ಬೆಂಗಳೂರು ಗ್ರಾಮಾಂತರ

ಬೆಂಗಳೂರು ಕಸಕ್ಕೆ ಕಡೆಗೂ ರಾಮನಗರವೇ ತೊಟ್ಟಿ

Published On :

ಕ.ಪ್ರ.ವಾರ್ತೆ, ರಾಮನಗರ,ಮಾ.19 ಬೆಂಗಳೂರು ಕಸಕ್ಕೆ ಕಡೆಗೂ ರಾಮನಗರವೇ ತೊಟ್ಟಿಯಾಗಿದೆ. ಸರ್ಕಾರ ಸದ್ದಿಲ್ಲದೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿದೆ. ಈ ಕುರಿತು ಮೂಡಿದ್ದ ಗುಮಾನಿ ನಿಜವಾಗಿದ್ದು, ಇದರೊಂದಿಗೆ ಸರ್ಕಾರದ ಕಪಟ ನಾಟಕ ಮತ್ತು ಜನ ನಾಯಕರ ವಚನಭ್ರಷ್ಟತೆ ಬಯಲಾಗಿದೆ.  
ಬಿಬಿಎಂಪಿ ವ್ಯಾಪ್ತಿಯ ಕೊಳಚೆಯೇ ತುಂಬಿ ಹರಿಯುವ ವೃಷಭಾವತಿ ನದಿಯಿಂದಾಗಿ ಬಿಡದಿ ಭಾಗದ ಜನತೆ ನಾನಾ ಬವಣೆಗಳಿಗೆ ಗುರಿಯಾಗಿದ್ದಾರೆ. ನದಿ ಸಮೀಪದ ಕೊಡಿಯಾಲ ಕರೇನಹಳ್ಳಿಯಲ್ಲೇ ಘನ ತ್ಯಾಜ್ಯ ವಿಲೇವಾರಿ ಘಟಕ ತಲೆ ಎತ್ತುತ್ತಿರುವುದು ಅಲ್ಲಿನ ಜನರಿಗೆ ಬರ ಸಿಡಿಲಿನಂತಾಗಿದೆ.  
ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಭಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸರ್ಕಾರ ನಡೆಸಿದ್ದ ಸಂಚಿನ ವಿರುದ್ಧ ಅಲ್ಲಿನ ಜನರು ಸೆಟೆದು ನಿಂತರು. ಕಡೆಗೆ ಸರ್ಕಾರ ರಾಮನಗರಕ್ಕೆ ವಕ್ಕರಿಸಿಕೊಂಡಿದ್ದು, ಇಲ್ಲಿನ ಜನರ ನೆಮ್ಮದಿಗೆ ಭಂಗ ತಂದೊಡ್ಡಿದೆ.
ಮುಗಿದಿದೆ ಭೂ ಸ್ವಾಧೀನ: ಬಿಡದಿ ಬಳಿಯ ಕೊಡಿಯಾಲ ಕರೇನಹಳ್ಳಿಗೆ ಸೇರಿದ ಸರ್ವೆ ನಂ.385-1, 385-2, 385-3, 386-1, 386-2, 532, 537, 538, 544ರಲ್ಲಿರುವ 40 ಎಕರೆ 9 ಗುಂಟೆ ಜಮೀನನ್ನು ಕರ್ನಾಟಕ ಪಟ್ಟಣ ಪ್ರದೇಶ ಮತ್ತು ನಗರ ಯೋಜನಾ ಅಧಿನಿಯಮ 1961ರ ಕಲಂ 14(ಬಿ)ಅನ್ವಯ ಸ್ವಾಧೀನಪಡಿಸಿಕೊಂಡು, ಪರಿಹಾರ ವಿತರಿಸಿದೆ.
