ಬೆಂಗಳೂರು ಗ್ರಾಮಾಂತರ

ಜಿದ್ದಾಜಿದ್ದಿನ ಚುನಾವಣೆ ಶಾಂತಿಯುತ ಅಂತ್ಯ

Published On :

ಕ.ಪ್ರ. ವಾರ್ತೆ   ಚನ್ನಪಟ್ಟಣ   ಮೇ 5
ಜಿದ್ದಾಜಿದ್ದಿನ ಚುನಾವಣೆಯಲ್ಲಿ ಶಾಂತಿಯುತವಾಗಿ ಅಂತ್ಯಗೊಂಡು ತಾಲೂಕಿನಾದ್ಯಂತ ಶೇ.80 ರಷ್ಟು ಮತದಾನ ನಡೆದಿದೆ.
ಅನಿತಾಕುಮಾರಸ್ವಾಮಿ, ಮಾಜಿ ಸಚಿವ ಯೋಗೇಶ್ವರ್, ಮಾಜಿ ಶಾಸಕ ಸಾದತ್ ಆಲಿಖಾನ್, ರವಿಶಂಕರ್ ಗುರೂಜಿ ಆಪ್ತಕಾರ್ಯದರ್ಶಿ ರವಿಕುಮಾರ್ ಗೌಡ ಸೇರಿದಂತೆ ಘಟಾನುಘಟಿಗಳ ಭವಿಷ್ಯ ಮತ ಯಂತ್ರದಲ್ಲಿ ಭದ್ರವಾಗಿದೆ.
ಬಿರುಸಿನ ಮತದಾನ: ಈಬಾರಿಯ ವಿಧಾನ ಸಭಾ ಚುನಾವಣೆಗೆ ಗ್ರಾಮೀಣ ಪ್ರದೇಶದ ಮತದಾರರು ಹೆಚ್ಚಿನ ಉತ್ಸಾಹ ತೋರಿದ್ದರೆ, ನಗರ ಪ್ರದೇಶದ ಮತದಾರರು ನಿರುತ್ಸಾಹ ತೋರಿದರು.
ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭ ಗೊಳ್ಳುತ್ತಿದ್ದಂತೆ ಮತಗಟ್ಟೆಗಳ ಮುಂದೆ ಮತದಾರರ ಸಾಲುಗಳು ಕಂಡು ಬಂದವು, ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಶೇ.12 ರಷ್ಟು ಮತದಾನ ನಡೆದಿದ್ದರೆ, ನಂತರ ಮಂದಗತಿಯಲ್ಲಿ ನಡೆದ ಮತದಾನ 12ರ ಸುಮಾರಿಗೆ ಶೇ.20 ರಷ್ಟು ನಡೆದಿತ್ತು, ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶೇ. 48ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಶೇ. 75 ರಷ್ಟು ನಡೆದಿದ್ದ ಮತದಾನ ಸಂಜೆ 5ರ ಸುಮಾರಿಗೆ ಶೇ.74ಕ್ಕೆ ತಲುಪಿ ಮತದಾನ ಮುಕ್ತಾಯಗೊಂಡ ವೇಳೆಗೆ ಶೇ.80ರಷ್ಟು ಚಲಾವಣೆ ಗೊಂಡಿತು.
ಸಾಲುಗಟ್ಟಿ ಮತದಾನ: ಈಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ಉತ್ಸಾಹ ತೋರಿದ ಗ್ರಾಮೀಣ ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ್ದು ಕಂಡು ಬಂದಿತು. ಕೆಲ ಗ್ರಾಮಗಳಲ್ಲಿ  ಮಧ್ಯಾಹ್ನ ಕಳೆದರೂ ಮತದಾರರ ಸಾಲುಗಳು ಕರಗಿರಲಿಲ್ಲ.
ಮಹಿಳೆಯರು, ವೃದ್ಧರು ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡು ಬಂದಿತು, ಅಶಕ್ತರನ್ನು ಅವರ ಕುಟುಂಬದವರು ಮತಗಟ್ಟೆಗೆ ಕರೆದು ತಂದು ಮತಚಲಾಯಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು.
ಪ್ರಮುಖರ ಮತಚಲಾವಣೆ: ಈಬಾರಿಯ ಚುನಾವಣೆಯಲ್ಲಿ ಚಕ್ಕೆರೆ ಮತಘಟ್ಟೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಯೋಗೇಶ್ವರ್ ಮತಚಲಾಯಿಸಿದರೆ, ಹೊಟ್ಟಿಗನಹೊಸಹಳ್ಳಿ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರವಿಕುಮಾರ್ ಗೌಡ ತಮ್ಮ ಪತ್ನಿಯೊಂದಿಗೆ ತೆರಳಿ ಮತಚಲಾಯಿಸಿದರು, 26 ನೇವಾರ್ಡ್‌ನ ಮತಘಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾದತ್ ಆಲಿಖಾನ್, ಕನಕನಗರದಲ್ಲಿ ಬಮೂಲಲ್ನಿರ್ದೇಶಕ ಎಸ್. ಲಿಂಗೇಶ್ ಕುಮಾರ್, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಮತಚಲಾಯಿಸಿದ ಪ್ರಮುಖ ರು.
ಅಭ್ಯರ್ಥಿಗಳ ಭೇಟಿ: ತಾಲೂಕಿನ ಮತಗಟ್ಟೆಗಳಿಗೆ ಅಭ್ಯರ್ಥಿಗಳು ಭೇಟಿ ನೀಡಿ ಮತದಾರರನ್ನು ಹುರಿದುಂಬಿಸುತ್ತಿದ್ದ ಸಂಗತಿ ಕಂಡು ಬಂದಿತು. ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ಸಮಾಜವಾದಿ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ದೃಶ್ಯ ಕಂಡು ಬಂದಿತು.
ಅನಿತಾ ಕುಮಾರಸ್ವಾಮಿ ಜತೆಗೆ ಅವರ ಪುತ್ರ ನಿಖಿಲ್ ಸಹ ಕೆಲ ಗ್ರಾಮಗಳಿಗೆ ತೆರಳಿ ತನ್ನ ತಾಯಿಯ ಪರ ಮತಯಾಚನೆ ಮಾಡುತ್ತಿದ್ದು ಕಂಡು ಬಂದಿತು.
ಮತಗಟ್ಟೆ ಸಮೀಪ ಇದ್ದ ಗುಂಪುಗಳನ್ನು ಪೊಲೀಸರು ಚದುರಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದಿತ್ತು,  ಕೆಲ ಮತಗಟ್ಟೆಗಳ ಬಳಿ  ಮಾತಿನ ಚಕಮಕಿ ನಡೆದಿದ್ದನ್ನು ಹೊರತು ಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯ ಗೊಂಡಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.