ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರದಲ್ಲಿ ಭರ್ಜರಿ ಮತಬೇಟೆ

Published On :

ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮೇ 3
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದ ಶುಕ್ರವಾರ ಅಭ್ಯರ್ಥಿಗಳು ಭರ್ಜರಿ ಮತಬೇಟೆ ನಡೆಸಿದ್ದಾರೆ. ನಗರದ ಬೀದಿಬೀದಿಗಳಲ್ಲಿ ಕಾರ್ಯಕರ್ತರೊಂದಿಗೆ ಅಲೆದು ಮತದಾರ ಪ್ರಭುವಿನ ಕೃಪೆಗಾಗಿ ಕೈಮುಗಿದದ್ದೇ ಮುಗಿದದ್ದು. ಬಿಸಿಲಿನ ಝಳವನ್ನೂ ಲೆಕ್ಕಿಸದೇ ಅಭ್ಯರ್ಥಿಗಳು ಮತದಾರನ ಓಲೈಕೆಯಲ್ಲಿ ನಿರತರಾಗಿದ್ದದ್ದು ಕಂಡುಬಂತು.
ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ಏರ್ಪಟ್ಟಿರುವುದು ಇಬ್ಬರ ಮಧ್ಯೆ ಎಂದುಕೊಂಡಿದ್ದವರಿಗೆ ಸದ್ಯದ ಪರಿಸ್ಥಿತಿಯಲ್ಲಿ ನಿರಾಸೆಯಾಗಿದೆ. ಕಾರಣ ಕ್ಷೇತ್ರದಲ್ಲಿ ಬಹುತೇಕ ಚತುಷ್ಕೋನ ಸ್ಪರ್ಧೆಯ ಲೆಕ್ಕಾಚಾರ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಜೆ. ನರಸಿಂಹಸ್ವಾಮಿ, ಕಾಂಗ್ರೆಸ್‌ನ ಟಿ. ವೆಂಕಟರಮಣಯ್ಯ, ಜೆಡಿಎಸ್‌ನ ಸಿ. ಚನ್ನಿಗಪ್ಪ ಮತ್ತು ಜೆಡಿಎಸ್ ಬಂಡಾಯಗಾರ ಬಿ. ಮುನೇಗೌಡ ಐದಂಕಿಯ ಮತ ಪಡೆಯುವ ಹುರಿಯಾಳುಗಳು ಎಂಬ ಲೆಕ್ಕಾಚಾರ ಈಗ ದೊಡ್ಡ ಸುದ್ದಿಯಾಗಿದೆ.
ಪ್ರಚಾರ ಜೋರು: ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದ ಶುಕ್ರವಾರ ಬೆಳಗ್ಗಿನಿಂದಲೇ ಕಾಂಗ್ರೆಸ್ ಅಭ್ಯರ್ಥಿ ಟಿ. ವೆಂಕಟರಮಣಯ್ಯ ನಗರದ ವಿವಿಧ ವಾರ್ಡುಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡರು. ಅಲ್ಲಲ್ಲಿ ಚುನಾವಣಾ ಪ್ರಚಾರ ಭಾಷಣಗಳನ್ನೂ ಮಾಡುತ್ತಾ ಸಾಗಿದ ಅವರು ಕಾಂಗ್ರೆಸ್ ಪಕ್ಷದ ಆಡಳಿತ ಮತ್ತು ಜನಪರ ಯೋಜನೆಗಳ ಬಗ್ಗೆ ಮಾತನಾಡಿದರು.
ನಗರಸಭೆ ವ್ಯಾಪ್ತಿಯ ಹಲವು ವಾರ್ಡುಗಳಲ್ಲಿ ಕಾಂಗ್ರೆಸ್ ಪ್ರಚಾರ ಜೋರಾಗಿತ್ತು. ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ, ಮುಖಂಡರಾದ ಸಿ.ಡಿ. ಸತ್ಯನಾರಾಯಣಗೌಡ, ಎಂ.ಜಿ. ಶ್ರೀನಿವಾಸ್, ಜಿ. ಲಕ್ಷ್ಮೀಪತಿ ಸೇರಿದಂತೆ ಅನೇಕರು ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು.
ಅದೇ ರೀತಿ ಬಿಜೆಪಿ ಅಭ್ಯರ್ಥಿ ಜೆ. ನರಸಿಂಹಸ್ವಾಮಿ ಕೂಡ ದೊಡ್ಡಬಳ್ಳಾಪುರ ನಗರದಲ್ಲೇ ತಮ್ಮ ಚುನಾವಣಾ ಪ್ರಚಾರ ಚುರುಕುಗೊಳಿಸಿದ್ದರು. ನಗರಸಭೆ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಂಚರಿಸಿದ ಅವರು ಮನೆಮನೆಗೆ ತೆರಳಿ ಮತಯಾಚಿಸಿದರು.
ಹಲವೆಡೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಬಿಜೆಪಿಗೆ ಮತ ನೀಡಿ. ಕ್ಷೇತ್ರದಲ್ಲಿ ಇಲ್ಲಿವರೆಗೆ ಕಾಯ್ದುಕೊಂಡು ಬಂದಿರುವ ಶಾಂತಿ-ಸುವ್ಯವಸ್ಥೆ ಕಾಯ್ದುಕೊಂಡು ಬರಬೇಕಿದ್ದರೆ ವಲಸಿಗರಿಂದ ಸಾಧ್ಯವಿಲ್ಲ. ವಲಸಿಗರ ದಾಳಿಯಿಂದ ಕ್ಷೇತ್ರವನ್ನು ರಕ್ಷಿಸಬೇಕಿದೆ ಎಂದರು. ಪಕ್ಷದ ಅನೇಕ ಮುಖಂಡರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಜೆಡಿಎಸ್ ಅಭ್ಯರ್ಥಿ ಸಿ. ಚನ್ನಿಗಪ್ಪ ಸಹ ನಗರದ ಹಲವೆಡೆ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದರು. ಕೆಲವು ವಾರ್ಡುಗಳಿಗೆ ತೆರಳಿ ಮತಯಾಚಿಸಿದ ಅವರು ದೊಡ್‌ಡಬಳ್ಳಾಪುರವನ್ನು ಅಭಿವೃದ್ಧಿ ಶಾಪದಿಂದ ವಿಮುಕ್ತಗೊಳಿಸಲು ಜೆಡಿಎಸ್‌ಗೆ ಮತ ನೀಡಿ. ರಾಜ್ಯದಲ್ಲಿ ಉತ್ತಮ ಮತ್ತು ಸುಭದ್ರ ಸರ್ಕಾರ ನೀಡಲು ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಕುಮಾರಸ್ವಾಮಿಯವರ ಅಭಿವೃದ್ಧಿ ಹಿತಾಸಕ್ತಿಗೆ ಆಶೀರ್ವದಿಸಿ ಎಂದರು.
ಕೆಜೆಪಿ ಅಭ್ಯರ್ಥಿ ವಿ. ನಾಗೇಂದ್ರಪ್ರಸಾದ್ ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವೆಡೆ ಸಂಚರಿಸಿ ಮತಯಾಚಿಸಿದರು. ಜಡ್ಡುಗಟ್ಟಿರುವ ದೊಡ್ಡಬಳ್ಳಾಪುರದ ಅಭಿವೃದ್ಧಿಯ ಪುನಶ್ಚೇತನಕ್ಕಾಗಿ ಮತ್ತು ಹೊಸ ಪೀಳಿಗೆಯ ಆಶೋತ್ತರಗಳಿಗೆ ಪೂರಕವಾಗಿ ನಗರ-ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗಾಗಿ ಕೆಜೆಪಿ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಅದೇ ರೀತಿ ಪಕ್ಷೇತರ ಅಭ್ಯರ್ಥಿ ಬಿ. ಮುನೇಗೌಡ ರೋಡ್ ಶೋ ನಡೆಸಿದರೆ, ಸಿಪಿಐ(ಎಂ) ಅಭ್ಯರ್ಥಿ ಆರ್.ಚಂದ್ರತೇಜಸ್ವಿ ಹಲವು ಗ್ರಾಮಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ಭ್ರಷ್ಟಾಚಾರ ನಿರ್ಮೂಲನೆ ಮತ್ತು ದುಡಿಯುವ ವರ್ಗದ ಸಬಲೀಕರಣಕ್ಕಾಗಿ ಮತ ನೀಡುವಂತೆ ಅವರು ಮನವಿ ಮಾಡಿದರು. ಬಿಎಸ್ಪಿಯ ಪುರುಷೋತ್ತಮ್, ಬಿಎಸ್‌ಆರ್ ಕಾಂಗ್ರೆಸ್‌ನ ಕುಮಾರ್ ಕೂಡ ಅಂತಿಮ ದಿನ ಭರ್ಜರಿ ಮತಬೇಟೆಯಲ್ಲಿ ತೊಡಗಿದ್ದದ್ದು ಕಂಡುಬಂತು. ಒಟ್ಟಿನಲ್ಲಿ ಶುಕ್ರವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು ಈಗ ಅಭ್ಯರ್ಥಿಗಳಿಂದ ತೆರೆಮರೆ ಕಸರತ್ತು ಆರಂಭವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.