ಟಿಡಿಆರ್ ಯೋಜನೆಯಡಿ ಈ ಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ್ದು, ಷರತ್ತುಗಳನ್ನು ಸಡಿಲಿಸಲಾಗಿದೆ. ಸ್ವಾಧೀನವಾಗಿರುವ ಜಮೀನು ಒಬ್ಬರ ಹೆಸರಿನಲ್ಲಿದ್ದು, ಹಲವು ರೈತರಿಂದ ಈಚೆಗಷ್ಟೇ ಖರೀದಿಸಿದ್ದಾಗಿದೆ. ಅದಕ್ಕೆ ಹೊಂದಿಕೊಂಡ ಇನ್ನೂ 60-70 ಎಕರೆಯಷ್ಟು ಜಮೀನಿನ ಸ್ವಾಧೀನಕ್ಕೂ ಸನ್ನಾಹ ನಡೆದಿದೆ.
ಟಿಡಿಆರ್ ವಿತರಣೆ: ಜಮೀನು ಸ್ವಾಧೀನಕ್ಕೆ ಬಿಟ್ಟುಕೊಟ್ಟಿರುವ ಮಾಲೀಕರಿಗೆ ಪ್ರತಿ ಗುಂಟೆಗೆ ರು.40 ಲಕ್ಷದಂತೆ ಪರಿಹಾರ ನೀಡಲಾಗಿದೆ. ಇದರೊಟ್ಟಿಗೆ ಪರಿತ್ಯಜಿಸಿದ ಭೂಮಿಯ ವಿಸ್ತೀರ್ಣದ ಒಂದೂವರೆ ಪಟ್ಟು ಪ್ರಮಾಣದ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರವನ್ನು ಬಿಬಿಎಂಪಿ ವಿತರಿಸಿದೆ.
ಈಗಾಗಲೇ ಸ್ವಾಧೀನ ಆಗಿರುವ ಜಮೀನು ಪಕ್ಕದ ಭೂಮಿಯನ್ನು ಎಕರೆಗೆ ರು.35 ರಿಂದ 42 ಲಕ್ಷ ಧಾರಣೆ ನೀಡಿ ಖರೀದಿಸಲು ಮಧ್ಯವರ್ತಿಗಳು ಷಡ್ಯಂತ್ರ ನಡೆಸಿದ್ದಾರೆ. ರೈತರ ಮೇಲೆ ನಾನಾ ರೀತಿ ಒತ್ತಡ ತರಲಾಗುತ್ತಿದೆ. ಮಧ್ಯವರ್ತಿಗಳು ಟಿಡಿಆರ್ ಯೋಜನೆ ಸೌಲಭ್ಯದ ಕೊಳ್ಳೆಗೆ ಟೊಂಕ ಕಟ್ಟಿದ್ದಾರೆ.
ಕತ್ತಲಲ್ಲಿ ಜಿಲ್ಲಾಡಳಿತ: ಸ್ವಾಧೀನ ಪ್ರಕ್ರಿಯೆ ಕುರಿತಾದ ಎಲ್ಲ ವ್ಯವಹಾರ ಸರ್ಕಾರ ಮತ್ತು ಬಿಬಿಎಂಪಿ ಮಟ್ಟದಲ್ಲೇ ನಡೆದಿದೆ. ಜಮೀನಿನ ಅನುಭವದ ಹಕ್ಕುಗಳು, ಭೂ ಮಂಜೂರಾತಿ ವಿವರಗಳನ್ನಷ್ಟೇ ಜಿಲ್ಲಾಡಳಿತದಿಂದ ಪಡೆದುಕೊಳ್ಳಲಾಗಿದೆ. ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತವನ್ನೇ ಕತ್ತಲಲ್ಲಿಡಲಾಗಿದೆ. ಎಲ್ಲಾ ಮುಗಿದಾದ ಮೇಲೆ ಆದೇಶದ ಪ್ರತಿಯಷ್ಟೇ ರವಾನೆಯಾಗಿದೆ.
