ಬಹಿರಂಗಕ್ಕೆ ತೆರೆ; ಅಂತರಂಗಕ್ಕೆ ಮೊರೆ
ಮತ್ತೀಕೆರೆ ಜಯರಾಮ್
ರಾಮನಗರ: ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತ ಮಹಾ ಸಮರಕ್ಕೆ ಕ್ಷಣ ಗಣನೆ ನಡೆದಿದೆ. ಅಭ್ಯರ್ಥಿಗಳ ಒಳಗೆಲಸದ ಅಬ್ಬರ ತೀವ್ರಗೊಂಡಿದೆ. ಜಿಲ್ಲೆಯ ನಾಲ್ಕೂ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿದೆ. ಘಟಾನುಘಟಿಗಳ ಸ್ಪರ್ಧೆಯಿಂದಾಗಿ ಈ ಜಿಲ್ಲೆಯ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಕನಕಪುರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಅಬ್ಬರ ಜೋರಾಗಿದ್ದರೆ, ಉಳಿದ ಮೂರು ಕ್ಷೇತ್ರಗಳಾದ ಚನ್ನಪಟ್ಟಣ, ರಾಮನಗರ, ಮಾಗಡಿಯಲ್ಲಿ ತಂತ್ರ, ಕುತಂತ್ರ, ಷಡ್ಯಂತ್ರ ಜತೆಗೆ ಒಳಗೆಲಸದ ಪ್ರಭಾವ ಹೆಚ್ಚಾಗಿದೆ.
ಪ್ರಮುಖ ಅಭ್ಯರ್ಥಿಗಳು: ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ, ಕನಕಪುರದಲ್ಲಿ ಮಾಜಿ ಸಚಿವದ್ವಯರಾದ ಡಿ.ಕೆ.ಶಿವಕುಮಾರ್ ಮತ್ತು ಪಿ.ಜಿ.ಆರ್.ಸಿಂಧ್ಯಾ, ಚನ್ನಪಟ್ಟಣದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಗಡಿಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಸ್ಪರ್ಧೆ ಕಾರಣಕ್ಕೆ ಇಲ್ಲಿನ ಕದನ ಕೌತುಕವಾಗಿದೆ.
ಬಹಿರಂಗ ಪ್ರಚಾರ ಅಂತ್ಯದ ದಿನವಾದ ಶುಕ್ರವಾರ ಪ್ರಮುಖ ಪಕ್ಷಗಳು ಮತ್ತು ಅಭ್ಯರ್ಥಿಗಳು ವಿವಿಧೆಡೆ ರೋಡ್ ಶೋ ಮೆರವಣಿಗೆ ಹಾಗೂ ತಮ್ಮ ದಂಡು ಸಮೇತ ಮತಯಾಚನೆ ನಡೆಸಿದ್ದಾರೆ. ಈ ಬೆನ್ನಲ್ಲೇ ಸಂಪನ್ಮೂಲ ರವಾನೆ, ಪ್ರತಿಸ್ಪರ್ಧಿ ಬಳಿಯಿರುವ ಮುಖಂಡರಿಗೆ ಗಾಳ ಹಾಕುವ ಕೆಲಸ ಸದ್ದಿಲ್ಲದೆ ಸಾಗಿದೆ.
ಹೆಚ್ಚಿದ ಬಂದೋಬಸ್ತ್: ಈ ಚುನಾವಣೆಯಲ್ಲಿ ಹಿಂದೆಂದೂ ಕಾಣದಷ್ಟು ಬಿಗಿ ಬಂದೋಬಸ್ತ್ ಇದ್ದಾಗ್ಯೂ ಹಣದ ಹೊಳೆ ಸರಾಗವಾಗಿಯೇ ಹರಿದಿದೆ. ಕಳೆದ ಬಾರಿಗಿಂತ ಮತದ ಧಾರಣೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಬಳುವಳಿ, ಮದ್ಯದ ಹಂಚಿಗೆ ಸ್ವಲ್ಪ ಮಟ್ಟಿನ ಕಡಿವಾಣ ಬಿದ್ದಿದೆ ಎನ್ನುವುದೊಂದೇ ಸಮಾಧಾನಕರ ಸಂಗತಿಯಾಗಿದೆ.
