ಬೆಂಗಳೂರು ಗ್ರಾಮಾಂತರ

ಬೈಕ್-ಕಾರು ಡಿಕ್ಕಿ; ದಂಪತಿ ಸಾವು, ಮಗು ಗಾಯ

Published On :

ಕ.ಪ್ರ.ವಾರ್ತೆ   ದೇವನಹಳ್ಳಿ   ಮೇ 5
ಬೈಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಆತನ ಪತ್ನಿ ದಾರುಣ ಸಾವಿಗೀಡಾಗಿ ದಂಪತಿಯ ಮಗು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ದೇವನಹಳ್ಳಿ- ಬೆಂಗಳೂರು ರಸ್ತೆಯ ಚಿಕ್ಕಸಣ್ಣೆ ಗೇಟ್ ಬಳಿ ನಡೆದಿದೆ.
ದೇವನಹಳ್ಳಿ- ಬೆಂಗಳೂರು ರಸ್ತೆಯ ಚಿಕ್ಕಸಣ್ಣೆ ಗೇಟ್ ಬಳಿ ಪತಿ, ಪತ್ನಿ ತಮ್ಮ ಮಗುವಿನೊಂದಿಗೆ ಬೈಕ್‌ನಲ್ಲಿ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಹಾಗೂ ಮಗು ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಪತಿ, ಪತ್ನಿ ಇಬ್ಬರೂ ಸಾವಿಗೀಡಾಗಿದ್ದಾರೆ. ಮುನಿಗೋಪಾಲ್(ಗೋಪಿ, 34), ಪತ್ನಿ ಅನಿತ (28) ಸಾವಿಗೀಡಾದ ದುರ್ದೈವಿ ದಂಪತಿ. ಇವರ 6 ವರ್ಷದ ಮಗು ಧನುಷ್‌ಗೌಡನಿಗೆ ತಲೆ ಮತ್ತು ಕಾಲಿಗೆ ಪೆಟ್ಟಾಗಿದ್ದು, ಬೆಂಗಳೂರಿನ ಬಾಪ್ಟಿಸ್ಟ್ ಆಸ್ಪತ್ರೆಗೆ ಸೇರಿಸಲಾಗಿದೆ.
ಪೊಲೀಸರ ಅಮಾನವೀಯತೆ: ಅಪಘಾತ ನಡೆದಾಗ ಹತ್ತಿರದಲ್ಲೇ ಇಂಟರ್‌ಸೆಪ್ಟರ್ ವಾಹನದಲ್ಲಿದ್ದ ಪೊಲೀಸರು ಗಾಯಗೊಂಡವರ ಬಗ್ಗೆ ನಿರ್ಲಕ್ಷ್ಯ ವಹಿಸಿ, ಗಾಯಾಳುಗಳನ್ನು ನಿಮ್ಮ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿರಿ ಎಂದು ಗ್ರಾಮಸ್ಥರು ಗೋಗರೆದರೂ 108 ವಾಹನಕ್ಕಾಗಿ ಕಾದಿದ್ದಾರೆ. ಇದಾಗಿ ಸುಮಾರು 30 ನಿಮಿಷ ಕಳೆದರೂ ಗಾಯಾಳುಗಳು ನೆಲದ ಮೇಲೆಯೇ ಬಿದ್ದಿದ್ದರಿಂದ ಗಾಯಾಳುಗಳನ್ನು ಇಂಟರ್‌ಸೆಪ್ಟರ್ ವಾಹನದೊಳಗೆ ಇಟ್ಟುಕೊಂಡು ಮತ್ತೆ ರಸ್ತೆಯಮೇಲೆ ಮಲಗಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಸ್ಥಳಕ್ಕೆ ಆಗಮಿಸಿದ ಸುವರ್ಣ ಕರ್ನಾಟಕ ವೇದಿಕೆಯವರು ಪೋಲೀಸರ ವಿರುದ್ದ ತಿರುಗಿಬಿದ್ದರು. ಪೋಲೀಸರ ನಿರ್ಲಕ್ಷ್ಯ ಖಂಡಿಸಿ ಸುಮಾರು ಒಂದು ಗಂಟೆ ಕಾಲ ಗ್ರಾಮಸ್ಥರು ಹಾಗೂ ಸುವರ್ಣ ಕರ್ನಾಟಕ ವೇದಿಕೆ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ತಹಸೀಲ್ದಾರ್ ಡಾ.ವೆಂಕಟರಾಜು, ಹಿರಿಯ ಪೊಲೀಸ್ ಅಧಿಕಾರಿಗಳಾದ ಎಸಿಪಿ ಆರ್.ಎನ್.ನಟರಾಜ್‌ರವರು ಆಗಮಿಸಿ ದಂಪತಿಗಳ ಸಾವಿಗೆ ಪರೋಕ್ಷವಾಗಿ ಕಾರಣಕರ್ತರಾದ ಪೊಲೀಸರ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸಾವಿಗೀಡಾದ ದಂಪತಿಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ ನಂತರ ವಾಹನಗಳ ಸಂಚಾರ ಮತ್ತೆ ಆರಂಭಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.