ಅಸಮರ್ಪಕ ವಿದ್ಯುತ್ ಪೂರೈಕೆಗೆ ಆಕ್ರೋಶ
ಕ.ಪ್ರ.ವಾರ್ತೆ ಮಾಗಡಿ ಮಾ.21
ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ತಾಲೂಕಿನಲ್ಲಿ ನೇಕಾರರು, ರೈತರು, ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ ಎಂದು ವಿವಿಧ ಸಂಘಟನೆಗಳು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನಾ ಧರಣೆ ನಡೆಸಿದವು.
ಕಳೆದ ಒಂದು ವಾರಗಳಿಂದ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದ್ದು, ನೇಕಾರರು, ರೈತರು, ವಿದ್ಯಾರ್ಥಿಗಳು ವ್ಯಾಪಾರಿಗಳು ಉದ್ಯೋಗಿಗಳು, ಸಣ್ಣಪುಟ್ಟ ಕೈಗಾರಿಕೋದ್ಯಮಿಗ ಬದುಕು ಕತ್ತಲಲ್ಲಿ ಮುಳುಗಿ ಹೋಗಿದೆ.
ಲೋಡ್ ಶೆಡ್ಡಿಂಗ್ನಿಂದಾಗಿ ವಿದ್ಯುತ್ ಯಾವಾಗ ಬರುತ್ತದೆ, ಯಾವಾಗ ಹೋಗುತ್ತದೆ ಎಂದು ಬರೆದು ದಾಖಲಿಸಿಕೊಳ್ಳಲಾಗದಂತಹ ರೀತಿಯಲ್ಲಿ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಬಿರು ಬೇಸಿಗೆ ಹೇಗೆ ಎಂಬುದನ್ನು ಊಹಿಸಿಕೊಂಡರೆ ಭಯವಾಗುತ್ತದೆ. ವಿದ್ಯುತ್ ಕ್ಷಾಮ ನಿಜಕ್ಕೂ ತಾಲೂಕು ಎದುರಿಸುತ್ತಿದ್ದು, ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ಉಂಟಾಗಿದೆ.
ನೇಕಾರರು ಕೈಗೆ ಕೆಲಸವಿಲ್ಲದೆ ಒಪ್ಪತ್ತಿನ ಗಂಜಿಗೂ ಪರದಾಡುವಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇತ್ತ ರೈತರು ತಮ್ಮ ತೋಟಗಾರಿಕೆ ಬೆಳೆಗಳಿಗೆ ನೀರು ಹಾಯಿಸಲಾಗದೆ ತೋಟಗಳೆಲ್ಲ ಸಂಪೂರ್ಣ ಒಣಗುತ್ತಿವೆ. ರೈತರನ್ನು ಸಮಸ್ಯೆ ಬಿಡುವುದಿಲ್ಲವೋ ಅಥವಾ ಸಮಸ್ಯೆ ರೈತರನ್ನು ಬಿಡುವುದಿಲ್ಲವೋ ಎನ್ನುವುದು ಮಾತ್ರ ಕಂಗಟ್ಟಾಗಿದೆ. ಮತ್ತೊಂದೆಡೆ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಮೇಣದ ಬತ್ತಿ ಹೊತ್ತಿಸಿಕೊಂಡು ಓದುವಂತಹ ಸ್ಥಿತಿಯಲ್ಲಿದ್ದಾರೆ ಎಂದು ಸಂಘಟನೆಗಳ ಮುಖಂಡರು ತಮ್ಮ ಅಳಲನ್ನು ತೋಡಿಕೊಂಡರು.
ಬೆಸ್ಕಾಂ ಎಂಜನಿಯರ್ ಕೂಡಲೆ ಅಸಮರ್ಪಕ ವಿದ್ಯುತ್ ವೇಳಾ ಪಟ್ಟಿಯನ್ನು ಪ್ರಕಟಿಸಬೇಕು. ದಿನಕ್ಕೆ ಕನಿಷ್ಠ 10 ಗಂಟೆ ವಿದ್ಯುತ್ ಪೂರೈಕೆ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ ಸಂಘಟನಕಾರರು, ಅಸಮರ್ಪಕ ಸೇವೆ ಮುಂದುವರೆದರೆ ಬೆಸ್ಕಾಂಗೆ ಬೀಗ ಬಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಇದೇ ವೇಳೆ ಸಂಘಟನೆ ಪದಾಧಿಕಾರಿಗಳು ಬೆಸ್ಕಾಂ ಎಇಇ ಪ್ರಭಾಕರ್ ಅವರಲ್ಲಿ ಮನವಿ ಸಲ್ಲಿಸಿದರು.
ಪುರಸಭಾ ಸದಸ್ಯ ಎಸ್.ಮಹದೇವ್, ಎಂ.ಟಿ.ಶಿವಣ್ಣ, ಹೊಂಬಾಳಮ್ಮನಪೇಟೆ ರಂಗನಾಥ್,ನಾರಾಯಣಸ್ವಾಮಿ, ಶಿವಶಂಕರ್, ರಾಮಕೃಷ್ಣ, ಖಾದ್ರಿ ನರಸಿಂಹಯ್ಯ ಸೇರಿದಂತೆ ನೂರಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

