ಬೆಂಗಳೂರು ಗ್ರಾಮಾಂತರ

ಮತದಾನಕ್ಕೆ ದೊಡ್ಡಬಳ್ಳಾಪುರ ಸಜ್ಜು

Published On :

ಕ.ಪ್ರ.ವಾರ್ತೆ  ದೊಡ್ಡಬಳ್ಳಾಪುರ  ಮೇ 4
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಭಾನುವಾರ ನಡೆಯಲಿರುವ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ ಕ್ಷೇತ್ರದಲ್ಲಿ 4 ಹೆಚ್ಚುವರಿ ಮತಗಟ್ಟೆಗಳೂ ಸೇರಿದಂತೆ ಒಟ್ಟು 232 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 39 ಅತಿ ಸೂಕ್ಷ್ಮ, 60 ಸೂಕ್ಷ್ಮ ಮತ್ತು 129 ಸಾಮಾನ್ಯ ಮತಗಟ್ಟೆಗಳಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
1.82 ಲಕ್ಷ ಮತದಾರರು: ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 1.82.630 ಮತದಾರರಿದ್ದಾರೆ. ಅದರಲ್ಲಿ 93700 ಪುರುಷರು ಮತ್ತು 88930 ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ. ದೊಡ್ಡಬಳ್ಳಾಪುರ ನಗರ, ಕಸಬಾ ಹೋಬಳಿ, ದೊಡ್ಡಬೆಳವಂಗಲ ಹೋಬಳಿ, ಸಾಸಲು ಹೋಬಳಿ ಮತ್ತು ಮಧುರೆ ಹೋಬಳಿಗಳು ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದು, ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ತೂಬಗೆರೆ ಹೋಬಳಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ.
ನಗರ ಪ್ರದೇಶದಲ್ಲಿ ಶೇ.35ರಷ್ಟು ಮತದಾರರಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.65ರಷ್ಟು ಮತದಾರರಿದ್ದಾರೆ.
1600 ಸಿಬ್ಬಂದಿ ನಿಯೋಜನೆ: ಚುನಾವಣೆ ಶಾಂತಿಯುತ ಮತ್ತು ವ್ಯವಸ್ಥಿತವಾಗಿ ನಡೆಯಲು ಅನುವಾಗುವಂತೆ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ 1600ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಡಾ.ಮಹೇಶ್ ಚುನಾವಣಾಧಿಕಾರಿಯಾಗಿದ್ದು, ತಹಶೀಲ್ದಾರ್ ಚಂದ್ರ ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ. 1600 ಸಿಬ್ಬಂದಿಯೊಂದಿಗೆ 55 ಹೆಚ್ಚುವರಿ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ವ್ಯಾಪ್ತಿಯಲ್ಲಿ ಮೈಕ್ರೋ ವೀಕ್ಷಕರು, ಸರ್ವೇ ವಿಚಕ್ಷಣಾ ದಳ, ವೀಡಿಯೋ ಚಿತ್ರೀಕರಣ ತಂಡ, ವಿಶೇಷ ಅಧಿಕಾರಿಗಳ ತಂಡ ಸೇರಿದಂತೆ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಕರ್ತವ್ಯ ನಿರ್ವಹಿಸಲಿದ್ದಾರೆ. ಅಲ್ಲದೆ ವೀಕ್ಷಕರು ಒಟ್ಟಾರೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ನಿಗಾ ವಹಿಸಲಿದ್ದಾರೆ.
