ಬೆಂಗಳೂರು ಗ್ರಾಮಾಂತರ

ಕುಮಾರ ಸಮರಕ್ಕೆ ನಿಖಿಲ್ ಸಾರಥ್ಯ

Published On :

-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಮಾ.23

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾವು ಸ್ಪರ್ಧಿಸುತ್ತಿರುವ ಸ್ವಕ್ಷೇತ್ರ ರಾಮನಗರದಲ್ಲಿ ತಮ್ಮ ಪುತ್ರ ನಿಖಿಲ್‌ಗೌಡ ಅವರನ್ನು ಪ್ರಚಾರಕ್ಕೆ ಇಳಿಸಲು ನಿರ್ಧರಿಸಿದ್ದಾರೆ. ಇದರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದ ಮೂರನೇ ತಲೆಮಾರಿನ ಕುಡಿಯೊಂದರ ಸಕ್ರಿಯ ರಾಜಕಾರಣ ಪ್ರವೇಶ ಸನ್ನಿಹಿತವಾಗಿದೆ.
2011ರ ಮರು ಚುನಾವಣೆಯಲ್ಲಿ ಜೆಡಿಎಸ್ ಅನುಭವಿಸಿದ ಸೋಲಿನ ಬೆನ್ನಲ್ಲೇ ದೇವೇಗೌಡರ ಕುಟುಂಬದ ಚಿತ್ತ ಚನ್ನಪಟ್ಟಣದತ್ತ ನೆಟ್ಟಿತ್ತು. ಅನಿತಾ ಕುಮಾರಸ್ವಾಮಿ ಅವರನ್ನು ಅಲ್ಲಿಂದ ಕಣಕ್ಕಿಳಿಸುವ ಮೂಲಕ ಮೂರಾಬಟ್ಟೆಯಾಗಿದ್ದ ಪಕ್ಷಕ್ಕೆ ಕಾಯಕಲ್ಪ ನೀಡಲು ಯೋಜನೆ ರೂಪಿಸಿ, ಅದಕ್ಕೆ ಪೂರಕವಾಗಿ ಪಕ್ಷ ಸಂಘಟನೆ ಹೊಣೆಯನ್ನು ನಿಖಿಲ್‌ಗೌಡಗೆ ನೀಡುವ ಚಿಂತನೆ ನಡೆಸಲಾಗಿತ್ತು.
ಕಳೆದ ವರ್ಷ ಕನಕಪುರದಲ್ಲಿ ನಡೆದಿದ್ದ ಕುಮಾರಸ್ವಾಮಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಜತಗೆ ನಿಖಿಲ್‌ಗೌಡ ಮೊಟ್ಟ ಮೊದಲ ಬಾರಿ ವೇದಿಕೆ ಏರಿದ್ದರು. ಇನ್ನೇನು ರಾಜಕೀಯ  ಪ್ರವೇಶ ಆಗಿಯೇ ಹೋಯಿತು ಎನ್ನುವಷ್ಟರಲ್ಲಿ  ಇತರೆ ಕಾರಣಗಳಿಂದ ತಡೆ ಬಿದ್ದಿತ್ತು. ಇದೀಗ ಪ್ರವೇಶ ಸಂಭವವಿದೆ.
ಕುಮಾರಸ್ವಾಮಿ ಇಂಗಿತ: ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ರಾಜ್ಯ ಪ್ರವಾಸದಲ್ಲಿ ಬ್ಯುಸಿಯಾಗುವ ತಾವು ರಾಮನಗರದ ಪ್ರಚಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಾಗದು. ತಮ್ಮ ಅನುಪಸ್ಥಿತಿಯಲ್ಲಿ ನಿಖಿಲ್‌ಗೌಡ ಅವರನ್ನು ಪ್ರಚಾರಕ್ಕೆ ಇಳಿಸುವ ಇಂಗಿತವನ್ನು ಪಕ್ಷದ ಸ್ಥಳೀಯ ಮುಖಂಡರ ಬಳಿ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮನಗರ ಕ್ಷೇತ್ರ ಜೆಡಿಎಸ್ ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರನ್ನು ಶುಕ್ರವಾರ ಬೆಂಗಳೂರಿಗೆ ಕರೆಸಿಕೊಂಡಿದ್ದ ಕುಮಾರಸ್ವಾಮಿ ಅವರು ಚುನಾವಣೆ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ನಗರಸಭೆ ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶದ ಬಗ್ಗೆ ಪ್ರಸ್ತಾಪಿಸಿದ ಕೆಲವರು ಖುದ್ದು ಪ್ರಚಾರಕ್ಕೆ ಬರಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ನಗರಸಭೆ ಚುನಾವಣೆ ಫಲಿತಾಂಶವನ್ನು ಮುಂಬರುವ ವಿಧಾನಸಭೆ ಚುನಾವಣೆ ಜತೆ ಹೋಲಿಸುವ ಪ್ರಶ್ನೆಯೇ ಬೇಡ. ರಾಜ್ಯ ಪ್ರವಾಸದ ನಡುವೆ ಸಾಧ್ಯವಾದಷ್ಟು ಬಿಡುವು ಮಾಡಿಕೊಂಡು ರಾಮನಗರ ಜಿಲ್ಲೆ ಕಡೆ ಗಮನ ಕೇಂದ್ರೀಕರಿಸಲಾಗುವುದು. ಸ್ವಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವೆ ಎಂದಿದ್ದಾರೆ.  
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಹಂತದಿಂದಲೇ ನಿಖಿಲ್‌ಗೌಡ ರಾಮನಗರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರನ್ನು ಬಳಸಿಕೊಂಡು ಕ್ಷೇತ್ರಾದ್ಯಂತ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಬೇಕು ಎಂದು ಕುಮಾರಸ್ವಾಮಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ತಾಕೀತು ಮಾಡಿದ್ದಾರೆ.
ಯಾರಿಗೂ ಅಡ್ಡಿ ಬೇಡ: ಕುಮಾರಸ್ವಾಮಿ ಗುರುವಾರವಷ್ಟೆ ತಮ್ಮ ಪತ್ನಿ ಅನಿತಾ ಸ್ಪರ್ಧೆಗೆ ಇಳಿಯುತ್ತಿರುವ ಚನ್ನಪಟ್ಟಣದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದರು. ಅನ್ಯ ಪಕ್ಷಗಳಿಂದ ಜೆಡಿಎಸ್‌ಗೆ ಆಗಮಿಸುತ್ತಿರುವವರಿಗೆ ಮೂಲ ಕಾರ್ಯಕರ್ತರು ಮತ್ತು ಮುಖಂಡರು ಯಾವುದೇ ರೀತಿ ಅಡ್ಡಿ ಬೇಡ ಎಂದು ಸೂಚನೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರು ಒಳ ಜಗಳ ಬಿಟ್ಟು,  ಪಕ್ಷದ ಗೆಲವಿಗೆ ಶ್ರಮಿಸಬೇಕು ಕುಮಾರಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.