯಿಸಿದರು.
ನಂತರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರು ಬಸ್ ನಿಲ್ದಾಣದಿಂದ ಧ್ಯಾನ ಪೀಠಾಶ್ರಮದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದರು. ಆಶ್ರಮದ ಒಳಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ದ್ವಾರದ ಬಳಿಯೇ ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
24 ಗಂಟೆಯ ಅವಧಿ: ಪಶ್ಚಿಮ ದ್ವಾರದ ಎದುರು ಧರಣಿ ನಡೆಸಿದ ಕಾರ್ಯಕರ್ತರು ನಿತ್ಯಾನಂದ, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದ್ವಾರಕ್ಕೆ ಬೀಗ ಜಡಿದು, 24 ಗಂಟೆಯೊಳಗೆ ನಿತ್ಯಾನಂದನನ್ನು ಬಿಡದಿ ಆಶ್ರಮದಿಂದ ಹೊರಗಟ್ಟುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅರೇ ಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮಿ ಮಾತನಾಡಿ, ಮಠಗಳು ಭಕ್ತರು ಹಾಗೂ ಸಮಾಜದ ಸ್ವತ್ತೇ ಹೊರತು ಯಾವುದೇ ಮಠಾಧೀಶರ ಸ್ವತ್ತಲ್ಲ. ಭಕ್ತರು ದಾನ ನೀಡಿ ಮಠಗಳನ್ನು ಕಟ್ಟಿ ಬೆಳೆಸಿದ್ದಾರೆ. ಇಂತಹ ಮಠಗಳನ್ನು ಮಾರುವ ಹಾಗೂ ಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ತಿಳಿಸಿದರು.
ಹುನ್ನಾರ: ನಿತ್ಯಾನಂದ ಶರಣ ಪರಂಪರೆಯ ಮಹಾಲಿಂಗಪುರ ಮಠವನ್ನು ಕಬಳಿಸುವ ಹುನ್ನಾರ ನಡೆಸಿದ್ದಾನೆ. ಮಠಾಧೀಶರ ದೌರ್ಬಲ್ಯವನ್ನು ಬಳಸಿಕೊಂಡು ಮಠವನ್ನು ಕೈವಶ ಮಾಡಿಕೊಳ್ಳಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಠದ ಪರಭಾರೆ ಸಂಬಂಧ ನಡೆದಿರುವ ವ್ಯವಹಾರವನ್ನು ಕೂಡಲೇ ಹೊರಗೆಡವಬೇಕು. ಯಾವುದಾದರೂ ದಾಖಲೆ ಪತ್ರಗಳಿದ್ದರೆ ಮಠಕ್ಕೆ ವಾಪಸು ನೀಡಬೇಕು ಎಂದು ಒತ್ತಾಯಿಸಿದರು.
ಬೆಂಬಲವಿಲ್ಲ: ನಿತ್ಯಾನಂದನ ಖಾಸಗಿ ಬದುಕಿನ ಬಗ್ಗೆ ನಾವು ಪ್ರಶ್ನಿಸುವುದಿಲ್ಲ. ಅವನ ಬಳಿ ಯಥೇಚ್ಛ ಹಣವಿದ್ದರೆ ಮಠವನ್ನಾದರೂ ಸ್ಥಾಪಿಸಲಿ ಅಥವಾ ಐಶಾರಾಮಿ ಹೋಟೆಲ್ ಅನ್ನಾದರೂ ಸ್ಥಾಪಿಸಲಿ. ಅದನ್ನು ಬಿಟ್ಟು ವೀರಶೈವ ಮಠವನ್ನು ಕಬಳಿಸುವ ಹುನ್ನಾರ ನಡೆಸಿದ್ದಲ್ಲದೆ, ನಾನೂ ಕೂಡ ಲಿಂಗಾಯಿತ ಎಂದು ಹೇಳಿಕೊಂಡು, ಬಹುಸಂಖ್ಯಾತರ ಅನುಕಂಪ ಗಿಟ್ಟಿಸಲು ಹೊರಟಿದ್ದಾನೆ. ಇದು ಕೇವಲ ಆತನ ಭ್ರಮೆಯಾಗಿದ್ದು, ಇದಕ್ಕೆ ಯಾರೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು.
ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾ ಶಂಕರ ಪಾಟೀಲ ಮಾತನಾಡಿ, ಇದುವರೆಗೂ ನಿತ್ಯಾ ವಿರುದ್ಧ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದೆವು. ಆದರೆ ಇನ್ನು ಮುಂದೆ ಕಾನೂನಾತ್ಮಕ ಹೋರಾಟ ನಡೆಸಲು ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇವೆ ಎಂದರು.
ಧ್ಯಾನಪೀಠದ ಆಶ್ರಮಕ್ಕೆ ಸೇರಿರುವ 22 ಎಕರೆ ಜಮೀನಿನ ಪೈಕಿ ಕೇವಲ 2 ಎಕರೆ ಮಾತ್ರ ನಿತ್ಯಾ ಹೆಸರಿನಲ್ಲಿದೆ. ಉಳಿದ 20 ಎಕರೆ ಭೂಮಿ ಸರ್ಕಾರಿ ಗೋಮಾಳವಾಗಿದ್ದು, ಇದರ ಎಲ್ಲಾ ದಾಖಲೆಗಳೂ ನಮ್ಮ ಬಳಿ ಇವೆ ಎಂದು ತಿಳಿಸಿದರು.
