ದೊಡ್ಡಬಳ್ಳಾಪುರದಲ್ಲಿ ಸಂಪೂರ್ಣ ಶಾಂತಿಯುತ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಮೇ 5
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಭಾನುವಾರ ನಡೆದ ಚುನಾವಣೆ ಸಂಪೂರ್ಣ ಶಾಂತಿಯುತವಾಗಿ ಕೊನೆಗೊಂಡಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ. ಬೆಳಗ್ಗೆ ನೀರಸವಾಗಿ ಆರಂಭಗೊಂಡ ಮತದಾನ ನಂತರ ಬಿರುಸಿನಿಂದ ನಡೆಯಿತು. ಮಧ್ಯಾಹ್ನದ ವೇಳೆ ಮತ್ತೆ ಮತದಾನ ನೀರಸವಾಗಿತ್ತು. ಆದರೆ ಸಂಜೆ 4 ಗಂಟೆ ನಂತರ ಜನ ತಂಡೋಪತಂಡವಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು.
ಈ ಬಾರಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಬಳ್ಳಾಪುರ ನಗರ, ಸಾಸಲು, ದೊಡ್ಡಬೆಳವಂಗಲ, ಕಸಬಾ ಮತ್ತು ಮಧುರೆ ಹೋಬಳಿಗಳಲ್ಲಿ ಒಟ್ಟು 232 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅವುಗಳಲ್ಲಿ 39 ಅತಿಸೂಕ್ಷ್ಮ, 60 ಸೂಕ್ಷ್ಮ ಮತ್ತು 129 ಸಾಮಾನ್ಯ ಮತಗಟ್ಟೆಗಳಾಗಿದ್ದವು. ಕ್ಷೇತ್ರದಲ್ಲಿ ಒಟ್ಟು 1.82.630 ಮತದಾರರಿದ್ದು, ಅದರಲ್ಲಿ 93700 ಪುರುಷರು ಮತ್ತು 88930 ಮಹಿಳೆಯರು ಮತದಾನದ ಹಕ್ಕು ಹೊಂದಿದ್ದರು.
ಗಣ್ಯರ ಮತದಾನ: ದೊಡ್ಡಬಳ್ಳಾಪುರ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ತಮ್ಮ ಕುಟುಂಬ ಸಹಿತ ಬಂದು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆಯಲ್ಲಿ ಮತಚಲಾಯಿಸಿದರು. ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಹಣಬೆ ಗ್ರಾಮದ ಮತಗಟ್ಟೆಯಲ್ಲಿ ಮತಚಲಾಯಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಯ್ಯ ಹುಲುಕುಂಟೆ ಮತಗಟ್ಟೆಯಲ್ಲಿ ಮತದಾನ ಮಾಡಿದರು. ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮತ್ತು ಪಕ್ಷೇತರ ಅಭ್ಯರ್ಥಿ ಬಿ.ಮುನೇಗೌಡ, ಸಿಪಿಐ(ಎಂ) ಅಭ್ಯರ್ಥಿ ಆರ್.ಚಂದ್ರತೇಜಸ್ವಿ, ಬಿಎಸ್‌ಆರ್ ಪಕ್ಷದ ಅಭ್ಯರ್ಥಿ ಕುಮಾರ್ ಮತ್ತು ಹಲವು ಗಣ್ಯರು ದೊಡ್ಡಬಳ್ಳಾಪುರ ನಗರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಕೆಲ ಮತಗಟ್ಟೆಗಳಲ್ಲಿ ವಿಕಲಚೇತನರು, ವೃದ್ಧರು ಉತ್ಸಾಹದಿಂದ ಆಗಮಿಸಿ ಮತದಾನ ಮಾಡಿದ್ದು ಮಾದರಿಯಾಗಿತ್ತು.