ಕೊಡಿಯಾಲ ಕರೇನಹಳ್ಳಿ ಸಹಿತ ಜಿಲ್ಲೆಯ ಯಾವುದೇ ಭಾಗದಲ್ಲೂ ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆ ಕೂಡದೆಂದು ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು ಒತ್ತಡ ಹೇರಿದ್ದರು. ಜನತೆಯ ಪ್ರತಿರೋಧ ಕುರಿತು ಜಿಲ್ಲಾಧಿಕಾರಿ ವರದಿಗೂ ಸರ್ಕಾರದ ಮಟ್ಟದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ಅಂದೇ ಶಂಕಿಸಿದ್ದರು: ಕೊಡಿಯಾಲ ಕರೇನಹಳ್ಳಿಯ ಭೂ ಸ್ವಾಧೀನ ಪ್ರಕ್ರಿಯೆ ಹಿಂದೆ ಭೂ ಮಾಫಿಯಾ ಕೈವಾಡವಿದ್ದು, ಸರ್ಕಾರ ಮತ್ತು ಬಿಬಿಎಂಪಿ ಶಾಮೀಲಾತಿಯೊಂದಿಗೆ ನಡೆಯುತ್ತಿರುವ ಬಹುಕೋಟಿ ಹಗರಣ ಇದೆಂದು ಸಂಸದ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಇದೀಗ ಸದ್ದಿಲ್ಲದೆ ನಡೆಯುತ್ತಿರುವ ತರಾತುರಿ ವ್ಯವಹಾರ ಶಂಕೆಗೀಡು ಮಾಡಿದೆ.
ಕಸ ವಿಲೇವಾರಿ ಘಟಕ ಸ್ಥಾಪನೆ ತೀರ್ಮಾನವಾದ ಸಂಪುಟ ಸಭೆಯಲ್ಲಿ ಈ ಜಿಲ್ಲೆ ಪರ ಸೊಲ್ಲಿರಲಿಲ್ಲ. ವೈಜ್ಞಾನಿಕವಾದ ಈ ಘಟಕದಿಂದ ವಿದ್ಯುತ್ ಉತ್ಪಾದಿಸಲಿದ್ದು, ಪರಿಸರಕ್ಕೆ ಯಾವ ಧಕ್ಕೆ ಇಲ್ಲವೆಂದು ಅಂದಿನ ಸಚಿವ ಯೋಗೇಶ್ವರ್ ಸ್ಪಷ್ಟಪಡಿಸಿದ್ದರು. ಇದನ್ನು ಗಮನಿಸಿದರೆ ಅವರಿಂದ ಪ್ರಬಲ ವಿರೋಧ ಇರಲಿಲ್ಲ ಎನ್ನುವುದು ಸಾಬೀತಾಗುತ್ತದೆ.
ನಡೆಯದ ಆಟ: ಕೊಡಿಯಾಲ ಕರೇನಹಳ್ಳಿಯಷ್ಟೇ ಅಲ್ಲದೆ ಈ ಜಿಲ್ಲೆಯ ಯಾವ ಭಾಗದಲ್ಲೂ ಕಸ ವಿಲೇವಾರಿ ಘಟಕ ಆಗಲು ಬಿಡೆವು ಎಂದು ಸ್ವತಃ ಕುಮಾರಸ್ವಾಮಿ, ಶಾಸಕದ್ವಯರಾದ ಎಚ್.ಸಿ. ಬಾಲಕೃಷ್ಣ, ಕೆ.ರಾಜು, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ಗುಟುರು ಹಾಕಿದ್ದರು. ಉಸ್ತುವಾರಿ ಸಚಿವ ರೇಣುಕಾಚಾರ್ಯ, ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಕೂಡ ಅಭಯ ನೀಡಿದ್ದರು.
ಬಿಜೆಪಿ ಅಧಿಕಾರಾವಧಿಯಲ್ಲಿ ಕಾಲು ಕಸಕ್ಕಿಂತಲೂ ಕೀಳಾಗಿದ್ದ ರಾಮನಗರ ಈಗ ಕಸದ ತೊಟ್ಟಿಯೇ ಆಗುತ್ತಿದೆ. ಈ ವಿಷಯದಲ್ಲಿ ಆಳುವ ವರ್ಗದ ಭರವಸೆ ಹುಸಿಯಾಗಿದೆ. ರೊಚ್ಚಿಗೆದ್ದಿಗರು ಜನತೆ ಪ್ರತಿಭಟನೆಗೆ ಸಜ್ಜಾಗಿದ್ದು, ಜಿಲ್ಲೆಯ ಹಿತ ಕಾಯಲು ಇಲ್ಲಿನ ಜನ ನಾಯಕರು ಹೋರಾಟದ ಸಾರಥ್ಯ ವಹಿಸುವರೇ ಎನ್ನುವುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.