ಕ.ಪ್ರ.ವಾರ್ತೆ ಮಾಗಡಿ ಮಾ.30
ಭ್ರಷ್ಟಾಚಾರ ನಿರ್ಮೂಲನೆ, ಮೌಲ್ಯಾಧಾರಿತ ರಾಜಕಾರಣ, ಆಡಳಿತದಲ್ಲಿ ಪಾರದರ್ಶಕತೆಗಾಗಿ ಭಾರತೀಯ ಜನತಾ ದಳವನ್ನು ಎಲ್ಲರೂ ಬೆಂಬಲಿಸುವಂತೆ ರಾಜ್ಯಾಧ್ಯಕ್ಷ ಎಂ.ಎಸ್. ಶ್ರೀನಿವಾಸ್ ಕರೆ ನೀಡಿದರು.
ಅವರು ಮಾಗಡಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸದ ಸ್ಥಾನದ ಚುನಾವಣೆಯಲ್ಲಿಯೂ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಪವಿತ್ರವಾದ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಣ, ರಾಜಕೀಯ, ಕಡ್ಡಾಯ ಮತದಾನ ಕುರಿತಂತೆ ಜಾಗೃತಿ ಮೂಡಿಸಲು ಭಾರತೀಯ ಜನತಾ ದಳ ಸಂಕಲ್ಪ ಮಾಡಿದೆ ಎಂದರು. ಸಾರ್ವಜನಿಕರ ಹಣ ಸರ್ಕಾರದಿಂದ ದುರುಪಯೋಗವಾಗುತ್ತಿದೆ. 5 ವರ್ಷಕ್ಕೊಮ್ಮೆ ಬರುವ ಚುನಾವಣೆಗಳು ಭ್ರಷ್ಟಾಚಾರದ ಮುಂಗಾರು ಮಳೆಯಾಗುತ್ತಿದೆ ಎಂದ ಭಾರತೀಯ ಜನತಾ ದಳದ ಉಪಾಧ್ಯಕ್ಷ ಇ.ಟಿ.ಕೇರ್ ರಾಜು ತಿಳಿಸಿದರು. ರಾಜ್ಯ ಹಿರಿಯ ಉಪಾಧ್ಯಕ್ಷ ವೈ.ಜಿ. ನಾಗರಾಜು ಮಾತನಾಡಿ ಒಳ್ಳೆಯ ಗುಣಗಳುಳ್ಳ ಸಾಮಾನ್ಯ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವಂತಾಗಬೇಕು. ಕೇವಲ 5 ಲಕ್ಷ ರು.ಗಳಲ್ಲಿ ಚುನಾವಣೆ ಪ್ರಕಿಯೆ ಮುಗಿಸಬೇಕು. ವಿಪಕ್ಷಗಳ ಬಗ್ಗೆ ಟೀಕೆ, ಟಿಪ್ಪಣೆಗಳನ್ನು ಮಾಡಬಾರದು. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ನೋಡಲ್ ಅಧಿಕಾರಿಗಳ ನೇಮಕವಾಗಬೇಕು. ಇದಕ್ಕೆಲ್ಲ ಮಿಗಿಲಾಗಿ ಮತದಾರರ ಸಂಪೂರ್ಣ ಬದಲಾಗಬೇಕು. ಸುಧಾರಿತ ಆರ್ಥಿಕತೆ, ಸಮಗ್ರ ವಿದ್ಯಾಭ್ಯಾಸ, ಸಾಮಾಜಿಕ ನ್ಯಾಯ ಭಾರತೀಯ ಜನತಾ ದಳದ ಗುರಿ ಎಂದರು. ಖಜಾಂಚಿ ವಿರೇಂದ್ರ ಕುಮಾರ್ ಮಾತನಾಡಿದರು.