ಕಾರ್ಮಿಕರ ವಜಾ, ವೇತನ ತಾರತಮ್ಯ ಖಂಡಿಸಿ ಪ್ರತಿಭಟನೆ
ಕ.ಪ್ರ ವಾರ್ತೆ ರಾಮನಗರ ಮಾ.20
ಎಂಬತ್ತು ಕಾರ್ಮಿಕರ ವಜಾ, ವೇತನ ತಾರತಮ್ಯ ನಡೆಸಿರುವ ಜತೆಗೆ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿರುವ ಹೆಜ್ಜಾಲದ ಫೆದರ್ಲೈಟ್ ಆಫೀಸ್ ಸಿಸ್ಟಂ ಕಂಪೆನಿ ವಿರುದ್ಧ ಕಂಪೆನಿ ಕಾರ್ಮಿಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವಣತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ಕಂಪೆನಿಯ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು 40 ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರಿಗೆ ರು.10 ಸಾವಿರಕ್ಕಿಂತಲೂ ಕಡಿಮೆ ವೇತನ ನೀಡಲಾಗುತ್ತಿದೆ. ಇದರಲ್ಲಿ ಮೂಲ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಎಲ್ಲವೂ ಸೇರಿದೆ. ಇಲ್ಲಿ ಸೇವಾ ಹಿರಿತನವನ್ನು ಪರಿಗಣಿಸದೆ ತಮಗಿಷ್ಟ ಬಂದ ಹಾಗೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅನ್ಯಾಯದ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಾಲ ದೂಡುತ್ತಿದ್ದಾರೆ. ಬಿಡದಿಯ ಬಳಿಯ ಹೆಜ್ಜಾಲದಲ್ಲಿರುವ ಕಂಪೆನಿಯು ಕೋಟ್ಯಂತರ ರು. ಆದಾಯ ಗಳಿಸುತ್ತಿದೆ. ನಷ್ಟದ ನೆಪವೊಡ್ಡಿ ದೊಡ್ಡಬಳ್ಳಾಪುರದ ರಾಜಾನುಕುಂಟೆಗೆ ಸ್ಥಳಾಂತರಿಸಲಾಗುತ್ತಿದೆ. ಹೆಜ್ಜಾಲದಿಂದ ರಾಜಾನುಕುಂಟೆಗೆ ಹೋಗಲು 4 ಗಂಟೆ ಅವಧಿ ಬೇಕಾಗುತ್ತದೆ. ಇದರಿಂದಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.
ಈ ಕಂಪೆನಿಯಲ್ಲಿ ಯಾವುದೇ ಕಾರ್ಮಿಕ ಕಾಯ್ದೆಯನ್ನು ಪಾಲಿಸಲಾಗುತ್ತಿಲ್ಲ. ಕನಿಷ್ಠ ವೇತನವೂ ಸೇರಿದಂತೆ ಕಾರ್ಮಿಕರಿಗೆ ಯಾವುದೇ ಸೌಲಭ್ಯವನ್ನೂ ನೀಡುತ್ತಿಲ್ಲ. ಈ ಬಗ್ಗೆ ನೀಡಿರುವ ದೂರಿನ ಕುರಿತು ಕಾರ್ಮಿಕ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಕಂಪೆನಿ ಪರವಾಗಿ ಇಲಾಖೆ ವರ್ತಿಸುತ್ತಿದ್ದು, ನಮ್ಮ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಅವರು ದೂರಿದರು. ಪ್ರತಿಭಟನೆಯಲ್ಲಿ ಉಮೇಶ, ಗೋವಿಂದರಾಜು, ಬಿ.ಆರ್.ರಾಜು, ಗಂಗರಾಜು, ಶೇಷಾದ್ರಿ, ಮಹೇಶ್, ನವೀನ್ಕುಮಾರ್, ಶ್ರೀನಿವಾಸ್ ಮತ್ತಿತತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

