ಬಿಜೆಪಿಯಲ್ಲಿ ತಿಂದು ತೇಗಿ ಹೋದವರ ಬಗ್ಗೆ ಯೋಚನೆ ಬೇಡ
ಕ.ಪ್ರ.ವಾರ್ತೆ ಮಾಗಡಿ ಮಾ.19
ಬಿಜೆಪಿಯನ್ನು ಕೆಲವೇ ನಾಯಕರು ನಾಶ ಮಾಡಲು ಹೊರಟಿದ್ದಾರೆ. ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ಮಾಜಿ ಸಚಿವ ರಾಮಚಂದ್ರಗೌಡ ವ್ಯಂಗ್ಯವಾಡಿದರು.
ಅವರು ಪಟ್ಟಣದ ಹೊಸೂರು ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಬಂದಿದೆ. ಈ ದೇಶ ನನ್ನದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಕೆಲವೇ ನಾಯಕರ ಕೈಯಲ್ಲಿ ಈ ದೇಶವಿದೆ. ಇದನ್ನು ಪ್ರಜೆಗಳ ಕೈಗೆ ಕೊಡಬೇಕು ಎಂಬ ಹಂಬಲ ನಮ್ಮದಾಗಿದೆ. ಬಿಜೆಪಿಯಲ್ಲಿಯೇ ಇದ್ದು, ತಿಂದು ತೇಗಿ ಹೋದವರ ಬಗ್ಗೆ ಚಿಂತನೆ ಬೇಡ, ಬಿಜೆಪಿಯ ನಿಜವಾದ ಬೇರು ಕಾರ್ಯಕರ್ತರು ಎಂದು ಹೇಳಿದರು.
ಬಿಜೆಪಿ ಪ್ರಭಾರಿ ಅಧ್ಯಕ್ಷ ಶಿವಬೀರಪ್ಪ ಮಾತನಾಡಿ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರಲ್ಲಿ ಗೊಂದಲವಿಲ್ಲ, ಮಾರ್ಗದರ್ಶನ ನೀಡಬೇಕಾದ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ. 60 ವರ್ಷಗಳಲ್ಲಿ ಆಗದ ಕೆಲಸವನ್ನು 5 ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿ ತೋರಿಸಿದೆ ಎಂದರು.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಯೋಧರಂತೆ ಕೆಲಸ ಮಾಡಬೇಕು. ಪ್ರತಿ ಬೂತ್ ಮಟ್ಟದಲ್ಲಿಯೂ ಏಜೆಂಟ್ ನೇಮಕ ಮಾಡಿಕೊಂಡು ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಲು ಸಜ್ಜಾಗೋಣ ಎಂದು ಜಿಲ್ಲಾಧ್ಯಕ್ಷ ಶಿವಮಾಧು ತಿಳಿಸಿದರು.
ವಕೀಲ ವಿ.ಪ್ರಕಾಶ್ ಸಂಘಟನೆ ಕುರಿತು ಮಾತನಾಡಿದರು. ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಪಿ.ಎನ್. ಹನುಮಂತೇಗೌಡ ಮಾತನಾಡಿದರು. ಕಾಯಕರ್ತ ಮುಖಂಡರಾದ ಜನಾರ್ದನ, ಕಲ್ಕೆರೆ ಶಿವಣ್ಣ, ಮಂಜುನಾಥ್, ಸತೀಶ್ ಇತರರು ಕಾರ್ಯಕರ್ತರ ನೋವನ್ನು ಸಭೆಯಲ್ಲಿ ಹಂಚಿಕೊಂಡರು. ಜಿಲ್ಲಾ ನಗರ ಸಭಾ ಸದಸ್ಯ ನಾಗೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಸ್ವಾಮಿ, ತಾ.ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಂ.ಧನಂಜಯ, ಎಂ.ಟಿ.ಶಿವಣ್ಣ, ಟಿ.ಆರ್. ದಯಾನಂದ್, ಶಶಿಧರ್, ಜಯರಾಮು ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

