ಜಿಲ್ಲೆಯೆಲ್ಲೆಡೆ ಶಾಂತೋತ್ಸಾಹ ಮತದಾನ
ಕ.ಪ್ರ.ವಾರ್ತೆ ರಾಮನಗರ ಮೇ 5-
ಘಟಾನುಘಟಿ ರಾಜಕಾರಣಿಗಳ ಸ್ಪರ್ಧೆಯ ಕಾರಣಕ್ಕೆ ಗಮನ ಸೆಳೆದಿದ್ದ ಜಿಲ್ಲೆಯ ನಾಲ್ಕೂ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಮತದಾನ ಬಹುತೇಕ ಶಾಂತಯುತವಾಗಿ ನಡೆದಿದೆ. ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದಾರೆ. ಭಾನುವಾರ ಬೆಳಗ್ಗೆಯಿಂದ ಮಂದಗತಿಯಲ್ಲಿ ಪ್ರಾರಂಭಗೊಂಡ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕ ಬಿರುಸುಗೊಂಡಿತು. ಜಿಲ್ಲೆಯಲ್ಲಿ ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಅಹಿತಕರ ಘಟನೆಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿರುವುದು ವಿಶೇಷ.
ತಪ್ಪಿದ ತಾಪತ್ರಯ: ಮತದಾರರ ಭಾಗ ಸಂಖ್ಯೆ, ಕ್ರಮ ಸಂಖ್ಯೆ ಸಹಿತ ವಿವರಗಳನ್ನು ಒಳಗೊಂಡ ಚೀಟಿಯನ್ನು ಸರ್ಕಾರಿ ವ್ಯವಸ್ಥೆ ಮೂಲಕವೇ ಮನೆ ಮನೆಗೆ ತಲುಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮತಗಟ್ಟೆಗಳ ಹೊರಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಟೇಬಲ್ ಹಾಕಿಕೊಂಡು, ಚೀಟಿ ಬರೆದುಕೊಡುವ ತಾಪತ್ರಯ ತಪ್ಪಿತು.
ನಿಷೇಧಾಜ್ಞೆ ಜಾರಿ ಪರಿಣಾಮ ಮತಗಟ್ಟೆಗಳ ಹೊರಗೆ ಹಿಂದಿನಂತೆ ಪಕ್ಷಗಳ ಕಾರ್ಯಕರ್ತರು ಪೆಂಡಾಲ್ ಹಾಕಿಕೊಂಡು ಗುಂಪು ಸೇರುವುದು ಕೂಡ ಕಂಡು ಬರಲಿಲ್ಲ. ರಾಮನಗರ, ಮಾಗಡಿಗೆ ಹೋಲಿಸಿದರೆ ಚನ್ನಪಟ್ಟಣ ಮತ್ತು ಕನಕಪುರ ಕ್ಷೇತ್ರಗಳಲ್ಲಿ ಮಾತ್ರವೇ ಹೆಚ್ಚಿನ ಗುಂಪು ಕಂಡು ಬಂದಿತು.
ನೀತಿ ಸಂಹಿತೆ ಗಾಳಿಗೆ: ರಾಜಕೀಯ ಕಾರ್ಯಕರ್ತರು ಮತದಾರರನ್ನು ವಾಹನಗಳಲ್ಲಿ ಕರೆತರುವುದೂ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಇದು ಗೊತ್ತಿದ್ದಾಗ್ಯೂ ಬಹುತೇಕ ಕಡೆ ಆಟೋ, ಬೈಕ್, ಕಾರುಗಳಲ್ಲಿ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ಕರೆತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವೃದ್ಧರು, ವಿಕಲಚೇತನರನ್ನು ಸಂಬಂಧಿಕರು ಮತಗಟ್ಟೆಗೆ ಕರೆತಂದು ಮತ ಹಾಕುತ್ತಿದ್ದರು. ಕ್ರಮ ಸಂಖ್ಯೆಯುಳ್ಳ ಚೀಟಿ ವಿತರಣೆ ಪರಿಣಾಮ ಹೆಸರು ಹುಡುಕುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ಕೆಲವೆಡೆ ತಡ, ಗೊಂದಲ: ರಾಮನಗರ ಕ್ಷೇತ್ರದ ಸೂಲಿಕೆರೆ ವ್ಯಾಪ್ತಿಯ ಮತಗಟ್ಟೆಯಲ್ಲಿ ಇಬ್ಬರು ಗೃಹಿಣಿಯರ ಹೆಸರಿನ ಮುಂದೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಸರ್ಕಾರಿ ಸಿಬ್ಬಂದಿಯಾಗಿದ್ದು, ಅಂಚೆ ಮತ ಚಲಾಯಿಸಿದ್ದಾರೆ ಎಂದು ನಮೂದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮತದಾರರು ಆಕ್ಷೇಪ ವ್ಯಕ್ತಪಡಿಸಿ, ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತದಾರರ ಮನವೊಲಿಸಿದರು. ಚನ್ನಪಟ್ಟಣ ಕ್ಷೇತ್ರದ ಮತ್ತೀಕೆರೆ ಮತಗಟ್ಟೆಯಲ್ಲಿ ಪೂರ್ವಸಿದ್ಧತೆ ಹೆಚ್ಚುತಡವಾದ ಪರಿಣಾಮ ಮತದಾನ ಪ್ರಕ್ರಿಯೆ 10 ನಿಮಿಷ ವಿಳಂಬವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

