ಬೆಂಗಳೂರು ಗ್ರಾಮಾಂತರ

ಚನ್ನಪಟ್ಟಣ ಬಿಜೆಪಿ ಪಾಳಯದಲ್ಲಿ ತೀವ್ರ ಕಲಹ

Published On :

ಕ.ಪ್ರ.ವಾರ್ತೆ  ಚನ್ನಪಟ್ಟಣ  ಮೇ 4
ಮತದಾನದ ಮುನ್ನಾ ದಿನವಾದ ಶನಿವಾರ ಬಿಜೆಪಿ ಪಾಳಯದಲ್ಲಿ ಕಲಹ ಆರಂಭಗೊಂಡಿದ್ದು, ಪಕ್ಷದ ಅಭ್ಯರ್ಥಿ ಮತ್ತು ತಾಲೂಕು ಅಧ್ಯಕ್ಷರ ನಡುವೆ ಬಹಿರಂಗವಾಗೇ ವಾಕ್ಸಮರ ನಡೆದಿದೆ.
ಪಕ್ಷದ ಅಭ್ಯರ್ಥಿ ರವಿಕುಮಾರ್ ಗೌಡ ಸಮಾಜವಾದಿ ಪಕ್ಷದ ಅಭ್ಯರ್ಥಿ ಯೋಗೇಶ್ವರ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿ ತಾಲೂಕು ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
ಪಟ್ಟಣದ ಒಂದನೇ ಅಡ್ಡರಸ್ತೆಯಲ್ಲಿರುವ ರವಿಕುಮಾರ್‌ಗೌಡ ಕಚೇರಿಯ ಬಳಿ ಜಮಾಯಿಸಿದ ಆನಂದಸ್ವಾಮಿ ಬೆಂಬಲಿಗರು ಕಳೆದ ರಾತ್ರಿ ಯೋಗೇಶ್ವರ್ ಜತೆ ಮಾತುಕತೆ ನಡೆಸಿದ್ದು ಇದೇ ಕಾರಣಕ್ಕೆ ನೀವು ಭೂತ್ ಖರ್ಚಿಗೆ ಹಣ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಯೋಗೇಶ್ವರ್ ವಿರುದ್ಧ ನಾವು ಜನಾದೇಶ ಪಡೆಯಬೇಕೆಂಬ ಕಾರಣಕ್ಕೆ ನಿಮ್ಮ ಜತೆಗಿದ್ದೆವು. ಆದರೆ ನೀವು ಇದೀಗ ಇಂತಹ ಕೃತ್ಯಕ್ಕೆ ಮುಂದಾಗಿರುವುದು ಸರಿಯಲ್ಲ, ನಮ್ಮನ್ನು ನಡುನೀರಿನಲ್ಲಿ ಮುಳುಗಿಸಿದಿರಿ ಎಂದು ಆಪಾದಿಸಿದರು.
ಪ್ರತ್ಯಾರೋಪ: ಇತ್ತ ರವಿರಕುಮಾರ್ ಗೌಡ ಬೆಂಬಲಿಗರು ಆನಂದಸ್ವಾಮಿ ಬಣ ಜೆಡಿಎಸ್‌ನೊಂದಿಗೆ ಒಳಒಪ್ಪಂದ ಮಾಡಿಕೊಂಡು ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ನಡೆಸಿದರು. ಅವರು ಕೇಳಿದಷ್ಟು ಹಣವನ್ನು ನಾವು ಕೊಡಲು ಸಾಧ್ಯವಿಲ್ಲ, ನಮ್ಮ ಅಭ್ಯರ್ಥಿ ತನ್ನ ಬಳಿ ಇರುವಷ್ಟು ಹಣವನ್ನು ಕೊಡುತ್ತಾರೆ. ಪ್ರತಿ ಭೂತ್‌ಗೆ ಲಕ್ಷಾಂತರ ರು. ಹಣ ಸುರಿಯಲು ಇವರ ಬಳಿ ಹಣ ಎಲ್ಲಿದೆ ಎಂದು ರವಿಕುಮಾರ್ ಗೌಡ ಬೆಂಬಲಿಗರು ಸಮಾಜಾಯಿಷಿ ನೀಡಿದರು.
ಆನಂದಸ್ವಾಮಿ ಬಣದ ಸಭೆ: ಬಿಜೆಪಿಯಲ್ಲಿ ನಡೆದ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದೇನು ಎಂಬ ಬಗ್ಗೆ ಚರ್ಚಿಸಲು ಸಭೆ ನಡೆಸಿದ  ಆನಂದಸ್ವಾಮಿ ಬೆಂಬಲಿಗರು ಯೋಗೇಶ್ವರ್‌ಗೆ ಸೆಡ್ಡು ಹೊಡೆಯಲು ಮುಂದೆ ಅನುಸರಿಸ ಬೇಕಾದ ಕಾರ್ಯತಂತ್ರಗಳ ಬಗ್ಗೆ ಚಿಂತನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.