ಕನಕಪುರ: ತಾಲೂಕು ಮರಳವಾಡಿ ಹೋಬಳಿ ಕುಂಬಾರದೊಡ್ಡಿ ಗ್ರಾಮದಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ಮೂರುಮಂದಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ಮನಕಲಕುವ ಘಟನೆ ನಡೆದಿದೆ. ಕುಂಬಾರದೊಡ್ಡಿಯ ಗಿರಿಜಮ್ಮ (27)ತನ್ನ ಮಗ ಗಿರೀಶ್(9)ಮತ್ತು ನಾದಿನಿ ಮಗ ಅಭಿಷೇಕ್(11) ಜೊತೆ ಬಟ್ಟೆ ಒಗೆಯಲು ಸಮೀಪದ ಕೆರೆಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಕೆರೆಯ ನೀರಿನಲ್ಲಿ ಆಟವಾಡುತ್ತಿದ್ದ ಮಕ್ಕಳು ಆಳವನ್ನು ಅರಿಯದೆ ಮುಳುಗಿಹೊಗಿದ್ದಾರೆ. ಘಟನೆಯಿಂದ ದಿಗ್ಭ್ರಾಂತಳಾದ ಗಿರಿಜಮ್ಮ ನೆರವಿಗಾಗಿ ಕೂಗಿದರೂ ಯಾರೂ ಜನರಿಲ್ಲದ ಕಾರಣ ತಾನೇ ನೀರಿಗಿಳಿದು ಮಕ್ಕಳನ್ನು ರಕ್ಷಿಸಲು ಮುಂದಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ವೃತ್ತನಿರೀಕ್ಷಕ ನಾಗರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
ಡಿಕ್ಕಿ: 6 ಜನರಿಗೆ ಕಾಲು ಮುರಿತ
ಕನಕಪುರ: ವಾರಾಂತ್ಯದ ರಜೆಯ ಮೋಜನ್ನು ಅನುಭವಿಸಲು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಕನಕಪುರ ತಾಲೂಕಿನ ಸಂಗಮಕ್ಕೆ ಆಗಮಿಸಿದ್ದ ಪ್ರವಾಸಿಗಳ ಕ್ವಾಲಿಸ್ ವಾಹನ ರಸ್ತೆಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಕಾರಣದಿಂದ ಆರು ಜನರಿಗೆ ಕಾಲು ಮುರಿದಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ನಿವಾಸಿಗಳು ಸಂಗಮ ಮೇಕೇದಾಟಿಗೆ ನಿನ್ನೆ ಪ್ರವಾಸಕ್ಕೆ ಆಗಮಿಸಿದ್ದರು. ವಾಹನವು ಮರಳಿ ಬರುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಅಪ್ಪಳಿಸಿದ ಕಾರಣ ಎಲ್ಲರಿಗೂ ಗಾಯಗಳಾಗಿ ಆರು ಮಂದಿ ತೀವ್ರವಾದ ಅಪಘಾತಕ್ಕೆ ಈಡಾಗಿದ್ದಾರೆ. ಸಾತನೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ವಿದ್ಯುತ್ ತಂತಿ ಮೆಟ್ಟಿ ವ್ಯಕ್ತಿ ಸಾವು
ಕನಕಪುರ: ತಾಲೂಕು ಬೂದಿಗುಪ್ಪೆ ಗ್ರಾಮದಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಕಂಬಕ್ಕೆ ದನಗಳನ್ನು ಕಟ್ಟಲು ಹೋದ ವ್ಯಕ್ತಿಯೊಬ್ಬ ವಿದ್ಯುದಾಘಾತಕ್ಕೆ ಈಡಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತವ್ಯಕ್ತಿಯು ಬೂದಿಗುಪ್ಪೆಯ ನಿವಾಸಿ ನಾರಾಯಣಪ್ಪ(45) ಎಂದು ತಿಳಿದುಬಂದಿದೆ.
ಬೆಳಗಿನ ಜಾವ 5.30 ರಲ್ಲಿ ಎಂದಿನಂತೆ ಲೈಟ್ ಕಂಬಕ್ಕೆ ದನಗಳನ್ನು ಕಟ್ಟಲು ಹೋಗಿದ್ದ ನಾರಾಯಣಪ್ಪ ವಿದ್ಯುತ್ ಹರಿಯುತ್ತಿದ್ದ ತಂತಿ ತುಂಡರಿಸಿ ಬಿದ್ದಿದ್ದನ್ನು ಗಮನಿಸದೆ ಸ್ಪರ್ಶಿಸಿ ತೀವ್ರ ವಿದ್ಯುತ್ ಆಘಾತಕ್ಕೆ ಈಡಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಅಧಿಕಾರಿಗಳಾದ ಪುಟ್ಟಸ್ವಾಮಿ ಹಾಗೂ ಹೊಸಬೀದಿ ರಾಜು ಕುಟುಂಬಕ್ಕೆ ಸಾಂತ್ವನ ಹೇಳಿ ಸ್ಥಳದಲ್ಲಿಯೇ 30 ಸಾವಿರ ರು. ಪರಿಹಾರದ ತಾತ್ಕಾಲಿಕ ಚೆಕ್ ಒದಗಿಸಿ ಇಲಾಖೆಯ ವತಿಯಿಂದ ಹೆಚ್ಚಿನ ಪರಿಹಾರ ಒದಗಿಸುವ ಆಶ್ವಾಸನೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮುಖಂಡ ಬೂದಿಗುಪ್ಪೆ ಸಂಪತ್ ಅವರು ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ವೃತ್ತ ನಿರೀಕ್ಷಕ ಧನಂಜಯ ಭೇಟಿ ನೀಡಿದ್ದರು. ಕನಕಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ಹಾಗೂ ಪಂಚನಾಮೆ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.