ಭದ್ರತೆಗೆ ಆದ್ಯತೆ: ಭದ್ರತೆಗೆ ಆದ್ಯತೆ ನೀಡುವ ಸಲುವಾಗಿ ಈ ಬಾರಿ ಅರೆಸೇನಾ ಪಡೆ, ಮೀಸಲು ಪೊಲೀಸ್ ಪಡೆ, ಗೃಹ ರಕ್ಷಕ ಪಡೆಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಡಿವೈಎಸ್ಪಿ ಶ್ರೀಧರ್ ಭದ್ರತಾ ಉಸ್ತುವಾರಿ ವಹಿಸಿದ್ದು, 200 ಅರೆಸೇನಾ ಯೋಧರು, 150 ಕರ್ನಾಟಕ ಪೊಲೀಸ್, 150 ಗೃಹರಕ್ಷಕ ಪಡೆ ಸಿಬ್ಬಂದಿ, ಮೀಸಲು ಪೊಲೀಸ್ ಪಡೆಯ 2 ತುಕಡಿ, ಜಿಲ್ಲಾ ಪೊಲೀಸ್ ಮೀಸಲು ಪಡೆ ಕಾರ್ಯನಿರ್ವಹಿಸಲಿದೆ. ಅಲ್ಲದೆ 3 ಮಂದಿ ವೃತ್ತ ಆರಕ್ಷಕ ನಿರೀಕ್ಷಕರು, 20 ಮಂದಿ ಸಹಾಯಕ ಆರಕ್ಷಕರು, ಡಿವೈಎಸ್ಪಿ ಮತ್ತು ಐಪಿಎಸ್ ದರ್ಜೆಯ ಅಧಿಕಾರಿ ಭದ್ರತಾ ಉಸ್ತುವಾರಿ ವಹಿಸಿದ್ದಾರೆ.
ಮತಗಟ್ಟೆಗಳಿಗೆ ಸಿಬ್ಬಂದಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ತಾಲೂಕು ಆಡಳಿತ ಮತ್ತು ಚುನಾವಣಾ ವೀಕ್ಷಕರ ಮೂಲಕ ನಿರ್ದೇಶನ ನೀಡಲಾಯಿತು. ಅಧಿಕಾರಿಗಳು ಚುನಾವಣಾ ಸಿಬ್ಬಂದಿಯಿಂದ ಮತದಾನ ಪ್ರಕ್ರಿಯೆಗೆ ಬೇಕಾದ ಎಲೆಕ್ಟ್ರಾನಿಕ್ ಮತಯಂತ್ರ, ಮತದಾರರ ವಿವರ, ಮತಪತ್ರ, ಅಭ್ಯರ್ಥಿಗಳ ವಿವರ, ಶಾಹಿ ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನು ಪಡೆದು ಪರಿಶೀಲಿಸಿದರು. ನಂತರ ಅವರವರಿಗೆ ನಿಯೋಜಿಸಲಾಗಿದ್ದ ಮತಗಟ್ಟೆಗಳಿಗೆ ಸರ್ಕಾರಿ ವಾಹನದಲ್ಲಿ ತೆರಳಲು ವ್ಯವಸ್ಥೆ ಮಾಡಲಾಗಿತ್ತು.
ಈ ಬಾರಿ ದೊಡ್ಡಬಳ್ಳಾಪುರದ ಚುನಾವಣಾ ಕಾರ್ಯಕ್ಕೆ ಬೆಂ.ಗ್ರಾ.ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆ ಸೇರಿದಂತೆ ಎಲ್ಲ 4 ತಾಲೂಕುಗಳ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ. ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧ್ಯಕ್ಷಾಧಿಕಾರಿ, 1ನೇ ಮತ್ತು 2ನೇ ಮತಗಟ್ಟೆ ಅಧಿಕಾರಿ, ಗ್ರೂಪ್ ಡಿ ಸಿಬ್ಬಂದಿ, ಪೊಲೀಸ್ ಪೇದೆ, ಹೋಂಗಾರ್ಡ್ ಸೇರಿದಂತೆ ಕನಿಷ್ಠ 8 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ತಾಲೂಕು ಆಡಳಿತ ಕೈಗೊಂಡಿದೆ. ಇದಲ್ಲದೆ ನಗರಸಭೆ ಹಂತದಲ್ಲಿ ಒಬ್ಬ ವೀಕ್ಷಕರು, ಒಬ್ಬ ಚುನಾವಣಾಧಿಕಾರಿಗಳು, 8 ಮಂದಿ ಉಪ ಚುನಾವಣಾಧಿಕಾರಿಗಳು, ಆರ್‌ಓಗಳು ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಮತಗಟ್ಟೆ ತಲುಪಿರುವ ಅಧಿಕಾರಿಗಳು ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.