ಬೆಂಗಳೂರು ಗ್ರಾಮಾಂತರ

ದಾಖಲೆ ಇಲ್ಲದ 34 ಲಕ್ಷ ವಶ: ಡಿಸಿ

Published On :

ಕ.ಪ್ರ.ವಾರ್ತೆ   ರಾಮನಗರ   ಮೇ 2-
ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 34.04 ಲಕ್ಷವನ್ನು ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಆದರೆ, ಪ್ರತಿಷ್ಠಿತ ರಾಮನಗರ ಕ್ಷೇತ್ರದಲ್ಲಿ ಚುನಾವಣಾ ಆಯೋಗದಿಂದ ನಿಯೋಜಿತರಾಗಿರುವ ಅಧಿಕಾರಿಗಳ ತಂಡಕ್ಕೆ ಇಲ್ಲಿವರೆಗೆ ನಯಾಪೈಸೆಯೂ ಸಿಕ್ಕಿಲ್ಲವಂತೆ.
ಈ ಸಂಗತಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನವೀನ್ ರಾಜ್‌ಸಿಂಗ್ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೊರ ಹಾಕಿದ್ದಾರೆ. ವಶಪಡಿಸಿಕೊಂಡಿರುವ ಹಣದ ಪೈಕಿ ಮಾಗಡಿಯಲ್ಲಿ 16.85 ಲಕ್ಷ, ಕನಕಪುರದಲ್ಲಿ 9.8 ಲಕ್ಷ, ಚನ್ನಪಟ್ಟಣದಲ್ಲಿ 7.39 ಲಕ್ಷ ಸಿಕ್ಕಿಬಿದ್ದಿದೆ. 428 ಕಡೆ ಅಬಕಾರಿ ತಂಡಗಳಿಂದ ದಾಳಿ ನಡೆದಿದ್ದು, 1.05 ಲಕ್ಷ ಮೌಲ್ಯದ ಮದ್ಯವನ್ನು ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 37 ಮಂದಿಯನ್ನು ಬಂಧಿಸಿ, ವಾಹನವೊಂದನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದರು.
23 ಉಲ್ಲಂಘನೆ ಪ್ರಕರಣ: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 23 ಪ್ರಕರಣಗಳನ್ನು ದಾಖಲಿಸಲಾಗಿದೆ. ಅತಿ ಹೆಚ್ಚು ಪ್ರಕರಣಗಳು ಚನ್ನಪಟ್ಟಣದಲ್ಲಿ ದಾಖಲಾಗಿವೆ. ಅಲ್ಲಿನ ಪ್ರಕರಣಗಳ ಸಂಖ್ಯೆ 9 ಆಗಿವೆ. ಕನಕಪುರದಲ್ಲಿ 7, ಮಾಗಡಿಯಲ್ಲಿ 6 ಮತ್ತು ರಾಮನಗರದಲ್ಲಿ 1 ಪ್ರಕರಣವಿದೆ ಎಂದು ಹೇಳಿದರು.  
ಎರಡೂ ಅಪರಾಧ: ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುವುದು ಎಷ್ಟರ ಮಟ್ಟಿಗೆ ಶಿಕ್ಷಾರ್ಹ ಅಪರಾಧವೋ ಅಂತೆಯೇ ಮತದಾರರು ಅಭ್ಯರ್ಥಿ ಇಲ್ಲವೇ ಅವರ ಕಡೆಯವರಿಂದ ಹಣ ಪಡೆಯುವುದೂ ಅಪರಾಧವೇ. ಇಂತಹ ಪ್ರಕರಣಗಳ ಪತ್ತೆಗೆ ಪ್ರತ್ಯೇಕ ತಂಡಗಳು ಅಹೋರಾತ್ರಿ ಕಾರ್ಯಾಚರಣೆಗೆ ಇಳಿದಿವೆ. ಸಿಕ್ಕಿಬಿದ್ದವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿ, ಜೈಲಿಗಟ್ಟಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮತಗಟ್ಟೆಗೆ ಭದ್ರತೆ: ಈ ಬಾರಿ ಮುಕ್ತ ಮತ್ತು ನಿರ್ಭೀತ ಮತದಾನಕ್ಕೆ ಅನುವಾಗುವಂತೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಮತಗಟ್ಟೆಗೆ ಅರೆಸೇನಾ ಪಡೆಯ ಇಬ್ಬರು ಸಿಬ್ಬಂದಿ, ಪೊಲೀಸ್ ಬಂದೋಬಸ್ತ್ ಇರುತ್ತದೆ. ಅಕ್ರಮಗಳ ತಡೆಗೆ ಸಂಚಾರಿ ತಂಡಗಳು, ಸೂಕ್ಷ್ಮ ವೀಕ್ಷಕರನ್ನು ನಿಯೋಜನೆಗೊಳಿಸಲಾಗಿದೆ. ಮತಗಟ್ಟೆ ಒಳಗೆ ಮತ್ತು ಹೊರಗಿನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದರು.
29141 ಮತ ಹೆಚ್ಚಳ: ಕಳೆದ ಏಪ್ರಿಲ್ 7ರವರೆಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಿದ್ದು, ಜಿಲ್ಲೆಯ 4 ಕ್ಷೇತ್ರಗಳಲ್ಲಿ 29141 ಮತದಾರರ ಹೆಸರನ್ನು ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. 6738 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. 10824 ಮತದಾರರ ಹೆಸರುಗಳನ್ನು ಸ್ಥಳಾಂತರಗೊಳಿಸಲಾಗಿದೆ. 724 ಹೆಸರು ತಿದ್ದುಪಡಿಯಾಗಿವೆ ಎಂದು ತಿಳಿಸಿದರು.
ಪೊಲೀಸ್ ವೀಕ್ಷಕ: ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಪಾಲನೆ ಮತ್ತು ಪೊಲೀಸ್ ಕಾರ್ಯ ವೈಖರಿ ವೀಕ್ಷಣೆಗೆಂದೇ ಐಪಿಎಸ್ ಅಧಿಕಾರಿ ಅನುರಾಗ್ ಅಗರ್‌ವಾಲ್ ಅವರನ್ನು ಪೊಲೀಸ್ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಪೊಲೀಸ್ ಸಿಬ್ಬಂದಿಯನ್ನು ಅವರು ಕೆಲಸ ನಿರ್ವಹಿಸುತ್ತಿರುವ ಸ್ಥಳದಿಂದ ಬೇರೆಡೆಗೆ ನಿಯೋಜನೆಗೊಳಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು. ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹಾಜರಿದ್ದರು.