ಕ್ರಮಕ್ಕೆ ಪತ್ರ ಬರೆದಿದ್ದರು: ಸರ್ಕಾರದ ಮುಖ್ಯ ಸಚೇತಕರು ಆಶ್ರಮದ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿ ನಿತ್ಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ 6 ತಿಂಗಳ ಹಿಂದೆಯೇ ಪತ್ರ ಬರೆದಿದ್ದರು. ಆದರೆ ಜಿಲ್ಲಾಡಳಿತ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೆ, ನಿತ್ಯಾ ಪರ ಮಣದು ಧೋರಣೆ ಅನುಸರಿಸುತ್ತಿರುವುದು ನಾಚಿಕೆಗೇಡು ಎಂದರು.
ಮುಂದಿನ 24 ಗಂಟೆಗಳಲ್ಲಿ ಜಿಲ್ಲಾಡಳಿತ ನಿತ್ಯಾನಂದನನ್ನು ಬಿಡದಿ ಆಶ್ರಮದಿಂದ ಹೊರಗಟ್ಟಬೇಕು. ಇಲ್ಲದಿದ್ದರೆ ನಾವೇ ಆ ಕೆಲಸಕ್ಕೆ ಮುಂದಾಗಬೇಕಾಗುತ್ತದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಭೀಮಾ ಶಂಕರ ಪಾಟೀಲ್ ಎಚ್ಚರಿಸಿದರು.
700 ವರ್ಷಗಳ ಇತಿಹಾಸ ಹೊಂದಿರುವ ಮಹಾಲಿಂಗಪುರ ಮಠವನ್ನು ನಿತ್ಯಾನಂದ ಕುತಂತ್ರದಿಂದ ಕಬಳಿಸಲು ಹೊರಟಿದ್ದಾನೆ. ಇದರ ವಿರುದ್ಧ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ಮಠವನ್ನು ಪರಭಾರೆಯಾಗದಂತೆ ತಡೆಯಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿ ಪ್ರವೀಣ್ ಕರೆ ನೀಡಿದರು.
ಪ್ರತಿಭಟನೆಯಲ್ಲಿ ವೀರಶೈವ ಮುಖಂಡರಾದ ವಾಗೀಶ್ ಪ್ರಸಾದ್, ರಾಜಶೇಖರ್, ಶಿವಕುಮಾರ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ, ಪದಾಧಿಕಾರಿಗಳಾದ ಮಂಗಳಮ್ಮ, ಲಕ್ಷ್ಮಮ್ಮ, ನೀಲೇಶ್ ಗೌಡ, ಯೋಗೇಶ್ ಗೌಡ, ರಂಜಿತ್ ಗೌಡ, ನಾಗರತ್ನ, ರಾಜಮ್ಮ ಮತ್ತಿತರರು ಪಾಲ್ಗೊಂಡಿದ್ದರು.
ಅಣಕು ತಿಥಿ ಕಾರ್ಯ, ವಿಸ್ಕಿ ಅಭಿಷೇಕ
ನಿತ್ಯಾನಂದನ ಅಣಕು ಶವ ಯಾತ್ರೆ ನಡೆಸಿ ಪ್ರತಿಭಟಿಸಿದ್ದ ಕಸ್ತೂರಿ ಕರ್ನಾಟಕ ವೇದಿಕೆ ಕಾರ್ಯಕರ್ತರು ಭಾನುವಾರ ಬಿಡದಿಯ ಬಸ್ ನಿಲ್ದಾಣದಲ್ಲಿ ಅಣಕು ತಿಥಿ ಕಾರ್ಯ ನಡೆಸಿದರು. ನಿತ್ಯಾನಂದನ ಭಾವಚಿತ್ರಕ್ಕೆ ಹೂವು, ಕುಂಕುಮ ಇಟ್ಟು ವಿಸ್ಕಿ ಅಭಿಷೇಕ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಮಂಡಕ್ಕಿ, ಕಜ್ಜಾಯ, ವಡೆ, ಚಕ್ಕುಲಿ, ಮದ್ಯದ ಬಾಟಲಿ, ಸಿಗರೇಟು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಎಡೆ ಇಟ್ಟಿದ್ದರು. ಕರ್ನಾಟಕದ ಪಾಲಿಗೆ ನಿತ್ಯಾ ಸತ್ತನೆಂದು ಬಾಯಿ ಬಡಿದುಕೊಂಡು ಗೋಳಾಡುವಂತೆ ನಟಿಸಿದರು. ನಿತ್ಯಾನಂದನ ದತ್ತು ಪುತ್ರನಾಗಿ ತಲೆ ಬೋಳಿಸಿಕೊಂಡಿದ್ದ ನೀಲೇಶ್ ಗೌಡ ಮಡಿಕೆ ಒಡೆದು, ಶಾಂತಿ ಕಾರ್ಯ ನೆರವೇರಿಸಿದರು. ಈ ವೇಳೆ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ, ಆಶ್ರಮಕ್ಕೆ ಬರುವ ಮಹಿಳೆಯ ಜತೆ ರಹಸ್ಯ ಒಪ್ಪಂದ ಮಾಡಿಕೊಂಡು, ಅವರನ್ನು ಲೈಂಗಿಕವಾಗಿ ಬಳಸಿಕೊಂಡು ಸಿಕ್ಕಿಬಿದ್ದಿರುವ ನಿತ್ಯಾನಂದ ಹಿಂದೂ ಧರ್ಮಕ್ಕೆ ಅಪಚಾರವೆಸಗಿದ್ದಾನೆ. ಇಷ್ಟು ಸಾಲದೆಂಬಂತೆ ವೀರಶೈವ ಸಮುದಾಯದ ಮಠವನ್ನು ಕೈವಶ ಮಾಡಿಕೊಳ್ಳಲು ಹೊರಟಿರುವ ಕಪಟಿ ನಿತ್ಯಾನಂದನನ್ನು ಸಜ್ಜನಿಕೆಗೆ ಹೆಸರಾಗಿರುವ ಕನ್ನಡ ನಾಡಿನಿಂದ ಹೊರಗಟ್ಟಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