ಮತದಾನಕ್ಕೆ ಮುನ್ನಾ ದಿನವಾದ ಶನಿವಾರ ಹಣ ಹಂಚಿಕೆ ಕಷ್ಟ ಸಾಧ್ಯವಾಗಬಹುದು ಎನ್ನುವ ಉದ್ದೇಶದಿಂದ ಸಾಕಷ್ಟು ಅಭ್ಯರ್ಥಿಗಳು ಗುರುವಾರ ರಾತ್ರಿಯಿಂದಲೇ ಬೂತ್ ಮಟ್ಟದ ಕಟ್ಟಾಳುಗಳಿಗೆ ತಲುಪಿಸಿದ್ದಾರೆ. ಕರಪತ್ರದ ಜತೆಗೆ ಝಣ ಝಣ ಕಾಂಚಾಣ ತಲಾವಾರು ಲೆಕ್ಕದಲ್ಲಿ ಕುಟುಂಬಗಳಿಗೆ ತಲುಪುತ್ತಿದೆ.
ಚನ್ನಪಟ್ಟಣ ಅಖಾಡ: ಬೊಂಬೆನಗರಿ ಅಖಾಡದಲ್ಲಿ 15 ಮಂದಿ ಅಭ್ಯರ್ಥಿಗಳಿದ್ದಾರಾದರೂ ಜೆಡಿಎಸ್ನ ಅನಿತಾ ಕುಮಾರಸ್ವಾಮಿ ಹಾಗೂ ಸಮಾಜವಾದಿ ಪಕ್ಷದ ಸಿ.ಪಿ.ಯೋಗೇಶ್ವರ್ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್ ಅಭ್ಯರ್ಥಿ ಸಾದತ್ ಆಲಿಖಾನ್, ಬಿಜೆಪಿ ಹುರಿಯಾಳು ರವಿಕುಮಾರಗೌಡ ಠೇವಣಿ ಉಳಿಸಿಕೊಳ್ಳಲು ಹರಸಾಹಸ ನಡೆಸಬೇಕಿದೆ. ಕ್ಷೇತ್ರದಲ್ಲಿ ಒಟ್ಟಾರೆ 1,98,257 ಮತದಾರರಿದ್ದು, ಈ ಪೈಕಿ ಮಹಿಳೆಯರೇ ಅಧಿಕವಾಗಿದ್ದಾರೆ.
ರಾಮನಗರದ ಸೆಣಸು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೆಣೆಸುತ್ತಿದ್ದಾರೆ. ಇಲ್ಲಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 1,84, 207 ಮತದಾರರಿದ್ದಾರೆ.
ಮಾಗಡಿ ಕಣ: ಬೆಂಗಳೂರು ನಿರ್ಮಾತೃ ಕೆಂಪೇಗೌಡರ ತವರೂರು ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ 4ನೇ ಬಾರಿ ವಿಧಾನಸಭೆ ಪ್ರವೇಶಕ್ಕಾಗಿ ಹೋರಾಟ ನಡೆಸಿದ್ದಾರೆ. ಕಾಂಗ್ರೆಸ್ನ ಮಂಜುನಾಥ್, ಕೆಜೆಪಿಯ ಜೇಡ್ರಳ್ಳಿ ಕೃಷ್ಣಪ್ಪ ಪೈಪೋಟಿ ಒಡ್ಡಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಣದಲ್ಲಿ 16 ಮಂದಿ ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,03,453 ಮತದಾರರಿದ್ದಾರೆ.