ಕಿಡಿಗೇಡಿಗಳಿಗೆ ಎಚ್ಚರ
ಮತದಾನದ ಸಂದರ್ಭ ಹಾಗೂ ಮುನ್ನಾ ದಿನ ಯಾವುದೇ ಅಹಿತಕರ ಘಟನೆಗಳು ಸಂಭವಿಸಕೂಡದು. ಘಟನೆಗಳಿಗೆ ಕಾರಣರಾದವರನ್ನು ಪತ್ತೆ ಹಚ್ಚಿ, ಪ್ರಕರಣ ದಾಖಲಿಸಲಾಗುತ್ತದೆ. ಕಿಡಿಗೇಡಿಗಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು, ಸೂಕ್ತ ಸಹಕಾರ ನೀಡಬೇಕು ಎಂದು ನವೀನ್ ರಾಜ್‌ಸಿಂಗ್ ತಿಳಿಸಿದರು.

ಸಿಪಿವೈ ವಿರುದ್ಧ ಪ್ರಕರಣ
ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಗೆ ತೆರಳಿ ಮತಯಾಚಿಸಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನವೀನ್ ರಾಜ್‌ಸಿಂಗ್ ತಿಳಿಸಿದರು.  ಮತದಾರರಿಗೆ ಬಳುವಳಿಗಳ ಹಂಚಿಕೆ ಸಂಬಂಧ ಪರಸ್ಪರರ ಮೇಲೆ ದೂರಿನ ಮೇರೆಗೆ ಮಾಜಿ ಸಚಿವದ್ವಯರಾದ ಡಿ.ಕೆ.ಶಿವಕುಮಾರ್ ಹಾಗೂ ಪಿ.ಜಿ.ಆರ್.ಸಿಂಧ್ಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಇಬ್ಬರಿಗೂ ನೊಟೀಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.