ಕುಣಿದ ಕಾಂಚಾಣ, ಮತದಾರ ಏಕ್ದಿನ್ ಕಾ ಸುಲ್ತಾನ
ಕೆ.ಆರ್. ರವಿಕಿರಣ್
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮೇ 5
ಐನೂರಕ್ಕೆ ಚಿಲ್ಲರೆ ಇದ್ಯಾ..., ಸಾವಿರಕ್ಕೆ ಚಿಲ್ಲರೆ ಕೊಡಿ ಪ್ಲೀಸ್..., ವೋಟಿಗೆ ಇನ್ನೂರಷ್ಟೇ ಕೊಡ್ತಿರೋದು..; ಅವ್ರು ಐನೂರು ಕೊಟ್ಟಿದ್ದಾರೆ, ಇಲ್ಲಿ ಇನ್ನೂರೇ ಹಂಚ್ತಾವ್ರೆ... ಇವು ದೊಡ್ಡಬಳ್ಳಾಪುರ ಕ್ಷೇತ್ರದ ಹಲವು ಬಡಾವಣೆಗಳು, ಗ್ರಾಮಗಳಲ್ಲಿ ಮತದಾನ ದಿನ ಭಾನುವಾರ ಕಿವಿಗೆ ಬಿದ್ದ ಮಾತುಗಳು.
ಶನಿವಾರವೇ ಅಭ್ಯರ್ಥಿಗಳು, ಬೆಂಬಲಿಗರು, ಕಾರ್ಯಕರ್ತರು ಮತದಾರರಿಗೆ ಭರ್ಜರಿ ಹಣದ ಆಮಿಷ ಒಡ್ಡಿದ್ದರು. ಕೆಲವರಂತೂ ಶನಿವಾರ ಸಂಜೆ ವೇಳೆಗೆ ಮತದಾರರ ಮನೆ ಬಾಗಿಲಿಗೆ ಹಣ ತಲುಪಿಸಿದ್ದರು. ಆದರೆ ಕೆಲವು ಬಡಾವಣೆಗಳಲ್ಲಿ ಮಾತ್ರ ಹಣ ಹಂಚಿಕೆದಾರರಿಗಾಗಿ ಕಾಯುತ್ತಿದ್ದ ಜನ ಮತಗಟ್ಟೆಗಳಿಗೆ ಹೋಗಲು ಮೀನಮೇಷ ಎಣಿಸುತ್ತಿದ್ದ ದೃಶ್ಯ ಕಂಡುಬಂತು.
ನೂರು ರುಪಾಯಿಯ ನೋಟುಗಳಿಗೆ ಬೇಡಿಕೆ ಹೆಚ್ಚಿತ್ತು. ಅಂಗಡಿಗಳಲ್ಲಿ ಬಂದು ವ್ಯಾಪಾರ ಮಾಡುವವರಿಗಿಂತ 1000, 500ಕ್ಕೆ ಚಿಲ್ಲರೆ ಕೇಳುವವರ ಸಂಖ್ಯೆಯೇ ಹೆಚ್ಚಿತ್ತು ಎನ್ನುತ್ತಾರೆ ಇಲ್ಲಿನ ಮುಕ್ತಾಂಬಿಕಾ ರಸ್ತೆಯ ವ್ಯಾಪಾರಿ ನಾಗರಾಜ್.
ಕುರುಡು ಕಾಂಚಾಣ ಕುಣಿಯುತಲಿತ್ತು..: ಈ ಬಾರಿಯ ಚುನಾವಣೆಯಲ್ಲಿ ಎಲ್ಲ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೂ ಮತದಾರರಿಗೆ ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕ್ಷೇತ್ರದಲ್ಲಿ ಹಣ ಹಂಚಿಕೆ ಯಾವುದೇ ಎಗ್ಗಿಲ್ಲದೆ ನಡೆದಿದೆ. ಚುನಾವಣಾ ಆಯೋಗ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಚುನಾವಣೆಗೆ ಮುನ್ನಾ ದಿನವೇ ಹಣ ಹಂಚಿಕೆ ಬಗ್ಗೆ ದೂರುಗಳು ಚುನಾವಣಾಧಿಕಾರಿಗಳ ಗಮನಕ್ಕೆ ಬಂದರೂ ಸೂಕ್ತ ಕ್ರಮ ಕೈಗೊಳ್ಳುವ ಮನಸು ಮಾಡಿಲ್ಲ. ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ಬಗ್ಗೆ ಮಾತನಾಡುವ ಪ್ರಾಜ್ಞ ನಾಗರಿಕರಿಗೆ ಇದೊಂದು ದೊಡ್ಡ ಕಸಿವಿಸಿಯ ಪ್ರಶ್ನೆಯಾಗಿತ್ತು. ಕೆಲವೆಡೆ ಮಧ್ಯವರ್ತಿಗಳು ಅಭ್ಯರ್ಥಿಗಳು ಕೊಟ್ಟ ಹಣವನ್ನು ಮತದಾರರಿಗೆ ಹಂಚಿಲ್ಲ ಎಂಬ ಆರೋಪ ಕೂಡ ಬೀದಿ ವಿಷಯವಾಗಿ ಚರ್ಚೆಯಲ್ಲಿತ್ತು.