ಕನಕಪುರ ಜಂಗೀಕುಸ್ತಿ: ಕನಕಪುರ ಕ್ಷೇತ್ರದಲ್ಲಿ ಮಾಜಿ ಸಚಿವದ್ವಯರಾದ ಜೆಡಿಎಸ್ನ ಪಿ.ಜಿ.ಆರ್.ಸಿಂಧ್ಯಾ ಮತ್ತು ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ನೇರ ಪೈಪೋಟಿ ಇದೆ. ಒಟ್ಟು 2,06,122 ಮತದಾರರಿದ್ದಾರೆ.
ಮತದಾನಕ್ಕೆ ಜಿಲ್ಲಾಡಳಿತ ಸಜ್ಜು
ವಿಧಾನಸಭೆ ಚುನಾವಣೆಗೆ ಜಿಲ್ಲೆಯ 4 ಕ್ಷೇತ್ರಗಳಲ್ಲಿ 1083 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 783 ಸಾಮಾನ್ಯ ಮತಗಟ್ಟೆಗಳಾಗಿವೆ. 181 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು 137 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಜಿಲ್ಲಾಡಳಿತ ಗುರುತಿಸಿದೆ.
ಕನಕಪುರ ಕ್ಷೇತ್ರದಲ್ಲಿ 285 ಮತಗಟ್ಟೆಗಳಿವೆ. ಇವುಗಳಲ್ಲಿ 247 ಸಾಮಾನ್ಯ, 23 ಸೂಕ್ಷ್ಮ ಮತ್ತು 21 ಅತಿಸೂಕ್ಷ್ಮ. ಚನ್ನಪಟ್ಟಣದ 251 ಮತಗಟ್ಟೆಗಳ ಪೈಕಿ 169 ಸಾಮಾನ್ಯ, 58 ಸೂಕ್ಷ್ಮ ಹಾಗೂ 32 ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ. ಮಾಗಡಿ ಕ್ಷೇತ್ರದ 288 ಮತಗಟ್ಟೆಗಳ ಪೈಕಿ 191 ಸಾಮಾನ್ಯವಾಗಿವೆ. 52 ಸೂಕ್ಷ್ಮ, 45 ಅತಿಸೂಕ್ಷ್ಮವಾದವು. ರಾಮನಗರ ಕ್ಷೇತ್ರದ 259 ಮತಗಟ್ಟೆಗಳಲ್ಲಿ 176 ಸಾಮಾನ್ಯ, 48 ಸೂಕ್ಷ್ಮ ಮತ್ತು 39 ಅತಿಸೂಕ್ಷ್ಮ ಮತಗಟ್ಟೆಗಳು. ಚುನಾವಣೆಗೆ 1273 ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಜಿಲ್ಲಾಡಳಿತವು ನಿರ್ಭೀತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಆಯಾ ತಾಲೂಕು ಕೇಂದ್ರದಿಂದ ಶನಿವಾರ ಮಧ್ಯಾಹ್ನದ ವೇಳೆಗೆ ಮತಗಟ್ಟೆ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ. ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯಕ್ಕಾಗಿ 5284 ಸಿಬ್ಬಂದಿ ನಿಯೋಜಿಸಲಾಗಿದೆ. ಇವರಲ್ಲದೆ ವೀಕ್ಷಕರು, ವೆಚ್ಚ ವೀಕ್ಷಕರು, ನೀತಿ ಸಂಹಿತೆ ಪಾಲನೆ ತಂಡ, ಚೆಕ್ಪೋಸ್ಟ್ ತಂಡ, ಸಂಚಾರಿ ತಂಡ, ಬಂದೋಬಸ್ತ್ಗಾಗಿ ಪೊಲೀಸ್ ಮತ್ತು ಅರೆಸೇನಾ ಪಡೆಗಳ 10 ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜಿತರಾಗಿದ್ದಾರೆ.
ಮೇ.5ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ: ರಾಮನಗರ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿ, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ.5ರ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