ಮಜ್ಜಿಗೆ ವಿತರಣೆ: ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮತದಾನಕ್ಕೆ ಬರುವ ಮತದಾರರಿಗೆ ಮಜ್ಜಿಗೆ ವಿತರಣೆ ಹಲವೆಡೆ ನಡೆಯಿತು. ಕೆಲವೆಡೆ ಸ್ವಯಂ ಸೇವಾ ಸಂಘಟನೆಗಳು ಈ ಕಾರ್ಯ ಕೈಗೊಂಡಿದ್ದರೆ, ಕೆಲವೆಡೆ ಅಭ್ಯರ್ಥಿಗಳ ಬೆಂಬಲಿಗರು, ಕಾರ್ಯಕರ್ತರು ಮಜ್ಜಿಗೆ ವಿತರಣೆಯಲ್ಲಿ ತೊಡಗಿದ್ದರು. ಮತದಾನ ಕೇಂದ್ರಗಳ ಮುಂದೆ ವಿವಿಧ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ನೆರೆದು ಅಂತಿಮ ಹಂತದ ಮತದಾರರ ಓಲೈಕೆಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ವ್ಯವಸ್ಥಿತ ಭದ್ರತೆ: ಚುನಾವಣೆ ಶಾಂತಿಯುತ ಮತ್ತು ವ್ಯವಸ್ಥಿತವಾಗಿ ನಡೆಯಲು ಅನುವಾಗುವಂತೆ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ 1600ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮತಗಟ್ಟೆ ವ್ಯಾಪ್ತಿಯಲ್ಲಿ ಮೈಕ್ರೋ ವೀಕ್ಷಕರು, ಸರ್ವೇ ವಿಚಕ್ಷಣಾ ದಳ, ವೀಡಿಯೋ ಚಿತ್ರೀಕರಣ ತಂಡ, ವಿಶೇಷ ಅಧಿಕಾರಿಗಳ ತಂಡ ಸೇರಿದಂತೆ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಕರ್ತವ್ಯ ನಿರ್ವಹಿಸಿದರು.ಅಲ್ಲದೆ ವೀಕ್ಷಕರು ಹಲವು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಭದ್ರತೆಗೆ ಆದ್ಯತೆ ನೀಡುವ ಸಲುವಾಗಿ ಈ ಬಾರಿ ಅರೆಸೇನಾ ಪಡೆ, ಮೀಸಲು ಪೊಲೀಸ್ ಪಡೆ, ಗೃಹ ರಕ್ಷಕ ಪಡೆಗಳನ್ನೂ ಬಳಸಿಕೊಳ್ಳಲಾಗಿತ್ತು.200 ಅರೆಸೇನಾ ಯೋಧರು, 150 ಕರ್ನಾಟಕ ಪೊಲೀಸ್, 150 ಗೃಹರಕ್ಷಕ ಪಡೆ ಸಿಬ್ಬಂದಿ, ಮೀಸಲು ಪೊಲೀಸ್ ಪಡೆಯ 2 ತುಕಡಿ, ಜಿಲ್ಲಾ ಪೊಲೀಸ್ ಮೀಸಲು ಪಡೆ ಕಾರ್ಯನಿರ್ವಹಿತು. ಅಲ್ಲದೆ 3 ಮಂದಿ ವೃತ್ತ ಆರಕ್ಷಕ ನಿರೀಕ್ಷಕರು, 20 ಮಂದಿ ಸಹಾಯಕ ಆರಕ್ಷಕರು, ಡಿವೈಎಸ್ಪಿ ಮತ್ತು ಐಪಿಎಸ್ ದರ್ಜೆಯ ಅಧಿಕಾರಿ ಭದ್ರತಾ ಉಸ್ತುವಾರಿ ವಹಿಸಿದ್ದರು. ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧ್ಯಕ್ಷಾಧಿಕಾರಿ, 1ನೇ ಮತ್ತು 2ನೇ ಮತಗಟ್ಟೆ ಅಧಿಕಾರಿ, ಗ್ರೂಪ್ ಡಿ ಸಿಬ್ಬಂದಿ, ಪೊಲೀಸ್ ಪೇದೆ, ಹೋಂಗಾರ್ಡ್ ಸೇರಿದಂತೆ ಕನಿಷ್‌ಠ 8 ಮಂದಿ ಸಿಬ್ಬಂದಿಯನ್ನು ನಿಯೋಜಿಸಿ ಶಾಂತಿಯುತ ಚುನಾವಣೆಗೆ ಆದ್ಯತೆ ನೀಡಲಾಗಿತ್ತು.
ಪ್ರಯಾಣಿಕರ ಪರದಾಟ
ಸಾರಿಗೆ ಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಂಡಿದ್ದ ಹಿನ್ನೆಲೆಯಲ್ಲಿ ಹೆದ್ದಾರಿ ಸಹಿತ ಗ್ರಾಮೀಣ ಮಾರ್ಗಗಳಲ್ಲಿ ಪ್ರಯಾಣಿಕರು ಪರದಾಡಿದರು. ಹೆದ್ದಾರಿಯಲ್ಲೇ ಬಸ್ ಟಾಪ್ ಪ್ರಯಾಣ ಕಂಡುಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