ಖರೀದಿಯಲ್ಲಿ ಮಹಿಳೆಯರು ಬ್ಯುಸಿ: ಭಾನುವಾರ ಬೆಳಗ್ಗಿನಿಂದಲೇ ದೊಡ್ಡಬಳ್ಳಾಪುರ ನಗರದ ಬಹುತೇಕ ಗೃಹೋಪಯೋಗಿ ವಸ್ತುಗಳ ಅಂಗಡಿಗಳಲ್ಲಿ ಜನಜಾತ್ರೆ ಕಂಡು ಬಂತು. ಎಲೆಕ್ಷನ್ ಹಣದಲ್ಲಿ ಹೊಸ ವಸ್ತುಗಳ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದರು. ಸ್ಟೀಲ್ ಪಾತ್ರೆ ಅಂಗಡಿಗಳು, ಕುಕ್ಕರ್, ಮಿಕ್ಸರ್, ಟಿವಿ, ರೆಫ್ರಿಜಿರೇಟರ್ ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳಿಗೆ ಬೇಡಿಕೆ ಇತ್ತು. ಮಾರಾಟಗಾರರೊಬ್ಬರು ನೀಡಿರುವ ಮಾಹಿತಿಯಂತೆ ಸೀಲಿಂಗ್ ಫ್ಯಾನ್ ಮತ್ತು ಟೇಬಲ್ ಫ್ಯಾನ್ಗಳಿಗೆ ಭಾನುವಾರ ಎಲ್ಲಿಲ್ಲದ ಬೇಡಿಕೆ ಬಂದಿತ್ತು. ಬೇಸಿಗೆ ಕಾಲವಾಗಿರುವುದರಿಂದ ಮಹಿಳೆಯರು ಹೆಚ್ಚಾಗಿ ಫ್ಯಾನ್ಗಳ ಖರೀದಿಗೆ ಆದ್ಯತೆ ನೀಡಿದ್ದರು.
ದಾಖಲೆ ಮೊಬೈಲ್ ಮಾರಾಟ: ದೊಡ್ಡಬಳ್ಳಾಪುರದಲ್ಲಿ ಶನಿವಾರ ಮತ್ತು ಭಾನುವಾರ ದಾಖಲೆಯ ಮೊಬೈಲ್ಗಳು ಮಾರಾಟವಾಗಿವೆ. ಕೆಲ ಅಂಗಡಿಗಳ ಮಾಲೀಕರು ಹೇಳುವಂತೆ ವ್ಯಾಪಾರ ಭರಾಟೆ ಕಳೆದ 2 ದಿನಗಳಲ್ಲಿ ಶೇ.200ರಷ್ಟು ಹೆಚ್ಚಿತ್ತು. ದಿನಕ್ಕೆ 10 ಮೊಬೈಲ್ ಮಾರಾಟವಾಗುವ ಅಂಗಡಿಗಳಲ್ಲಿ 50 ಮೊಬೈಲ್ಗಳು ಮಾರಾಟವಾಗಿವೆ ಎನ್ನುತ್ತಾರೆ. ಇದೂ ಅಲ್ಲದೆ ಎಲೆಕ್ಷನ್ ಹಣದಲ್ಲಿ ಕರೆನ್ಸಿ ರೀಚಾರ್ಜ್ ಕೂಡ ಜೋರಾಗಿಯೇ ನಡೆದಿದೆ.
ಚುನಾವಣಾ ಹಣದಲ್ಲಿ ಹಲವೆಡೆ ಪಾರ್ಟಿಗಳೂ ನಡೆದಿವೆ. ಬಾರ್ ಮತ್ತು ರೆಸ್ಟೋರೆಂಟ್ಗಳು ಚುನಾವಣಾ ನಿಮಿತ್ತ ಬಂದ್ ಮಾಡಿದ್ದರೂ ಕೆಲವೆಡೆ ಕಾಳಸಂತೆಯಲ್ಲಿ ಮದ್ಯ ಮಾರಾಟ ನಡೆದಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಯ ಒಂದು ಹಂತ ಮುಗಿದಿದೆ. ಆಯೋಗ ಎಷ್ಟೇ ಅಕ್ರಮಗಳ ನಿಯಂತ್ರಣಕ್ಕೆ ಕ್ರಮ ವಹಿಸಿದರೂ ಚಾಣಾಕ್ಷ ಭ್ರಷ್ಟಾಚಾರಿಗಳು ಹಣದ ಹೊಳೆ ಹರಿಸಿದ್ದಾರೆ. ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಅನ್ನೋ ಹಾಗೇ ಮತದಾರರು ಬಿಟ್ಟಿಯಾಗಿ ಬಂದ ಹಣದಲ್ಲಿ ವಸ್ತುಗಳ ಖರೀದಿಗೆ ಮುಗಿಬಿದ್ದದ್ದು ನಿರೀಕ್ಷಿತವೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

