ಕಾರ್ಯಕರ್ತರು ಯಾರೂ ಹಿಂದೆ ಬರಬೇಡಿ

Updated on: 

ಚನ್ನಪಟ್ಟಣ: ನನ್ನ ಹಿಂದೆ ಪಕ್ಷದ ಕಾರ್ಯಕರ್ತರು ಯಾರು ಬರಬೇಡಿ, ನಾನೇ ನಿಮ್ಮ ಮುಂದೆ ಬರುತ್ತೇನೆ- ಇದು ತಾಲೂಕು ಜೆಡಿಎಸ್ ಪಡೆಗೆ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಅನಿತಾಕುಮಾರಸ್ವಾಮಿ ನೀಡಿದ ಹುಕುಂ.
ಪಟ್ಟಣದ 11ನೇ ಅಡ್ಡರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ ಅವರು ಚುನಾವಣೆ ಮುಗಿಯುವವರೆಗೆ ನೀವು ನಿಮ್ಮ ನಿಮ್ಮ ಊರುಗಳಲ್ಲೇ ಉಳಿದು ಪಕ್ಷ ಸಂಘಟನೆ ಮಾಡಿ ಎಂದು ತಾಕೀತು ಮಾಡಿದರು.
ನಮ್ಮವರನ್ನು ಉಳಿಸಿ, ಬೇರೆಯವರನ್ನು ಕರೆಸಿ: ಈ ಬಾರಿಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಅಹರ್ನಿಶಿ ದುಡಿಯುವಂತೆ ಕರೆ ನೀಡಿದ ಅನಿತಾ ಕುಮಾರಸ್ವಾಮಿ ಮುಂದಿನ ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಇಚ್ಛಿಸುವ ಅನ್ಯಪಕ್ಷದ ಮುಖಂಡರನ್ನು ನಮ್ಮ ಪಕ್ಷಕ್ಕೆ ಕರೆತನ್ನಿ ಎಂದು ಆದೇಶಿಸಿದರು.
ಅನ್ಯಪಕ್ಷದವರನ್ನು ಸ್ವಾಗತಿಸುವ ಜತೆಗೆ ನಮ್ಮ ಪಕ್ಷದ ಮುಖಂಡರನ್ನು ಎಲ್ಲೂ ಹೋಗದಂತೆ ನೋಡಿಕೊಳ್ಳಿ ಎಂದು ತಿಳಿಸಿದ ಅವರು ಚುನಾವಣೆಗೆ ಇಂದಿನಿಂದಲೇ ತಯಾರಾಗುವಂತೆ ಕರೆ ನೀಡಿದರು.
ಯೋಗೇಶ್ವರ್ ಜತೆ ನಮ್ಮ ಪಕ್ಷದಿಂದ ಯಾರೂ ಹೋಗುತ್ತಿಲ್ಲ, ಅವರದೇ ಪಕ್ಷದವರಿಗೆ ಶಾಲು ಹೊದಿಸಿ ಪಕ್ಷಾಂತರ ನಡೆಸಿದ್ದಾರೆ. ಈ ಬಗ್ಗೆ ನಮ್ಮ ಪಕ್ಷದ ಯಾವ ಕಾರ್ಯಕರ್ತರು ತಲೆ ಕೆಡಿಸಿ ಕೊಳ್ಳಬೇಡಿ  ಎಂದು ತಿಳಿಸಿದರು.
ನನಗೆ ಎಲ್ಲವೂ ತಿಳಿಯುತ್ತೆ: ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿದಿನದ ಬೆಳವಣಿಗೆಯೂ ನಮ್ಮ ಅರಿವಿಗೆ ಬರುತ್ತದೆ.
ನಾನು ಎಲ್ಲವನ್ನೂ ಗಮನಿಸುತ್ತಿದ್ದು ನೀವು ನಮ್ಮ ಹಿಂದೆ ಬಂದು ಮಾಡುವುದೇನೂ ಇಲ್ಲ, ನಿಮ್ಮ ಊರಿನಲ್ಲಿ ಕೆಲಸಮಾಡಿ ಎಂದರು.
ಪ್ರತಿದಿನ ನಾನು ಪಕ್ಷದ ಎಲ್ಲಾ ಮುಖಂಡರೊಂದಿಗೆ ಸಂಪರ್ಕದಲ್ಲಿರುತ್ತೇನೆ. ಗ್ರಾ.ಪಂ, ತಾ.ಪಂ, ಜಿ.ಪಂ ಮಟ್ಟದ ಜನಪ್ರತಿನಿಧಿಗಳು, ಪಕ್ಷದ ವಿವಿಧ ವಿಭಾಗದ ಮುಖಂಡರು, ಪಕ್ಷದ ಪದಾಧಿಕಾರಿಗಳು ಒಗ್ಗಟ್ಟಿನಿಂದ ದುಡಿದು ಉತ್ತಮ ಫಲಿತಾಂಶ ತಂದು ಕೊಡಿ ಎಂದರು.
ಆರಂಭದಲ್ಲಿರುವ ಉತ್ಸಾಹವನ್ನು ಕೊನೆಕ್ಷಣದವರೆಗೂ ಕಾಯ್ದುಕೊಳ್ಳಿ. ಯಾವುದೇ ಕಾರಣಕ್ಕೂ ನೀವು ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ನಮ್ಮ ಪರ ಮತಚಲಾಯಿಸುವಂತೆ ಮನವಿ ಮಾಡಿ, ದೇವೇಗೌಡರು ಮತ್ತು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀಡಿರುವ ಕೊಡುಗೆಯನ್ನು ಮನದಟ್ಟ ಮಾಡಿ ಕೊಟ್ಟು ಜೆಡಿಎಸ್ ಗೆಲವಿಗೆ ಶ್ರಮಿಸುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ  ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಮುಖಂಡರಾದ ಮಲ್ಲಿಕಾರ್ಜುನಗೌಡ, ಸಿಂ.ಲಿಂ.ನಾಗರಾಜು,  ಜಿ.ಪಂ ಸದಸ್ಯ ರಘುಕುಮಾರ್, ರಮೇಶ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ವಾಸೀಲ್ ಆಲಿಖಾನ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಉಮಾಶಂಕರ್, ತಾ.ಪಂ ಸದಸ್ಯರಾದ ಮಾರೇಗೌಡ, ಕಾಂತರಾಜು, ನಗರಸಭಾ ಸದಸ್ಯರಾದ ರಮೇಶ್ ಬಾಬು, ಹಮೀದ್ ಮುನ್ನಾವರ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com