ಅನುಗೊಂಡನಹಳ್ಳಿ ಹೋಬಳಿ ಅಭಿವೃದ್ಧಿಗೆ ಆದ್ಯತೆ
ಕ.ಪ್ರ.ವಾರ್ತೆ ಹೊಸಕೋಟೆ ಮಾ.19
ತಾಲೂಕಿನ ಹಿಂದುಳಿದ ಹಾಗೂ ಗಡಿ ಪ್ರದೇಶವನ್ನು ಒಳಗೊಂಡಿರುವ ಅನುಗೊಂಡನಹಳ್ಳಿ ಹೋಬಳಿಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.
ನಾರಾಯಣಕೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜನರು ನೆಮ್ಮದಿಯಿಂದ ಜೀವನ ಸಾಗಿಸಲು ಅನುವಾಗುವಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಬಸ್ ಸೌಲಭ್ಯ ಕಲ್ಪಿಸಲಾಗಿದ್ದು, ಶಾಲೆಗಳಿಗೆ ಕಾಂಪೌಂಡ್ ಸಹ ನಿರ್ಮಿಸಲಾಗಿದೆ. ನೇಕಾರರು ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶದಲ್ಲಿ ಕೊಳವೆ ಬಾವಿ ಸೌಲಭ್ಯ ಒಳಗೊಂಡಂತೆ ಅಗತ್ಯ ಸವಲತ್ತುಗಳನ್ನು ಒದಗಿಸಲಾಗಿದೆ. ಹಂದೇನಹಳ್ಳಿಯವರೆಗೂ 1.5ಕೋಟಿ ರು.ಗಳ ವೆಚ್ಚದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.
ರೈತರ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಲು ಅವಕಾಶ ಕಲ್ಪಿಸಿರುವುದು ಸರಕಾರದ ಮಹತ್ವದ ಸಾಧನೆಯಾಗಿದೆ. ತಾಲೂಕಿನಲ್ಲಿ ಸರಕಾರ ಜಾರಿಗೊಳಿಸಿರುವ ಸಾಲ ಮನ್ನಾ ಯೋಜನೆಯಡಿ ಸುಮಾರು 2 ಕೋಟಿ ರು.ಗಳಷ್ಟು ಸಾಲ ಮನ್ನಾ ಸೌಲಭ್ಯ ಪಡೆದುಕೊಂಡಿದ್ದಾರೆ, ಹೊಸಕೋಟೆಯಲ್ಲಿ ನೂತನ ಬಿಎಂಟಿಸಿ ಬಸ್ ಡಿಪೋ ಪ್ರಾರಂಭಗೊಂಡ ಕಾರಣದಿಂದಾಗಿ ಸುಮಾರು 300 ಗ್ರಾಮಗಳಿಗೆ ಬಸ್ ಸೌಲಭ್ಯ ಸಾಧ್ಯವಾಗಿದೆ. ಗ್ರಾಮಸ್ಥರ ಬೇಡಿಕೆಯಾದ ಚಿಕ್ಕತಿರುಪತಿ ವರ್ತೂರು ಮಾರ್ಗವಾಗಿ ಬೆಂಗಳೂರುಗೆ ಬಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ 5 ವರ್ಷದ ಅವಧಿಯಲ್ಲಿ 100 ಕೋಟಿ ರು.ಗಳ ವೆಚ್ಚದಲ್ಲಿ 10 ಸಾವಿರ ಮನೆಗಳನ್ನು ಸರಕಾರದ ನಾನಾ ಯೋಜನೆಯಡಿ ಹಂಚಿಕೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಕನಹಳ್ಳಿಯಲ್ಲಿ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಮಾರಾಟ ಮಳಿಗೆಗಳ ಉದ್ಘಾಟನೆ, ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಜಿ.ಪಂ.ಅಧ್ಯಕ್ಷ ವಿ ನಾರಾಯಣಸ್ವಾಮಿ, ರೇಷ್ಮ ಬೆಳೆಗಾರರ ಸಂಘದ ಅಧ್ಯಕ್ಷ ಎಸ್ ಸುರೇಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಬುರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

