ಬೆಂಗಳೂರು ಗ್ರಾಮಾಂತರ

'ಮಠಗಳು ಧಾರ್ಮಿಕ ಕ್ಷೇತ್ರಕ್ಕೆ ಸೀಮಿತ ಬೇಡ'

Published On :

ಶೈಕ್ಷಣಿಕ, ವೈಚಾರಿಕ, ಸಾಹಿತ್ಯ, ದಾಸೋಹ ಕ್ಷೇತ್ರಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸಲಿ: ಬಸವ ರಮಾನಂದ ಸ್ವಾಮಿ ಕರೆ
ಕನ್ನಡಪ್ರಭವಾರ್ತೆ, ನೆಲಮಂಗಲ, ಮಾ.22
ಮಠಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಶೈಕ್ಷಣಿಕ, ವೈಚಾರಿಕ, ಸಾಹಿತ್ಯ ಮತ್ತು ದಾಸೋಹ ಕ್ಷೇತ್ರಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸುತ್ತಲೇ ಇಂದಿಗೂ ಜನ ಸಮೂಹವನ್ನು ಆಕರ್ಷಿಸುತ್ತ ಬಂದಿವೆ ಎಂದು ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮಿ ತಿಳಿಸಿದರು.
ಅವರು ತಾಲೂಕಿನ ಸೋಂಪುರ ಹೋಬಳಿಯ ಶ್ರೀ ವನಕಲ್ಲು ಮಲ್ಲೇಶ್ವರ ಕ್ಷೇತ್ರದಲ್ಲಿ ನಡೆದ ರಾಜ್ಯ ಮಟ್ಟದ ಕವಿ-ಕಾವ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸಾಹಿತ್ಯವಿಲ್ಲದ ಬದುಕಿಲ್ಲ. ಬದುಕೇ ಸಾಹಿತ್ಯವಲ್ಲ. ಈ ತತ್ವದಡಿಯಲ್ಲಿ ಕೃಷಿ ಕಾಯಕವನ್ನು ನಡೆಸುತ್ತಲೆ ಕನ್ನಡದ ಸಾಕಷ್ಟು ಕವಿಗಳು ಉನ್ನತ ಸ್ಥಾನಕ್ಕೇರಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ವಚನಕಾರರು ದಾಸವರೇಣ್ಯರು ಜನಪದರು ಸಾಹಿತ್ಯವನ್ನು ಅತ್ಯಂತ ಶ್ರೀಮಂತಗೊಳಿಸಿ ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಿ ಮನುಷ್ಯನ ಬದುಕಿಗೆ ಸಂಜೀವಿನಿಯಂಥ ಸಾಹಿತ್ಯವನ್ನು ನಾಡಿಗೆ ನೀಡಿದರು. ಇಂದು ಕನ್ನಡ ಸಾಹಿತ್ಯ ಪರಿಷತ್ ಯುವ ಕವಿಗಳನ್ನು ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವುದರಿಂದ ಉತ್ತಮ ಸಾಹಿತ್ಯ ರಚನೆ ಮಾಡುವ ಸಾಕಷ್ಟು ಯುವ ಪ್ರತಿಭೆಗಳನ್ನು ನಾಡಿನಾದ್ಯಂತ ಕಾಣಬಹುದಾಗಿದೆ. ಮುಂದೆ ನಾಡಿನಲ್ಲಿ ನಮ್ಮ ಮಾತೃ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಕನ್ನಡಿಗರಾದ ಎಲ್ಲರೂ ಕಂಕಣ ಬದ್ಧರಾಗಬೇಕೆಂದು ತಿಳಿಸಿದರು.
ಪುಸ್ತಕ ಬಿಡುಗಡೆ: ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯವರು ಮೂರು ಸಾವಿರದ ಇಪ್ಪತ್ತು ಕವನಗಳಲ್ಲಿ 121 ಕವನಗಳನ್ನು ಆಯ್ಕೆ ಮಾಡಿ ಸಂಕಲನದ ರೂಪದಲ್ಲಿ ವನಕಲ್ಲರಳಿ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ  ಪುಸ್ತಕ ಅಕ್ಷರ ಜ್ಞಾನವನ್ನು ಕಲಿಸಿದರೆ ಕಾವ್ಯ ಬದುಕಿನ ಮಜಲುಗಳನ್ನು ಅನಾವರಣಗೊಳಿಸುತ್ತದೆ. ಯಾವ ಮನಸ್ಸು ಆಂತರಿಕ ನೋವು-ನಲಿವುಗಳ ಸಾಗರದಲ್ಲಿ ಮುಳುಗುತ್ತದೆಯೋ ಅಲ್ಲಿಂದಲೇ ಸಾರ್ಥಕ ಬದುಕು ರೂಪುಗೊಳ್ಳುತ್ತದೆ. ಹಾಗೆ ರೂಪುಗೊಳ್ಳಲು ಮನಸ್ಸು ಸಹಕಾರಿಯಾಗುತ್ತದೆ ಎಂದರು.
ಬದುಕಿನ ಕಾವ್ಯ: ಯಾವ ಮನಸ್ಸನ್ನು ನೋವು-ನಲಿವುಗಳ ಅಂತರಾಳದಲ್ಲಿ ಮುಳುಗಿ ಎದ್ದು ಬರುತ್ತದೆಯೋ ಅಲ್ಲಿ ಒಂದಿಷ್ಟು ಬದುಕಿನ ಕಾವ್ಯ ರೂಪುಗೊಳ್ಳುತ್ತದೆ. ಇದೇ ನಿಜವಾದ ಬದುಕಿನ ಸಾಹಿತ್ಯ, ಸಾಹಿತ್ಯ ಬದುಕನ್ನು ಅಣಿಗೊಳಿಸುತ್ತಾ ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಜೀವನವನ್ನು ಹದಗೊಳಿಸುತ್ತದೆ. ಇದೇ ನಿಜವಾದ ಕಾವ್ಯ, ಕಾವ್ಯ ಎಂಬುದು ಮಾರುಕಟ್ಟೆಯಲ್ಲಿ ಸಿಗುವ ಸರಕಲ್ಲ ಇದು ಸಾಧಕನ ಸ್ವತ್ತಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹುಲಿಕಲ್ ನಟರಾಜು ತಿಳಿಸಿದರು.
ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ, ಪುಸ್ತಕಗಳು, ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು. ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು.
 ಕ್ಷೇತ್ರದ ಅಧ್ಯಕ್ಷ ಚನ್ನಪ್ಪ, ಕಾರ್ಯದರ್ಶಿ ಗೋವಿಂದಪ್ಪ, ಕೋಶಾಧಿಕಾರಿ ಸಹದೇವಯ್ಯ, ಗೋಪಾಲಯ್ಯ, ಗಂಗಣ್ಣ, ಕೆ.ಎಚ್.ಶಿವಕುಮಾರಯ್ಯ, ಯೋಗಾನಂದ, ನಾಗರಾಜು, ರಾಮಕೃಷ್ಣಯ್ಯ, ಸೋಂಪುರ ಹೋಬಳಿ ಕ.ಸಾ.ಪ ಅಧ್ಯಕ್ಷ ಡಿ.ಎಸ್.ರುದ್ರೇಶ್, ರವಿಕುಮಾರ್, ಎಸ್.ರುದ್ರಯ್ಯ, ನರಸೀಪುರದ ನಂಜಂಡಯ್ಯ, ಎನ್.ಮಹದೇವ್, ಯೋಗಾನಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.